ಬೆಂಗಳೂರು,ಏ.2- ದೇಶಾದ್ಯಂತ ಮೋದಿ ಘೋಷಣೆ ಮೊಳಗುತ್ತಿದೆ. ಮತ್ತೊಮ್ಮೆ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಇಂದಿಲ್ಲಿ ಹೇಳಿದ್ದಾರೆ.ಅರಮನೆ ಮೈದಾನದಲ್ಲಿಂದು ನಡೆದ ಬಿಜೆಪಿ ಶಕ್ತಿಕೇಂದ್ರದ ಪ್ರಮುಖರ ಸಭೆಯಲ್ಲಿ ಮಾತನಾಡಿದ ಅವರು,ಯುಪಿಎ ಅವಧಿಯಲ್ಲಿ ಭಾರತವನ್ನು ಭ್ರಷ್ಟಾಚಾರದ ಕೂಪಕ್ಕೆ ತಳ್ಳಿದ ಕಾಂಗ್ರೆಸ್ ಇಂದು ಭ್ರಷ್ಟರ ಕೂಟ ಕಟ್ಟಿಕೊಂಡು ಮೋದಿ ವಿರುದ್ಧ ಅಪಪ್ರಚಾರ ನಡೆಸುತ್ತಿದೆ.
ಪ್ರಸ್ತುತ ಲೋಕಸಭಾ ಚುನಾವಣೆಯಲ್ಲಿ ಈಗ ಮೋದಿ ಪರಿವಾರ ಮತ್ತು ಭ್ರಷ್ಟರ ಕೂಟದ ನಡುವೆ ಹೋರಾಟ ನಡೆಯುತ್ತಿದೆ. ಆದರೆ, ದೇಶದ ಮತದಾರರು ಪಾರದರ್ಶಕ ಆಡಳಿತ ನೀಡಿರುವ ಮೋದಿ ಅವರ ಪರ ನಿಂತಿದ್ದಾರೆ ಎಂದರು. ದೇಶವನ್ನು ಭ್ರಷ್ಟಾಚಾರದ ಕೂಪವನ್ನಾಗಿ ಮಾಡಿದ ಕಾಂಗ್ರೆಸ್ ನೇತೃತ್ವದ ಯುಪಿಎ ಆಡಳಿತವನ್ನು ಜನ ಇನ್ನೂ ಮರೆತಿಲ್ಲ. 2ಜಿ ಹಗರಣ, ಅಗಸ್ಟ ಹೆಲಿಕಾಪ್ಟರ್ ಹಗರಣ, ಕಲ್ಲಿದ್ದಲು ಹಗರಣ, ಕಾಮನ್ವೆಲ್ತ್ ಹಗರಣ ಸೇರಿದಂತೆ ಸಾಲು ಸಾಲು ಭ್ರಷ್ಟಾಚಾರ ನಡೆಸಿದ್ದವರು ಈಗ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ವಿಶ್ವದಲ್ಲಿ ಭಾರತದ ಆರ್ಥಿಕತೆಯನ್ನು ಐದನೆ ಸ್ಥಾನಕ್ಕೆ ತಂದ ಕೀರ್ತಿ ಮೋದಿ ಅವರಿಗೆ ಸಲ್ಲುತ್ತದೆ. ಈ ಹಿಂದೆ ಲಕ್ಷಾಂತರ ಕೋಟಿ ಲೂಟಿ ಹೊಡೆದಿದ್ದರೋ ಅವರನ್ನು ಜೈಲಿಗೆ ಕಳುಹಿಸುತ್ತೇವೆ ಎಂದು ನಾವು ಹೇಳಿದ್ದೆವು. ಅದನ್ನು ಇಂದು ನೀವು ನೋಡುತ್ತಿದ್ದೀರಿ. ಮೋದಿ ವಿರುದ್ಧ ಅಪಪ್ರಚಾರಕ್ಕಾಗಿ ಕೆಲವೊಂದು ವ್ಯವಸ್ಥಿತ ತಂತ್ರಗಾರಿಕೆ ನಡೆಸುತ್ತಿದ್ದಾರೆ. ಆದರೆ, ಇದು ಜನರ ಮುಂದೆ ನಡೆಯುವುದಿಲ್ಲ. ಮೂರನೆ ಬಾರಿಗೆ ಮೋದಿ ಪ್ರಧಾನಿಯಾಗುವುದನ್ನು ಯಾರೂ ತಪ್ಪಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಕಾಂಗ್ರೆಸ್ನವರು ನಮ್ಮ 2019ರ ಪ್ರಣಾಳಿಕೆ ಬಗ್ಗೆ ವ್ಯಂಗ್ಯವಾಡಿದ್ದರು. ಆದರೆ, ಇಂದು ಅದನ್ನೆಲ್ಲ ಈಡೇರಿಸಿದ್ದೇವೆ. ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣ ಮಾಡಿದ್ದೇವೆ. ಕಾಶ್ಮೀರ ಭಾರತ ನಮ್ಮ ಅವಿಭಾಜ್ಯಅಂಗ ಎಂದು ಸಾಬೀತುಪಡಿಸಿ ಈಗ 371 ಕಾಯ್ದೆಯನ್ನು ರದ್ದುಪಡಿಸಿದ್ದೇವೆ. ನಿರಾಶ್ರಿತ ಹಿಂದೂಗಳಿಗೆ ಸಿಎಎ ಜಾರಿ ಮಾಡಿದ್ದೇವೆ. ರೈತರ ಉತ್ಪನ್ನಗಳಿಗೆ ಬೆಲೆ ಆಯೋಗ ರಚಿಸಿ ನೀಡುತ್ತಿದ್ದೇವೆ. ಇವೆಲ್ಲ ನಮ್ಮ ಭರವಸೆಗಳ ಈಡೇರಿಕೆ ಅಲ್ಲವೆ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ನವರು ರಾಮಮಂದಿರ ಉದ್ಘಾಟನೆಯನ್ನು ಬಹಿಷ್ಕರಿಸಿದರು. ತುಷ್ಟೀಕರಣ ರಾಜಕಾರಣ ಮಾಡಿದರು. ಆದರೆ ನಾವು ನೂರಾರು ವರ್ಷಗಳ ಕನಸನ್ನು ಸಾಕಾರಗೊಳಿಸಿದ್ದೇವೆ. ಭವ್ಯ ರಾಮಮಂದಿರ ಕಂಗೊಳಿಸುತ್ತಿದೆ ಎಂದು ಹೇಳಿದರು.
ಪ್ರತಿಯೊಬ್ಬರೂ ಮನೆ ಮನೆಗೆ ತೆರಳಿ ನಮ್ಮ ಬಿಜೆಪಿಯ ಮೋದಿ ಗ್ಯಾರಂಟಿಗಳು ಮತ್ತು ದೇಶ ಒಗ್ಗೂಡಿಸುವ, ಸುಭದ್ರಗೊಳಿಸುವ ನಿಟ್ಟಿನಲ್ಲಿ ತಿಳಿಸಬೇಕು. ಕರ್ನಾಟಕದ 28 ಕ್ಷೇತ್ರಗಳನ್ನು ಗೆಲ್ಲಲು ನೀವೆಲ್ಲ ಸಂಕಲ್ಪ ತೊಡಬೇಕು ಎಂದು ಕರೆ ನೀಡಿದರು.