Saturday, February 24, 2024
Homeರಾಜ್ಯಅಮಿತ್ ಶಾ ಆಗಮನದ ಬೆನ್ನಲ್ಲೇ ಬಿಜೆಪಿಯಲ್ಲಿ ಸಂಚಲನ

ಅಮಿತ್ ಶಾ ಆಗಮನದ ಬೆನ್ನಲ್ಲೇ ಬಿಜೆಪಿಯಲ್ಲಿ ಸಂಚಲನ

ಬೆಂಗಳೂರು,ಫೆ.10- ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಇಂದು ರಾಜ್ಯಕ್ಕೆ ಆಗಮಿಸುತ್ತಿದ್ದು, ಸರ್ಕಾರಿ ಕಾರ್ಯಕ್ರಮದಲ್ಲಿ ಭಾಗಿಯಾಗುವುದರ ಜೊತೆಗೆ ರಾಜ್ಯ ಬಿಜೆಪಿ ನಾಯಕರ ಜೊತೆಗೂ ಮಹತ್ವದ ಸಭೆಗಳನ್ನು ನಡೆಸಲಿದ್ದಾರೆ. ಇಂದು ರಾತ್ರಿ 10.50ಕ್ಕೆ ದೆಹಲಿಯಿಂದ ಮಂಡಕಹಳ್ಳಿ ವಿಮಾನ ನಿಲ್ದಾಣಕ್ಕೆ ಬಂದಿಳಿಯುವ ಅವರು, ನಗರದ ಖಾಸಗಿ ಹೊಟೇಲ್‍ನಲ್ಲಿ ವಾಸ್ತವ್ಯ ಹೂಡಲಿದ್ದಾರೆ.

ನಾಳೆ ಬೆಳಗ್ಗೆ 11 ಗಂಟೆಗೆ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ, ನಾಡದೇವತೆ ಚಾಮುಂಡೇಶ್ವರಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ನಂತರ 11.45ಕ್ಕೆ ಹೆಲಿಕಾಪ್ಟರ್ ಮೂಲಕ ಸುತ್ತೂರು ಗ್ರಾಮಕ್ಕೆ ಪ್ರಯಾಣ ಬೆಳೆಸಿ ಜಾತ್ರಾ ಮಹೋತ್ಸವದಲ್ಲಿ ಭಾಗಿಯಾಗಲಿದ್ದಾರೆ. ಮಧ್ಯಾಹ್ನ 1.30ಕ್ಕೆ ಸುತ್ತೂರು ಮಠದಲ್ಲಿ ಅವರಿಗೆ ಊಟದ ವ್ಯವಸ್ಥೆ ಮಾಡಲಾಗಿದ್ದು, ಮಧ್ಯಾಹ್ನ 2.30ಕ್ಕೆ ಖಾಸಗಿ ಹೋಟೆಲ್‍ಗೆ ಆಗಮಿಸಲಿದ್ದಾರೆ.

ಸಹಜಸ್ಥಿತಿಯತ್ತ ಹಿಂಸಾಚಾರ ಪೀಡಿತ ಉತ್ತರಾಖಂಡ

ಸಂಜೆ 3.30ರಿಂದ 4.30ರ ತನಕ ಮೈಸೂರು ಕ್ಲಸ್ಟರ್‍ಗೆ ಬರುವ ಮೈಸೂರು, ಚಾಮರಾಜನಗರ, ಮಂಡ್ಯ ಹಾಗೂ ಹಾಸನ ಲೋಕಸಭೆ ಕ್ಷೇತ್ರಗಳ ಸಿದ್ಧತೆ ಬಗ್ಗೆ ಮಹತ್ವದ ಸಭೆ ನಡೆಸಲಿದ್ದಾರೆ. ಸಂಜೆ 5 ಗಂಟೆಗೆ ಮೈಸೂರಿನಿಂದ ಗುಜರಾತ್‍ಗೆ ತೆರಳಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಅಮಿತ್ ಶಾ ಅವರ ರಾಜ್ಯ ಪ್ರವಾಸ ಭಾರೀ ಕುತೂಹಲ ಮೂಡಿಸಿದೆ. ಅದರಲ್ಲೂ ವಿಧಾನಸಭಾ ಚುನಾವಣೆಯ ಬಳಿಕ ಮೌನವಾಗಿದ್ದ ಕಮಲ ಪಡೆ ಲೋಕಸಭಾ ಚುನಾವಣೆಗೆ ಭರ್ಜರಿ ತಯಾರಿಯನ್ನು ನಡೆಸಿದೆ.

ಕ್ಲಸ್ಟರ್ ಮಟ್ಟದ ಸಭೆ, ಪ್ರಮುಖರ ಸಭೆ:
ಮಧ್ಯಾಹ್ನ 2.30ರ ಅನಂತರ ಬಿಜೆಪಿ ಪ್ರಮುಖರೊಂದಿಗೆ ಸರಣಿ ಸಭೆಗಳನ್ನು ನಡೆಸಲಿದ್ದು, ಮೈಸೂರು, ಚಾಮರಾಜನಗರ, ಮಂಡ್ಯ ಹಾಗೂ ಹಾಸನ ಲೋಕಸಭಾ ಕ್ಷೇತ್ರಗಳ ಸಭೆ ನಡೆಯಲಿವೆ. ಮುಂದಿನ ಯೋಜನೆಗಳ ಕುರಿತು ಶಾ ಮಾರ್ಗದರ್ಶನ ನೀಡಲಿದ್ದಾರೆ. ಮಂಡ್ಯ ಸಂಸದೆ ಸುಮಲತಾ ಈಗಾಗಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ.

ನಾಳಿನ ಸಭೆಯಲ್ಲಿ ಅಮಿತ್ ಶಾ ಎದುರು ಮಂಡ್ಯ ಲೋಕಸಭಾ ಕ್ಷೇತ್ರದ ಮಾಹಿತಿ ವಿನಿಮಯವೂ ಆಗಲಿದೆ. ಅಲ್ಲದೆ ಜೆಡಿಎಸ್ ಕಣ್ಣಿಟ್ಟಿರುವ ಹಾಸನ ಲೋಕಸಭಾ ಕ್ಷೇತ್ರ ಕುರಿತೂ ಚರ್ಚೆಗಳು ನಡೆಯಲಿವೆ. ಅನಂತರ ಪಕ್ಷದ ಪ್ರಮುಖರೊಂದಿಗೆ ಕೂಡ ಸಭೆ ನಡೆಸಲಿರುವ ಅವರು, ಸಂಜೆ 4.30ರ ನಂತರ ಗುಜರಾತ್‍ನತ್ತ ಪ್ರಯಾಣ ಬೆಳಸಲಿದ್ದಾರೆ.

ಮೈಸೂರು ಕ್ಲಸ್ಟರ್ ಅನಂತರ ಉಳಿದ 7 ಕ್ಲಸ್ಟರ್‍ಗಳಲ್ಲೂ ಅಮಿತ್ ಶಾ ಸಭೆಗಳನ್ನು ನಡೆಸಲಿದ್ದು, ಫೆ. 17 ಮತ್ತು 18ರಂದು ದೆಹಲಿಯಲ್ಲಿ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯ ಬಳಿಕ ಕರ್ನಾಟಕಕ್ಕೆ ಹೆಚ್ಚು ಸಮಯ ನೀಡುವ ಸಾಧ್ಯತೆಗಳಿವೆ.

RELATED ARTICLES

Latest News