ಜಮ್ಮು,ಜು.4– ಜಮ್ಮುವಿನ ಭಗವತಿನಗರದ ಮೂಲ ಶಿಬಿರದಿಂದ ಎರಡು ಪ್ರತ್ಯೇಕ ಭದ್ರತಾ ಬೆಂಗಾವಲಿನಲ್ಲಿ 6,400 ಕ್ಕೂ ಹೆಚ್ಚು ಯಾತ್ರಿಕರ ಮೂರನೇ ತಂಡ ಪ್ರವಿತ್ರ ಅಮರನಾಥ ಯಾತ್ರೆಯ ಮುಂದುವರೆಸಿದೆ.
38 ದಿನಗಳ ವಾರ್ಷಿಕ ಯಾತ್ರೆಯು ನಿನ್ನೆಯಿಂದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್ ಮತ್ತು ಗಂಡೇರ್ಬಾಲ್ ಜಿಲ್ಲೆಯ ಬಾಲ್ಟಾಲ್‌ನಿಂದ ಪ್ರಾರಂಭವಾಗಿದ್ದು ಸುಮಾರು 14,000 ಯಾತ್ರಿಕರು 3,880 ಮೀಟರ್ ಎತ್ತರದಲ್ಲಿರುವ ಗುಹಾ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
6,411 ಯಾತ್ರಿಕರ ಮೂರನೇ ತಂಡದಲ್ಲಿ 4,723 ಪುರುಷರು, 1,071 ಮಹಿಳೆಯರು, 37 ಮಕ್ಕಳು ಮತ್ತು 580 ಸಾಧುಗಳು ಮತ್ತು ಸಾಧ್ವಿಗಳು – 291 ವಾಹನಗಳಲ್ಲಿ ಹೊರಟಿದ್ದಾರೆ ಎಂದು ಅವರು ಹೇಳಿದರು.
ಭಗವತಿ ನಗರ ಯಾತ್ರಿ ನಿವಾಸದಿಂದ ಎರಡು ಗುಂಪುಗಳಾಗಿ ಬೆಳಗಿನ ಜಾವ 3.15 ಮತ್ತು 4 ಗಂಟೆಗೆ ಬಾಲ್ಟಾಲ್ ಮತ್ತು ಪಹಲ್ಗಾಮ್‌ಗೆ ಹೊರಟ ಈ ತಂಡಕ್ಕೆ ಸಿಆರ್‌ಪಿಎಫ್‌ನ ಬೆಂಗಾವಲು ಭದ್ರತೆ ನೀಡಲಾಗಿದೆ.
3,622 ಯಾತ್ರಿಕರು 138 ವಾಹನಗಳಲ್ಲಿ 48 ಕಿಲೋಮೀಟರ್ ಸಾಂಪ್ರದಾಯಿಕ ಪಹಲ್ಗಾಮ್ ಮಾರ್ಗದಲ್ಲಿ ಸಾಗಿದರೆ , 153 ವಾಹನಗಳಲ್ಲಿ ಸಾಗಿಸಲ್ಪಟ್ಟ 2,789 ಯಾತ್ರಿಕರು ಕಡಿಮೆ ಆದರೆ ಕಡಿದಾದ 14 ಕಿಲೋಮೀಟರ್ ಬಾಲ್ಟಾಲ್ ಮಾರ್ಗದಲ್ಲಿ ಸಂಚರಿಸಲಿದ್ದಾರೆ.
ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಬುಧವಾರ ಇಲ್ಲಿಂದ ಯಾತ್ರೆಗೆ ಚಾಲನೆ ನೀಡಿದ ನಂತರ ಒಟ್ಟು 17,549 ಯಾತ್ರಿಕರು ಜಮು ಮೂಲ ಶಿಬಿರದಿಂದ ಕಣಿವೆಗೆ ತೆರಳಿದ್ದಾರೆ.
ಏಪ್ರಿಲ್ 22 ರಂದು ಪಹಲ್ಗಾಮ್ ದಾಳಿಯಲ್ಲಿ 26 ಮಂದಿ ಹತ್ಯೆ ನಂತರ ,ಯಾತ್ರೆ ಎಂದಿನಂತೆ ಬಿಗಿ ಭದ್ರತೆಯಲ್ಲಿ ನಡೆಯುತ್ತಿದೆ.
ಭಗವತಿ ನಗರ ಮೂಲ ಶಿಬಿರವನ್ನು ಬಹು ಹಂತದ ಭದ್ರತಾ ವ್ಯವಸ್ಥೆಯಡಿಯಲ್ಲಿ ಇರಿಸಲಾಗಿದೆ ಮತ್ತು ಯಾತ್ರೆಗಾಗಿ ಇಲ್ಲಿಯವರೆಗೆ 3.5 ಲಕ್ಷಕ್ಕೂ ಹೆಚ್ಚು ಜನರು ಆನ್‌ಲೈನ್‌ನಲ್ಲಿ ನೋಂದಾಯಿಸಿಕೊಂಡಿದ್ದಾರೆ.
ಜಮುವಿನಾದ್ಯಂತ 34 ವಸತಿ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಯಾತ್ರಿಕರಿಗೆ ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್ ಟ್ಯಾಗ್‌ಗಳನ್ನು ನೀಡಲಾಗುತ್ತಿದೆ. ಯಾತ್ರಿಕರ ಸ್ಥಳದಲ್ಲೇ ನೋಂದಣಿಗಾಗಿ ಹನ್ನೆರಡು ಕೌಂಟರ್‌ಗಳನ್ನು ಸ್ಥಾಪಿಸಲಾಗಿದೆ.