ಹೈದರಾಬಾದ್, ಡಿ.24- ಟಾಲಿವುಡ್ ನಟ ಅಲ್ಲು ಅರ್ಜುನ್ ನಟಿಸಿರುವ ಪುಷ್ಟ 2 ಚಿತ್ರದಲ್ಲಿ ಪೊಲೀಸ್ ಪಡೆಗೆ ಅವಮಾನ ಮಾಡಲಾಗಿದೆ ಎಂದು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರೊಬ್ಬರು ದೂರು ನೀಡಿದ್ದಾರೆ.ಕಾಂಗ್ರೆಸ್ ನ ತೀನಾರ್ ಮಲ್ಲಣ್ಣ ಅವರು ಮೇಡಿಪಲ್ಲಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನಲ್ಲಿ ನಟನಲ್ಲದೆ, ಚಿತ್ರದ ನಿರ್ದೇಶಕ ಸುಕುಮಾರ್ ಮತ್ತು ನಿರ್ಮಾಪಕರ ವಿರುದ್ಧವೂ ದೂರು ದಾಖಲಿಸಿದ್ದಾರೆ.
ಪೊಲೀಸ್ ಅಧಿಕಾರಿಯೊಬ್ಬರು ಈಜುಕೊಳದಲ್ಲಿ ನಾಯಕ ಮೂತ್ರ ವಿಸರ್ಜನೆ ಮಾಡುವ ದಶ್ಯವನ್ನು ತೇನಾರ್ ಮಲ್ಲಣ್ಣ ವಿಶೇಷವಾಗಿ ಟೀಕಿಸಿದ್ದಾರೆ. ಅ ದಶ್ಯವನ್ನು ಅಗೌರವ ಮತ್ತು ಕಾನೂನು ಜಾರಿ ಅಧಿಕಾರಿಗಳ ಘನತೆಗೆ ಕುಂದು ತಂದಿದೆ ಎಂದು ಅವರು ಆರೋಪಿಸಿದ್ದಾರೆ.
ಚಿತ್ರದ ನಿರ್ದೇಶಕ ಸುಕುಮಾರ್ ಮತ್ತು ನಾಯಕ ನಟ ಅಲ್ಲು ಅರ್ಜುನ್ ಹಾಗೂ ಚಿತ್ರದ ನಿರ್ಮಾಪಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಒತ್ತಾಯಿಸಿದ್ದಾರೆ. ಪೊಲೀಸರನ್ನು ಆಕ್ಷೇಪಾರ್ಹವಾಗಿ ಚಿತ್ರಿಸಿರುವುದನ್ನು ಪರಿಹರಿಸಲು ಅಧಿಕಾರಿಗಳು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ.
ಡಿಸೆಂಬರ್ 4 ರಂದು ಚಿತ್ರದ ಪ್ರಥಮ ಪ್ರದರ್ಶನದ ವೇಳೆ ಹೈದರಾಬಾದ್‌ನ ಚಲನಚಿತ್ರ ಮಂದಿರದಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದರು ಮತ್ತು ತೀವ್ರವಾಗಿ ಗಾಯಗೊಂಡ ಅವರ ಎಂಟು ವರ್ಷದ ಮಗ ಇನ್ನೂ ಕೋಮಾದಲ್ಲಿದ್ದಾರೆ.
ಪೊಲೀಸ್ ಅನುಮತಿ ನಿರಾಕರಣೆ ನಡುವೆಯೂ ಪ್ರೀಮಿಯರ್‌ಗೆ ಹಾಜರಾಗಿದ್ದ ಅಲ್ಲು ಅರ್ಜುನ್ ಅವರನ್ನು ಬಂಧಿಸಲಾಗಿದ್ದು, ಸದ್ಯ ಜಾಮೀನಿನ ಮೇಲೆ ಹೊರಗಿದ್ದಾರೆ. ಮಹಿಳೆಯ ಪತಿ ಭಾಸ್ಕರ್ ಅವರು, ನಟನ ವಿರುದ್ಧದ ಪ್ರಕರಣವನ್ನು ಕೈಬಿಡಲು ಸಿದ್ಧ ಎಂದು ಹೇಳುತ್ತಿದ್ದರೆ, ರಾಜ್ಯ ಪೊಲೀಸರು ಅಲ್ಲು ಅರ್ಜುನ್‌ಗೆ ಹೊಸ ನೋಟಿಸ್ ಜಾರಿಗೊಳಿಸಿದ್ದು, ಇಂದು ವಿಚಾರಣೆಗೆ ಹಾಜರಾಗುವಂತೆ ಕೇಳಿದ್ದಾರೆ.
ಈ ವಿಷಯ ಈಗ ರಾಜಕೀಯ ಗದ್ದಲಕ್ಕೆ ತಿರುಗುತ್ತಿದ್ದು, ನಟನ ಮನೆಯಲ್ಲಿ ಭಾನುವಾರ ನಡೆದ ಹಿಂಸಾತಕ ಪ್ರತಿಭಟನೆಯ ಬಗ್ಗೆ ರಾಜ್ಯದ ಪ್ರತಿಪಕ್ಷ ಬಿಜೆಪಿ ಮತ್ತು ಭಾರತ್ ರಾಷ್ಟ್ರ ಸಮಿತಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿವೆ.