ಶೃಂಗೇರಿ,ಆ.12- ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಡೆ ಮಲೆನಾಡಿಗರನ್ನು ನಿದ್ದೆಗೆಡಿಸಿದೆ, ಮಲೆನಾಡಿನ ಜಿಲ್ಲೆಗಳ ಸಂಸದರು, ಶಾಸಕರು ಒಗ್ಗಟ್ಟಾಗಿ ಹೋರಾಟಕ್ಕೆ ಮುಂದಾಗಬೇಕೆಂದು ಮಲೆನಾಡು ಮತ್ತು ಕರಾವಳಿ ಜನಪರ ಒಕ್ಕೂಟದ ರಾಜ್ಯ ಸಂಚಾಲಕ ಅನಿಲ್ ಹೊಸಕೊಪ್ಪ ಒತ್ತಾಯಿಸಿದ್ದಾರೆ.
ಶೃಂಗೇರಿ ಪ್ರವಾಸಿ ಮಂದಿರದಲ್ಲಿ ಮಲೆನಾಡು ಮತ್ತು ಕರಾವಳಿ ಜನಪರ ಒಕ್ಕೂಟದವರು ನಿನ್ನೆ ಆಯೋಜಿಸಿದ್ದ ಮುಂದಿನ ಹೋರಟದ ಕುರಿತು ನಡೆದ ಸಭೆಯಲ್ಲಿ ಮಾತನಾಡಿದ ಅವರು, ಮಾರಕ ಅರಣ್ಯ ಕಾಯ್ದೆಯಿಂದ ಮಲೆನಾಡು ಹಾಗೂ ಕರಾವಳಿಯ ಕೃಷಿಕರು ಭಯದ ವಾತಾವರಣದಲ್ಲಿ ಬದುಕನ್ನು ನಡೆಸುತ್ತಿದ್ದರು.
ಇತ್ತೀಚಿಗೆ ಸದನದಲ್ಲಿ ಅರಣ್ಯವಾಸಿಗಳ ಬಗ್ಗೆ ತೆಗೆದುಕೊಂಡ ನಿರ್ಣಯದಿಂದ ಸ್ವಲ್ಪ ಮಟ್ಟಿಗೆ ನಿಟ್ಟುಸಿರು ಬಿಟ್ಟಿದ್ದರು.ಆದರೆ ಅತಿಯಾದ ಮಳೆಯಿಂದ ಆಗುವ ಅನಾಹುತಗಳಾಗುವುದಕ್ಕೆ ಮಲೆನಾಡಿಗರೇ ಕಾರಣ ಎಂದು ಹೇಳುವ ರಾಜ್ಯ ಸರ್ಕಾರದ ಸಚಿವರು ಮತ್ತು ಅಧಿಕಾರಿಗಳ ಹೇಳಿಕೆಗಳ ಜೊತೆಗೆ ಕೇಂದ್ರ ಸರ್ಕಾರ ಪಶ್ಚಿಮ ಘಟ್ಟವನ್ನು ಸೂಕ್ಷ್ಮ ಅರಣ್ಯ ಪ್ರದೇಶ ಎಂದು ಘೋಷಿಸಲು ಕರಡು ಪ್ರತಿ ಸಿದ್ದಪಡಿಸಿದ್ದು ಮತ್ತೆ ಮಲೆನಾಡಿಗರನ್ನು ಅತಂಕಕ್ಕೆ ಸಿಲುಕಿಸಿದ್ದಾರೆ ಎಂದು ಆಕೋಶ ವ್ಯಕ್ತಪಡಿಸಿದರು.
ಅತಿಯಾದ ಮಳೆಯಿಂದ ಪ್ರಕೃತಿ ವಿಕೋಪಕ್ಕೆ ಮಲೆನಾಡಿನ ಜನರು ನೇರ ಹೊಣೆಯಲ್ಲ. ಅವರ ಬದುಕಿಗಾಗಿ ಮಾಡಿಕೊಂಡ ಒತ್ತುವರಿಯಿಂದ ಭೂಕುಸಿತ ಉಂಟಾಗಿಲ್ಲ ಬದಲಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅವೈಜ್ಞಾನಿಕವಾಗಿ ನಿರ್ಮಿಸಿದ ರಾಷ್ಟ್ರೀಯ ಹೆದ್ದಾರಿ, ಅಣೆಕಟ್ಟುಗಳು, ಸೇತುವೆಗಳಿಂದ ಅತಿ ಹೆಚ್ಚು ಭೂಕುಸಿತ ಸಂಭವಿಸಿದೆ ವಿನಃ ಯಾವುದೇ ಕೃಷಿ ಚಟುವಟಿಕೆಗಳಿಂದ ಅಲ್ಲ. ಮೊದಲು ರಾಷ್ಟ್ರೀಯ ಹೆದ್ದಾರಿ, ಅಣೆಕಟ್ಟುಗಳನ್ನ, ರಸ್ತೆ ಬದಿಯಲ್ಲಿರುವ ಪೈಪ್‌ಲೈನ್‌ಗಳನ್ನೂ ತೆರವು ಮಾಡಿ. ಅವುಗಳನ್ನು ತೆರವು ಮಾಡಲು ನಿಮಿಂದ ಸಾಧ್ಯವೇ? ಎಂದು ಪ್ರಶ್ನಿಸಿದರು.
ಕ್ಷೇತ್ರ ರೈತ ಸಂಘದ ಅಧ್ಯಕ್ಷ ನವೀನ್ ಕರುವಾನೆ ಮಾತನಾಡಿ, ಒತ್ತುವರಿ ತೆರವು ಮಾಡುತ್ತೇವೆ ಎಂದು ಸಚಿವ ಈಶ್ವರ್ ಖಂಡ್ರೆ ಹೇಳಿಕೆ ನೀಡಿರುವುದನ್ನು ಜಾರಿಗೆ ತರಲು ನಮ ಮಲೆನಾಡಿಗರು ಬಿಡುವುದಿಲ್ಲ. ರಾಜ್ಯ ಸರ್ಕಾರದಷ್ಟೇ ಜವಾಬ್ದಾರಿ ಕೇಂದ್ರ ಸರ್ಕಾರಕ್ಕೆ ಇದೆ. ಆದರಿಂದ ಈ ನಿರ್ಣಯವನ್ನು ನಮ ಮಲೆನಾಡಿನ 5 ಜನ ಸಂಸದರು ಬೆಂಬಲಿಸಿ ಮಲೆನಾಡಿಗರ ಬದುಕು ಉಳಿಸಿಕೊಡಬೇಕು.
ಇದುವರೆಗೂ ನಮ ಯಾವ ಸಂಸದರು ಅರಣ್ಯ ಹಕ್ಕಿನ ಬಗ್ಗೆ ಸಂಸತ್ತಿನಲ್ಲಿ ಧ್ವನಿ ಎತ್ತಿಲ್ಲ. ನಮ ಸಂಸದರಾದ ಕೋಟಾ ಶ್ರೀನಿವಾಸ್ ಪೂಜಾರಿಯವರು ಮಲೆನಾಡಿನ ಸಮಸ್ಯೆಗಳ ಬಗ್ಗೆ ಸಂಸತ್ತಿನಲ್ಲಿ ಮಾತನಾಡಿ ಮಲೆನಾಡಿಗರಿಗೆ ನ್ಯಾಯ ದೊರಕಿಸಿ ಕೊಡಬೇಕು ಎಂದು ಒತ್ತಾಯಿಸಿದರು.
ಸಭೆಯಲ್ಲಿ ಮೂಲ ಅರಣ್ಯ ಕಾಯ್ದೆಯನ್ನು ತಿದ್ದುಪಡಿ ಮಾಡಲು ಕೇಂದ್ರ ಹಾಗು ರಾಜ್ಯ ಸರ್ಕಾರಕ್ಕೆ ಒತ್ತಡ ತರುವ ವಿಚಾರದ ಬಗ್ಗೆ ಚರ್ಚಿಸಲಾಯಿತು. ಸಭೆಯಲ್ಲಿ ಪದಾಧಿಕಾರಿಗಳಾದ ಕಣದಮನೆ ಜಗದೀಶ್, ತ್ರಿಮೂರ್ತಿ, ಕಾಳ್ಯ ಸಂತೋಷ್, ಮಂಜುನಾಥ್ ಮೂಡ್ಲು, ಗುತ್ತುಳಿಕೆ ಕೇಶವ, ರಾಜ್ಕುಮಾರ್ ಹೆಗ್ಡೆ, ಅವಿನಾಶ್, ಪ್ರಶಾಂತ್ ಬಂಡ್ಲಪುರ, ಆದೇಶ, ಚೇತನ್ ಹಿಂಬ್ರವಳ್ಳಿ, ಶುಭಕೃತ್ ಹೆಗ್ಡೆ, ಶಶಿಕ್ ಹೊಸಕೋಪ್ಪ , ಸುಬ್ರಮಣ್ಯ ಹರವರಿ ಉಪಸ್ಥಿತರಿದ್ದರು.