ಬೆಂಗಳೂರು,ಸೆ.28- ರಾಜ್ಯಪಾಲ ಥಾವರ್‌ಚಂದ್ ಗೆಲ್ಹೋಟ್ ಕಾರ್ಯ ವೈಖರಿಗೆ ಕಾಂಗ್ರೆಸ್ ನಾಯಕರು ಪ್ರತಿದಿನ ಮುಗಿಬೀಳುತ್ತಿರುವ ಸಂದರ್ಭದಲ್ಲೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಹಿಂದೆ ರಾಜ್ಯಪಾಲರ ಪಾತ್ರದ ಕುರಿತು ಆಡಿರುವ ಮಾತು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ಲಾಗಿದೆ.
2011ರಲ್ಲಿ ಕರ್ನಾಟಕದ ರಾಜ್ಯಪಾಲ ರಾಗಿದ್ದ ಹಂಸರಾಜ್ ಭಾರದ್ವಾಜ್ ಅವರು ಅಂದಿನ ಬಿಜೆಪಿ ಸರ್ಕಾರಕ್ಕೆ ಒಂದಿಲ್ಲೊಂದು ರೀತಿ ಕಂಟಕಪ್ರಾಯರಾಗಿದ್ದರು.ಇದರಿಂದ ಕೆರಳಿದ್ದ ಬಿಜೆಪಿ ನಾಯಕರು ಹಂಸರಾಜ್ ಭಾರದ್ವಾಜ್ ಅವರ ವಿರುದ್ಧ ಟೀಕಾ ಪ್ರಹಾರ ನಡೆಸಿದಲ್ಲದೆ ಅವರನ್ನು ವಾಪಸ್ ಕರೆಸಿಕೊಳ್ಳಬೇಕೆಂದು ರಾಷ್ಟ್ರಪತಿಗೆ ದೂರು ನೀಡಿದ್ದರು.
ಆಗ ಪ್ರತಿಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯನವರು ಪ್ರತಿಪಕ್ಷಗಳ ಆರೋಪಕ್ಕೆ ತಿರುಗೇಟು ನೀಡಿ ಆಡಿರುವ ಮಾತು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ಲಾಗುತ್ತಿದೆ. ರಾಜ್ಯಪಾಲರನ್ನು ರಾಷ್ಟ್ರಪತಿಗಳು ಕೇಂದ್ರ ಸರ್ಕಾರದ ಶಿಫಾರಸ್ಸಿನ ಮೇರೆಗೆ ನೇಮಕ ಮಾಡುತ್ತಾರೆ. ಕಾರ್ಯಾಂಗದ ಮುಖ್ಯಸ್ಥರಾಗಿರುವ ಅವರು ಸರ್ಕಾರಕ್ಕೆ ಎಲ್ಲ ರೀತಿಯ ಸಲಹೆ ಸೂಚನೆ, ಮಾರ್ಗ ರ್ಶನ ನೀಡುವ ಅಧಿಕಾರ ಹೊಂದಿದ್ದಾರೆ.
ರಾಷ್ಟ್ರಪತಿಗಳು ದೇಶದ ಮುಖ್ಯಸ್ಥರು. ಅವರ ಪ್ರತಿನಿಧಿಯಾಗಿ ರಾಜ್ಯಪಾಲರು ಕೆಲಸ ಮಾಡುತ್ತಾರೆ. ಸರ್ಕಾರ ಒಂದು ಸಂವಿಧಾನದ ಚೌಕಟ್ಟಿನೊಳಗೆ ಕೆಲಸ ಮಾಡುತ್ತದೆಯೇ ಇಲ್ಲವೇ ಎಂಬುದನ್ನು ನೋಡಿಕೊಳ್ಳುತ್ತಾರೆ.
ಸರ್ಕಾರ ತಪ್ಪು ಮಾಡಿದಾಗ ಎಚ್ಚರಿಕೆ ಕೊಡುವ, ಬುದ್ದಿ ಹೇಳುವ, ಸಂಬಂಧ ಪಟ್ಟವರ ಮೇಲೆ ಕ್ರಮ ಕೈಗೊಳ್ಳುವ ಅಧಿಕಾರ ರಾಜ್ಯಪಾಲರಿಗಿದೆ. ಅವರು ಅಧಿಕಾರ ಚಲಾಯಿಸಿದಾಗ ರಾಜಕೀಯ ಪ್ರೇರಿತ ದುರದ್ದೇಶದಿಂದ ಮಾಡಿದ್ದಾರೆ.
ಪೂರ್ವ ನಿಯೋಜಿತ, ವಿರೋಧ ಪಕ್ಷದವರು ಮಾಡಿಸುತ್ತಿದ್ದಾರೆ ಎಂದು ಹೇಳುವುದನ್ನು ಜನ ನಂಬುವುದಿಲ್ಲ ಎಂದು ಹೇಳಿದ್ದರು. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಿದ್ದರಾಮಯ್ಯನವರ ವಿರುದ್ಧ ನೆಟ್ಟಿಗರು ತರಹೇವಾರಿ ಪ್ರಶ್ನೆಗಳನ್ನು ಮಾಡುತ್ತಿದ್ದಾರೆ.