ಬೆಂಗಳೂರು,ಫೆ.2- ಕಾಂಗ್ರೆಸ್ ಅಖಂಡ ಭಾರತಕ್ಕಾಗಿ ಸಾಕಷ್ಟು ತ್ಯಾಗ, ಬಲಿದಾನ, ಹೋರಾಟ ಮಾಡಿದೆ. ಅದನ್ನು ಗಮನದಲ್ಲಿಟ್ಟುಕೊಂಡು ಭವ್ಯ ಭಾರತ ಕಲ್ಪನೆಯೊಂದಿಗೆ ನಾವು ಬದುಕಬೇಕು ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಭ್ಯರ್ಥಿಗಳ ಆಯ್ಕೆ ವಿಷಯವಾಗಿ ಹೈ ಕಮಾಂಡ್ ತೀರ್ಮಾನ ತೆಗೆದುಕೊಳ್ಳುತ್ತದೆ. ಕಾಂಗ್ರೆಸ್ ಪಕ್ಷ ವರದಿ ತರಿಸಿಕೊಂಡಿದ್ದು, ಜಿಲ್ಲಾ ಉಸ್ತುವಾರಿಗಳ ಜೊತೆಗೂ ಚರ್ಚೆ ನಡೆಸಿ ಅದನ್ನೆಲ್ಲಾ ಕ್ರೂಢೀಕರಿಸಿ ಕೇಂದ್ರ ಪರಿಶೀಲನಾ ಸಮಿತಿ ಮುಂದೆ ಮಂಡಿಸಿ ಚರ್ಚಿಸಲಾಗುತ್ತದೆ ಎಂದರು.
ಸಂಸದ ಡಿ.ಕೆ.ಸುರೇಶ್‍ರವರು ಪ್ರತ್ಯೇಕ ರಾಷ್ಟ್ರದ ಬಗ್ಗೆ ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ದೇಶದ ಐಕ್ಯತೆಗೆ ಮಹಾತ್ಮಗಾಂಯಿಂದ ಹಿಡಿದು ಸಾವಿರಾರು ಜನ ಹೋರಾಟ, ತ್ಯಾಗ, ಬಲಿದಾನ ಮಾಡಿದ್ದಾರೆ. ನಾವು ಒಗ್ಗೂಡಿಸುವ ಮಾತುಗಳನ್ನಾಡಬೇಕೇ ಹೊರತು, ಒಡೆದು ಆಳುವ ಮಾತುಗಳನ್ನಾಡಬಾರದು ಎಂದು ಹೇಳಿದರು.
ನಮ್ಮದು ಭವ್ಯವಾದ ಭಾರತ. ಪಾಕಿಸ್ತಾನ ವಿಭಜನೆ ಚರಿತ್ರೆಯನ್ನು ನೋಡಿದರೆ ಮನಸ್ಸಿಗೆ ನೋವಾಗುತ್ತದೆ. ಒಂದು ರಾಷ್ಟ್ರ, ಒಂದು ದೇಶ ಎಂದು ಬದುಕಬೇಕಾಗುತ್ತದೆ ಎಂದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವ ಸಂಪುಟ ಸಭೆಯ ಬಳಿಕ ಸಚಿವರನ್ನು ಊಟಕ್ಕೆ ಆಹ್ವಾನಿಸಿದ್ದರು. ಅಲ್ಲಿ ಲೋಕಸಭೆ ಚುನಾವಣೆ ತಯಾರಿ ವಿಚಾರವಾಗಿ ಚರ್ಚೆಯಾಗಿದೆ.
ಅಭ್ಯರ್ಥಿ ಆಯ್ಕೆ, ಮುಖ್ಯ ಸಂಘಟನೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಪಕ್ಷದ ಅಧ್ಯಕ್ಷರು ಹಾಗೂ ಶಾಸಕಾಂಗ ಪಕ್ಷದ ನಾಯಕರು ಹಲವು ಸೂಚನೆಗಳನ್ನು ನೀಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರು ಆಯಾ ಕ್ಷೇತ್ರಗಳ ಜವಾಬ್ದಾರಿ ವಹಿಸಿಕೊಂಡು ಬದ್ಧತೆಯಿಂದ ಕೆಲಸ ಮಾಡಬೇಕು ಎಂದು ಹೇಳಿದ್ದಾರೆ.
ಶಾಸಕರಾದ ಬಾಲಕೃಷ್ಣ, ಮಾಜಿ ಶಾಸಕ ಬಿ.ಶಿವರಾಂ ಅವರ ಹೇಳಿಕೆಗಳು ಪಕ್ಷದ ಹೇಳಿಕೆಗಳಲ್ಲ. ಅದು ಅವರ ವೈಯಕ್ತಿಕ ಅಭಿಪ್ರಾಯ. ಎಲ್ಲರಿಗೂ ಅವರದೇ ಆದ ಅಭಿಪ್ರಾಯಗಳಿರುತ್ತವೆ. ಪಕ್ಷದ ಹಿತದೃಷ್ಟಿಯಿಂದ ಎಲ್ಲರೂ ಮಾತನಾಡುವಾಗ ಎಚ್ಚರಿಕೆ ವಹಿಸಬೇಕೆಂದು ಹೇಳಿದರು.
ಬಿಹಾರದ ಮಾದರಿಯಲ್ಲಿ ಕರ್ನಾಟಕದಲ್ಲೂ ರಾಜಕೀಯ ಬೆಳವಣಿಗೆಗಳಾಗುತ್ತವೆ. ಸರ್ಕಾರ ಪತನವಾಗುತ್ತದೆ ಎಂದು ಕುಮಾರಸ್ವಾಮಿ ಸೇರಿದಂತೆ ಇತರ ನಾಯಕರು ಕಾದು ಕುಳಿತುಕೊಳ್ಳಲಿ ಎಂದು ಲೇವಡಿ ಮಾಡಿದರು. ಬಿಜೆಪಿಯಲ್ಲಿರುವ ಎಸ್.ಪಿ.ಮುದ್ದಹನುಮೇಗೌಡ ಕಾಂಗ್ರೆಸ್ ಸೇರುವ ಬಗ್ಗೆ ತಮಗೆ ಹೆಚ್ಚಿನ ಮಾಹಿತಿ ಇಲ್ಲ. ಪಕ್ಷದ ಅಧ್ಯಕ್ಷರ ಬಳಿ ನಮ್ಮ ವೈಯಕ್ತಿಕ ಅಭಿಪ್ರಾಯಗಳನ್ನು ತಿಳಿಸಿದ್ದೇನೆ. ಹೈಕಮಾಂಡ್ ಟಿಕೆಟ್ ನೀಡುವಾಗ ಎಲ್ಲವನ್ನೂ ಪರಿಶೀಲಿಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದು ಹೇಳಿದರು.