ವಾಷಿಂಗ್ಟನ್,ಏ.6– ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ದೇಶದಲ್ಲಿ ಆಡಳಿತ ನಡೆಸುತ್ತಿರುವ ರೀತಿಗೆ ಆಕ್ರೋಶಗೊಂಡಿರುವ ಲಕ್ಷಾಂತರ ಜನರು ಅಮೆರಿಕದ ಸಾವಿರಾರು ನಗರಗಳಲ್ಲಿ ಭಾರೀ ಪ್ರತಿಭಟನಾ ರ್ಯಾಲಿಗಳನ್ನು ನಡೆಸಿದರು.
ರಿಪಬ್ಲಿಕನ್ ಪಕ್ಷದ ಆಡಳಿತದ ಆರಂಭಿಕ ವಾರಗಳಲ್ಲೇ ಬೃಹತ್ ಜನ ವಿರೋಧ ವ್ಯಕ್ತವಾಗುತ್ತಿದ್ದು, ಟ್ರಂಪ್ ಸರ್ಕಾರ ನೀಡುತ್ತಿರುವ ಆಘಾತಗಳಿಗೆ ರೋಸಿಹೋಗಿರುವ ಜನತೆ ಸರ್ಕಾರಕ್ಕೆ ಪ್ರತಿಭಟನೆಯ ಬಿಸಿ ಮುಟ್ಟಿಸುತ್ತಿದ್ದಾರೆ. ಹ್ಯಾಂಡ್ಸ್ ಆಫ್ ಶೀರ್ಷಿಕೆಯಡಿ ಅಮೆರಿಕದ 50 ರಾಜ್ಯಗಳ 1200ಕ್ಕೂ ಅಧಿಕ ಸ್ಥಳಗಳಲ್ಲಿ ಭಾರೀ ಪ್ರತಿಭಟನಾ ಮೆರವಣಿಗೆಗಳು ನಡೆದವು. ನಾಗರಿಕ ಹಕ್ಕುಗಳ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು, ವಕೀಲರು, ಪುರಿಯ ನಾಗರಿಕರು ಮತ್ತು ಚುನಾವಣಾ ಕಾರ್ಯಕರ್ತರು ಸೇರಿದಂತೆ 150ಕ್ಕೂ ಅಧಿಕ ಸಂಘಸಂಸ್ಥೆಗಳು ಮತ್ತು ಸಂಘಟನೆಗಳ ಸದಸ್ಯರು ರ್ಯಾಲಿಗಳಲ್ಲಿ ಪಾಲ್ಗೊಂಡರು.
ಮ್ಯಾನ್‌ಹಟನ್‌ನಿಂದ ಆಂಕೋರಟ್‌ವರೆಗೆ, ಅಲಾಸ್ಕಾದಿಂದ ಲಾಸ್ ಏಂಜಲೀಸ್‌ವರೆಗೆ ಬಹಳಷ್ಟು ರಾಜ್ಯಗಳ ರಾಜಧಾನಿಗಳಲ್ಲಿ ರ್ಯಾಲಿ ನಡೆಸಿದ ಸಾವಿರಾರು ಪ್ರತಿಭಟನಾಕಾರರು ಸರ್ಕಾರವನ್ನು ಅವನತಿಯತ್ತ ಕೊಂಡೊಯ್ಯುತ್ತಿರುವ ಟ್ರಂಪ್ ಮತ್ತು ಶತಕೋಟ್ಯಾಧೀಶ ಎಲಾನ್ ಮಸ್ಕ್‌ರವರ ಆರ್ಥಿಕ ಮತ್ತು ವಲಸೆ ಹಾಗೂ ಮಾನವಹಕ್ಕುಗಳ ಮೇಲಿನ ಕ್ರಮಗಳನ್ನು ಖಂಡಿಸಿದರು.
ಪಶ್ಚಿಮ ಕರಾವಳಿಯಲ್ಲಿ ಸಿಯಾಟಲ್‌ನ ಮಾದರಿ ಸ್ಪೇಸ್ ನೀಡಲ್‌ನ ನೆರಳಲ್ಲಿ ಪ್ರತಿಭಟಾನಾಕಾರರು ಕೆಲವೇ ಜನರ ಪ್ರಭುತ್ವದ ವಿರುದ್ಧ ಹೋರಾಡಿ ಮುಂತಾದ ಘೋಷಣೆಗಳಿದ್ದ ಭಿತ್ತಿಫಲಕಗಳನ್ನು ಹಿಡಿದು ಪ್ರದರ್ಶನ ನಡೆಸಿದರು. ಪೋರ್ಟ್ ಲ್ಯಾಂಡ್, ಓರೆಗಾಂವ್ ಮತ್ತು ಲಾಸ್ ಏಂಜಲೀಸ್‌ನಲ್ಲಿ ಮೆರವಣಿಗೆಯಲ್ಲಿ ಸಾಗಿ ಹಧಿಕ್ಕಾರ ಘೋಷಣೆಗಳನ್ನು ಕೂಗಿದರು.
ಕೇಂದ್ರ ಸರ್ಕಾರದ ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸಿದ. ಸಾಮಾಜಿಕ ಭದ್ರತಾ ಆಡಳಿತ ಕ್ಷೇತ್ರದ ಕಚೇರಿಗಳನ್ನು ಬಂದ್ ಮಾಡಿದ, ಏಜೆನ್ಸಿಗಳ ಬಾಗಿಲು ಮುಚ್ಚಿದ. ವಲಸಿಗರನ್ನು ಗಡಿಪಾರು ಮಾಡಿದ, ಲೈಂಗಿಕ ಅಲ್ಪಸಂಖ್ಯಾತರ ರಕ್ಷಣೆಯನ್ನು ಹಿಂತೆಗೆದುಕೊಂಡ ಮತ್ತು ಆರೋಗ್ಯ ಕಾರ್ಯಕ್ರಮಗಳಿಗೆ ನಿಧಿ ಕಡಿತಗೊಳಿಸಿದ ಟ್ರಂಪ್ ಆಡಳಿತದ ಕ್ರಮಗಳ ವಿರುದ್ಧ ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದರು.
ಟ್ರಂಪ್ ಅವರ ಸಲಹೆಗಾರರೂ ಆಗಿರುವ, ಟೆಸ್ಲಾ, ಸ್ಪೇಸ್ ಎಕ್ಸ್ ಮತ್ತು ಸಾಮಾಜಿಕ ಮಾಧ್ಯಮ ಜಾಲತಾಣ ಎಕ್ಸ್‌ನ ಮಾಲೀಕ ಮಸ್ಕ್ ಅವರು ಸರ್ಕಾರದ ದಕ್ಷತಾ ಇಲಾಖೆ ಎಂಬ ಹೊಸದಾಗಿ ಸೃಜಿಸಿರುವ ಆಡಳಿತ ವಿಭಾಗದ ಮುಖ್ಯಸ್ಥರಾಗಿ ಸರ್ಕಾರದ ನೀತಿಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ತಾವು ತೆರಿಗೆದಾರರ ನೂರಾರು ಕೋಟಿ ಡಾಲರ್‌ಗಳ ಉಳಿತಾಯ ಮಾಡಿಕೊಡುತ್ತಿರುವುದಾಗಿ ಅವರು ಹೇಳುತ್ತಾರೆ.
ಪ್ರತಿಭಟನೆಗಳ ಕುರಿತು ಪ್ರಶ್ನಿಸಿದಾಗ, ಟ್ರಂಪ್ ಅವರ ನಿಲುವು ಸ್ಪಷ್ಟವಾಗಿದೆ. ಅವರು ಸದಾಕಾಲ ಸಾಮಾಜಿಕ ಸುರಕ್ಷತೆ, ವೈದ್ಯಕೀಯ ಆರೈಕೆ, ವೈದ್ಯಕೀಯ ನೆರವನ್ನು ಅರ್ಹ ಫಲಾನುಭವಿಗಳಿಗೆ ದೊರಕಿಸಿಕೊಡುವುದನ್ನು ಕಾಪಾಡುತ್ತಾರೆ ಎಂದು ಶ್ವೇತಭವನ ಹೇಳಿಕೆ ನೀಡಿದೆ.
ಈ ನಡುವೆ ಸಮಾಜಘಾತಕ ಶಕ್ತಿಗಳಿಗೆ, ಸಾಮಾಜಿಕ ಭದ್ರತೆ, ವೈದ್ಯಕೀಯ ನೆರವು ಮತ್ತು ವೈದ್ಯಕೀಯ ಆರೈಕೆ ಪ್ರಯೋಜನಗಳನ್ನು ಒದಗಿಸಿಕೊಡುವುದರಿಂದ ಯೋಜನೆಗಳು ದಿವಾಳಿಯಾಗಲು ಕಾರಣವಾಗುತ್ತದೆ ಎಂಬ ನಿಲುವನ್ನು ಡೆಮಾಕ್ರಟ್ ಧುರೀಣರು ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಟ್ರಂಪ್ ಅವರು ತಮ್ಮ ಎರಡನೇ ಅವಧಿಯ ಆಡಳಿತ ಆರಂಭದಲ್ಲೇ ಸಾರ್ವಜನಿಕ ವಿರೋಧವನ್ನು ಎದುರಿಸುತ್ತಿದ್ದಾರೆ.