ನ್ಯೂಯಾರ್ಕ್,ಏ.6- ಅಮೆರಿಕ ವಿಶ್ವವಿದ್ಯಾನಿಲಯದಲ್ಲಿ ಅಭ್ಯಾಸ ಮಾಡುತ್ತಿದ್ದ ಭಾರತೀಯ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ನ್ಯೂಯಾರ್ಕ್‍ನಲ್ಲಿರುವ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.
ಮೃತ ವಿದ್ಯಾರ್ಥಿನಿಯನ್ನು ಉಮಾ ಸತ್ಯ ಸಾಯಿ ಗಡ್ಡೆ ಎಂದು ಗುರುತಿಸಲಾಗಿದೆ. ಆಕೆ ಓಹಿಯೋದ ಕ್ಲೀವ್‍ಲ್ಯಾಂಡ್‍ನಲ್ಲಿ ವ್ಯಾಸಾಂಗ ಮಾಡುತ್ತಿದ್ದಳು ಎಂದು ತಿಳಿದು ಬಂದಿದೆ. ವಿದ್ಯಾರ್ಥಿನಿಯ ಸಾವಿನ ಬಗ್ಗೆ ಭಾರತೀಯ ದೂತವಾಸ ಕಚೇರಿ ತೀವ್ರ ಬೇಸರ ವ್ಯಕ್ತಪಡಿಸಿದ್ದು, ಮೃತಳ ಕುಟುಂಬಕ್ಕೆ ಅಗತ್ಯ ನೆರವು ನೀಡುವುದಾಗಿ ಘೋಷಿಸಿದೆ. ಅಲ್ಲದೇ ಮೃತದೇಹವನ್ನು ಭಾರತಕ್ಕೆ ಸಾಗಿಸಲು ಕ್ರಮಕೈಗೊಳ್ಳಲಾಗುವುದು ಎಂದು ರಾಯಭಾರ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಓಹಿಯೋದ ಕ್ಲೀವ್‍ಲ್ಯಾಂಡ್‍ನಲ್ಲಿರುವ ಭಾರತೀಯ ವಿದ್ಯಾರ್ಥಿ ಉಮಾ ಸತ್ಯ ಸಾಯಿ ಗಡ್ಡೆ ಅವರ ನಿಧನದಿಂದ ತೀವ್ರ ದುಃಖವಾಗಿದೆ ಎಂದು ಅದು ಎಕ್ಸ್ ಪೋಸ್ಟ್ ನಲ್ಲಿ ಕಳವಳ ವ್ಯಕ್ತಪಡಿಸಿದೆ. ಪೊಲೀಸ್ ತನಿಖೆಗಳು ನಡೆಯುತ್ತಿವೆ ಮತ್ತು ಮೃತದೇಹವನ್ನು ಭಾರತಕ್ಕೆ ರವಾನಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಕಾನ್ಸುಲೇಟ್ ತಿಳಿಸಿದೆ.
ಈ ಘಟನೆಯು ಅಮೆರಿಕದಲ್ಲಿ ಭಾರತೀಯ ಮೂಲದ ವಿದ್ಯಾರ್ಥಿಗಳ ಮೇಲಿನ ದಾಳಿಯ ಸರಣಿಯ ಮತ್ತೊಂದು ಹೆಜ್ಜೆಯಾಗಿದೆ. ಅಲ್ಲದೇ ಮಾರ್ಚ್‍ನಲ್ಲಿ ಮೊಹಮ್ಮದ್ ಅಬ್ದುಲ್ ಅರಾಫತ್, ನಿಗೂಢವಾಗಿ ಕ್ಲೀವ್‍ಲ್ಯಾಂಡ್ ಪ್ರದೇಶದಿಂದ ನಾಪತ್ತೆಯಾಗಿದ್ದರು. ನಂತರ ಆತನ ಕುಟುಂಬಕ್ಕೆ ಆತನ ಬಿಡುಗಡೆಗೆ ಹಣ ನೀಡುವಂತೆ ಸುಲಿಗೆ ಕರೆ ಬಂದಿತ್ತು.
ಈ ವರ್ಷದ ಆರಂಭದಲ್ಲಿ, ಹೈದರಾಬಾದ್‍ನ ವಿದ್ಯಾರ್ಥಿ ಸೈಯದ್ ಮಜಾಹಿರ್ ಅಲಿ ಮೇಲೆ ಚಿಕಾಗೋದಲ್ಲಿ ಅಮಾನುಷವಾಗಿ ಹಲ್ಲೆ ನಡೆಸಲಾಗಿತ್ತು. ಬಳಿಕ ಚಿಕಾಗೋದಲ್ಲಿರುವ ಭಾರತೀಯ ದೂತಾವಾಸವು ತಕ್ಷಣವೇ ಮಧ್ಯಪ್ರವೇಶಿಸಿ ಅಲಿ ಮತ್ತು ಅವರ ಕುಟುಂಬಕ್ಕೆ ನೆರವು ನೀಡಿತ್ತು. ಇದರೊಂದಿಗೆ ಇಂಡಿಯಾನಾದ ಪಡ್ರ್ಯೂ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ನೀಲ್ ಆಚಾರ್ಯ ಸಾವು ಮತ್ತು ಜಾರ್ಜಿಯಾದಲ್ಲಿ ವಿವೇಕ್ ಸೈನಿಯ ಕ್ರೂರ ಹತ್ಯೆ ಸಹ ನಡೆದಿತ್ತು.
ಕಳೆದ ತಿಂಗಳು, ಮಿಸೌರಿಯ ಸೇಂಟ್ ಲೂಯಿಸ್‍ನಲ್ಲಿ ಭಾರತದ 34 ವರ್ಷದ ತರಬೇತಿ ಪಡೆದ ಶಾಸ್ತ್ರೀಯ ನೃತ್ಯಗಾರ ಅಮರನಾಥ್ ಘೋಷ್ ಅವರನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು. ಪಡ್ಯೂರ್ ವಿಶ್ವವಿದ್ಯಾನಿಲಯದಲ್ಲಿ 23 ವರ್ಷದ ಭಾರತೀಯ – ಅಮೆರಿಕನ್ ವಿದ್ಯಾರ್ಥಿ ಸಮೀರ್ ಕಾಮತ್ ಫೆಬ್ರವರಿ 5 ರಂದು ಇಂಡಿಯಾನಾದ ಕಾಡಿನಲ್ಲಿ ಶವವಾಗಿ ಪತ್ತೆಯಾಗಿದ್ದರು.
ಫೆಬ್ರವರಿ 2ರಂದು, 41 ವರ್ಷದ ಭಾರತೀಯ ಮೂಲದ ಐಟಿ ಎಕ್ಸಿಕ್ಯೂಟಿವ್ ವಿವೇಕ್ ತನೇಜಾ ಅವರು ವಾಷಿಂಗ್ಟನ್‍ನ ರೆಸ್ಟೋರೆಂಟ್‍ನ ಹೊರಗೆ ನಡೆದ ದಾಳಿಯ ಸಂದರ್ಭದಲ್ಲಿ ಮಾರಣಾಂತಿಕ ಹಲ್ಲೆಗೆ ಒಳಗಾಗಿ ಮೃತಪಟ್ಟಿದ್ದರು. ಇದು ಇತ್ತೀಚಿನ ತಿಂಗಳುಗಳಲ್ಲಿ ಭಾರತೀಯ ಮೂಲದ ವ್ಯಕ್ತಿಯ ಏಳನೇ ಸಾವಿನ ಪ್ರಕರಣವಾಗಿದೆ.
ಭಾರತೀಯ ವಿದ್ಯಾರ್ಥಿಗಳೊಂದಿಗೆ ರಾಯಭಾರ ಕಚೇರಿಗಳ ಸಂವಹನ:
ಭಾರತೀಯ ಮೂಲದ ವ್ಯಕ್ತಿಗಳು/ವಿದ್ಯಾರ್ಥಿಗಳ ಮೇಲಿನ ಸರಣಿ ದಾಳಿಗಳ ಹಿನ್ನೆಲೆ ವಾಷಿಂಗ್ಟನ್‍ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಮತ್ತು ವಿವಿಧ ಸ್ಥಳಗಳಲ್ಲಿರುವ ಅದರ ರಾಯಭಾರ ಕಚೇರಿಗಳು ಅಮೆರಿಕದಾದ್ಯಂತ ಭಾರತೀಯ ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸುತ್ತಿವೆ.
ವಿದ್ಯಾರ್ಥಿಗಳ ಯೋಗಕ್ಷೇಮ ಸೇರಿದಂತೆ ವಿವಿಧ ಅಂಶಗಳ ಕುರಿತು ಚರ್ಚಿಸುತ್ತಿವೆ. ಪ್ರಭಾರ ರಾಯಭಾರಿ ಪ್ರಿಯಾ ರಂಗನಾಥನ್ ನೇತೃತ್ವದಲ್ಲಿ ನಡೆದ ಸಂವಾದದಲ್ಲಿ ಸುಮಾರು 150 ಭಾರತೀಯ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಮತ್ತು 90 ಅಮೆರಿಕ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅಟ್ಲಾಂಟಾ, ಚಿಕಾಗೋ, ಹೂಸ್ಟನ್, ನ್ಯೂಯಾರ್ಕ್, ಸ್ಯಾನ್ ಫ್ರಾನ್ಸಿಸ್ಕೋ ಮತ್ತು ಸಿಯಾಟಲ್‍ನ ಭಾರತದ ಕಾನ್ಸುಲ್ ಜನರಲ್‍ಗಳು ಸಂವಾದದಲ್ಲಿ ಪಾಲ್ಗೊಂಡಿದ್ದರು.2024ರ ಆರಂಭದಿಂದ, ಅಮೆರಿಕದಲ್ಲಿ ಭಾರತೀಯ ಮೂಲದ ವಿದ್ಯಾರ್ಥಿಗಳ 10 ಸಾವುಗಳು ಸಂಭವಿಸಿವೆ.