Thursday, May 2, 2024
Homeರಾಜ್ಯರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ : ಜೈಲಲ್ಲಿರುವ ಮಾಝ್ ಮುನೀರ್ A1

ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ : ಜೈಲಲ್ಲಿರುವ ಮಾಝ್ ಮುನೀರ್ A1

ನವದೆಹಲಿ,ಏ.6- ಕರ್ನಾಟಕದ ರಾಜಧಾನಿ ಬೆಂಗಳೂರಿನ ಕುಂದಲಹಳ್ಳಿಯಲ್ಲಿನ ರಾಮೇಶ್ವರಂ ಕೆಫೆಯಲ್ಲಿ ಕಳೆದ ಮಾರ್ಚ್ 1ರಂದು ನಡೆದ ಸ್ಪೋಟ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ದಳ (ಎನ್‍ಐಎ) ಮಹತ್ವದ ಮಾಹಿತಿ ಬಹಿರಂಗಪಡಿಸಿದೆ.ಈ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಮುಸ್ಸಾವಿರ್ ಹುಸೇನ್ ಶಾಜಿಬ್ ಮತ್ತು ಸಹ ಸಂಚುಕೋರ ಅಬ್ದುಲ್ ಮಥೀನ್ ತಾಹಾ ಎಂದು ತನಿಖಾ ಸಂಸ್ಥೆ ಗುರುತಿಸಿದೆ.

ಶಿವಮೊಗ್ಗದಲ್ಲಿ ಟ್ರಯಲ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಈಗಾಗಲೇ ಜೈಲು ಸೇರಿದ ಮಾಝ್ ಮುನೀರ್‍ನನ್ನೇ ಈ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ದಳ ಮೊದಲ ಆರೋಪಿಯನ್ನಾಗಿ ಮಾಡಿದೆ. ಜೈಲು ಸೇರುವ ಮೊದಲೇ ಕೆಲವೊಂದು ಕಡೆ ಸ್ಫೋಟಕ್ಕೆ ಸಂಚು ರೂಪಿಸಿದ ಹಿನ್ನೆಲೆಯಲ್ಲಿ ಆತನನ್ನೇ ಎ1 ಆರೋಪಿಯನ್ನಾಗಿ ಮಾಡಿದೆ.

ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರ ಜೈಲ್ಲಿನಲ್ಲಿದ್ದ ಮಾಝ್ ಮುನೀರ್‍ನನ್ನು ಎನ್‍ಐಎ ಅಧಿಕಾರಿಗಳು 7 ದಿನಗಳ ಕಾಲ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಜೈಲಿನಲ್ಲಿ ದಾಳಿ ನಡೆಸಿದ ಬಳಿಕ ಮಾಝ್ ಬ್ಯಾರಕ್‍ನಲ್ಲಿ ಕೆಲವೊಂದು ಪತ್ರಗಳು ಸಿಕ್ಕಿದ್ದವು. ಅವುಗಳು ಪ್ರಕರಣಕ್ಕೆ ಮಹತ್ವದ ತಿರುವು ನೀಡಿದ ಹಿನ್ನೆಲೆಯಲ್ಲಿ ಮೊದಲ ಆರೋಪಿಯನ್ನಾಗಿ ಮಾಡಲಾಗಿದೆ.

ಎರಡು ಮತ್ತು ಮೂರನೇ ಆರೋಪಿಗಳನ್ನಾಗಿ ಮತೀನ್ ಮತ್ತು ಮುಸಾವೀರ್ ಹೆಸರನ್ನು ಉಲ್ಲೇಖಿಸಲಾಗಿದ್ದು, ಈಗ ಬಂಧನ ಆಗಿರೋ ಮುಜಾಮಿಲ್ ಷರೀಫ್ ನಾಲ್ಕನೇ ಆರೋಪಿಯನ್ನಾಗಿ ಮಾಡಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.

ಇಬ್ಬರೂ ತೀರ್ಥಹಳ್ಳಿಯವರು:
ಬೆಂಗಳೂರಿನ ಬ್ರೂಕ್‍ಫೀಲ್ಡ್‍ನ ಐಟಿಪಿಎಲ್ ರಸ್ತೆಯಲ್ಲಿರುವ ಕೆಫೆಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಹಲವರು ಗಾಯಗೊಂಡಿದ್ದರು. ಈ ಪ್ರಕರಣದ ಆರೋಪಿಗಳಾದ ಮುಸ್ಸಾವಿರ್, ಅಬ್ದುಲ್ ಇಬ್ಬರೂ ಕೂಡ ಶಿವಮೊಗ್ಗದ ತೀರ್ಥಹಳ್ಳಿಯವರಾಗಿದ್ದಾರೆ.

ತಲೆಮರೆಸಿಕೊಂಡಿರುವ ಇವರ ಪತ್ತೆ ಹಚ್ಚುವ ಮತ್ತು ಬಂಸುವ ನಿಟ್ಟಿನಲ್ಲಿ ಕರ್ನಾಟಕ, ತಮಿಳುನಾಡು ಮತ್ತು ಉತ್ತರ ಪ್ರದೇಶದ 18 ಸ್ಥಳಗಳಲ್ಲಿ ಶೋಧ ನಡೆಸಲಾಗಿದೆ ಎಂದು ಎನ್‍ಐಎ ಮೂಲಗಳು ಮಾಹಿತಿ ನೀಡಿವೆ.
ಇದಲ್ಲದೆ, ಪ್ರಮುಖ ಆರೋಪಿಗಳಿಗೆ ಸೋಟಕ ಸಾಮಗ್ರಿ ಪೂರೈಸಿದ ಚಿಕ್ಕಮಗಳೂರಿನ ಕಳಸಾ ನಿವಾಸಿ ಮುಝಮ್ಮಿಲ್ ಶರೀಫ್ ಎಂಬಾತನನ್ನು ಮಾರ್ಚ್ 26ರಂದು ಬಂಸಲಾಗಿದೆ.

ಪೊಲೀಸ್ ಕಸ್ಟಡಿಯಲ್ಲಿರುವ ಈತನನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಪ್ರಕರಣದ ಸಾಕ್ಷ್ಯಗಳು ಮತ್ತು ಮಾಹಿತಿಗಳನ್ನು ಸಂಗ್ರಹಿಸಲು ಎನ್‍ಐಎ ತಲೆಮರೆಸಿಕೊಂಡಿರುವ ಮತ್ತು ಬಂಧಿತ ಆರೋಪಿಗಳ ಕಾಲೇಜು ಮತ್ತು ಶಾಲಾ ಸ್ನೇಹಿತರು ಸೇರಿದಂತೆ ಎಲ್ಲ ಪರಿಚಯಸ್ಥರನ್ನು ಕರೆಸಿ ವಿಚಾರಣೆ ನಡೆಸುತ್ತಿದೆ.

ಇದು ಭಯೋತ್ಪಾದಕ ಘಟನೆಯಾಗಿರುವುದರಿಂದ ಸಾಕ್ಷಿಗಳ ಗುರುತಿನ ಯಾವುದೇ ಮಾಹಿತಿಯು ತನಿಖೆಗೆ ಅಡ್ಡಿಯಾಗುವುದರ ಜತೆಗೆ ಅವರನ್ನು ಅಪಾಯಕ್ಕೆ ತಳ್ಳಬಹುದು. ಅಲ್ಲದೇ, ಪರಿಶೀಲಿಸದ ಸುದ್ದಿಗಳು ಪ್ರಕರಣದ ಪರಿಣಾಮಕಾರಿ ತನಿಖೆಗೂ ಅಡ್ಡಿಯಾಗಿವೆ. ತಲೆಮರೆಸಿಕೊಂಡಿರುವ ಆರೋಪಿಗಳ ಬಂಧನಕ್ಕೆ ಎಲ್ಲರ ಸಹಕಾರವನ್ನು ಎನ್‍ಐಎ ಕೋರಿದೆ.

2022ರ ಆಗಸ್ಟ್ 15ರಂದು ಸಾವರ್ಕರ್ ಫ್ಲೆಕ್ಸ್ ಹಾಕುವ ವಿಚಾರದಲ್ಲಿ ಶಿವಮೊಗ್ಗದಲ್ಲಿರುವ ಅಮೀರ್ ಅಹಮದ್ ವೃತ್ತದಲ್ಲಿ ಘರ್ಷಣೆ ನಡೆಯುತ್ತದೆ. ಈ ಸಂದರ್ಭದಲ್ಲಿ ಬಟ್ಟೆ ಅಂಗಡಿ ನೌಕರ ಪ್ರೇಮ್‍ಸಿಂಗ್‍ಗೆ ಚಾಕು ಇರಿತ ಪ್ರಕರಣಕ್ಕೆ ಸಂಬಂಸಿದಂತೆ ಜಬೀಯುಲ್ಲಾ ಎಂಬಾತನ ಬಂಧನವಾಗುತ್ತದೆ. ಆತನ ವಿಚಾರಣೆ ಮತ್ತು ಮೊಬೈಲ್ ದಾಖಲೆ ಪರಿಶೀಲನೆಯ ವೇಳೆ ಆತ ಹಲವರ ಜೊತೆ ಸಂವಹನ ನಡೆಸಿದ ವಿಚಾರ ತಿಳಿದು ಬರುತ್ತದೆ. ಈ ಆಧಾರದಲ್ಲಿ ತನಿಖೆ ನಡೆಸಿದಾಗ ಟ್ರಯಲ್ ಬಾಂಬ್ ಸ್ಫೋಟದ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.

ಈ ಪ್ರಕರಣದ ಆರೋಪಿಯಾಗಿದ್ದ ಶಾರೀಕ್ ನಾಪತ್ತೆಯಾಗಿದ್ದ. ಆದರೆ ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸಿಡಿಸಲು ರಿಕ್ಷಾದಲ್ಲಿ ತೆರಳುತ್ತಿದ್ದಾಗ ಬಾಂಬ್ ಸೋಟಗೊಂಡ ಪರಿಣಾಮ ಶಾರೀಕ್ ಸಿಕ್ಕಿಬಿದ್ದಿದ್ದ.ಬಂಧನಕ್ಕೆ ಒಳಗಾಗಿರುವ ಸೈಯದ್ ಯಾಸಿನ್, ಮಾಜ್ ಮುನೀರ್, ಶಾರೀಕ್ ಅಹ್ಮದ್ ಶಿಮೊಗ್ಗದ ಅಕ್ಷರ ಕಾಲೇಜಿನಲ್ಲಿ ಒಟ್ಟಿಗೆ ದ್ವಿತೀಯ ಪಿಯುಸಿ ಅಭ್ಯಾಸ ಮಾಡಿದ್ದರು.

ಬಳಿಕ ಯಾಸಿನ್ ಶಿವಮೊಗ್ಗದಲ್ಲಿ ಎಂಜಿನಿಯರಿಂಗ್ ಓದಿದ್ದರೆ ಮುನೀರ್ ಮಂಗಳೂರಿನ ಮುಡಿಪು ಸಮಿಪದ ಕಾಲೇಜಿನಲ್ಲಿ ಅಂತಿಮ ವರ್ಷದ ಎಂಟೆಕ್ ಓದುತ್ತಿದ್ದ. ತೀರ್ಥಹಳ್ಳಿ ಮೂಲದ ಶಾರೀಕ್ ಮಹ್ಮದ್ ಬಟ್ಟೆ ಅಂಗಡಿಯೊಂದರಲ್ಲಿ ಸೇಲ್ಸ್ ಮ್ಯಾನ್ ಆಗಿ ಕೆಲಸ ಮಾಡಿಕೊಂಡಿದ್ದ.

ಸೈಯದ್ ಯಾಸಿನ್ ನಿವಾಸದಿಂದ 3-4 ದೂರದಲ್ಲಿರುವ ಪುರಲೆ ಸಮೀಪದ ತುಂಗಾ ನದಿ ತೀರದ್ದಲ್ಲಿ ಇವರೆಲ್ಲ ಟ್ರಯಲ್ ಬಾಂಬ್ ಸ್ಫೋಟ ಮಾಡುತ್ತಿದ್ದರು. ಈ ಮೂವರು ಶಿವಮೊಗ್ಗವನ್ನು ಕೇಂದ್ರ ಸ್ಥಳವನ್ನಾಗಿಸಿಕೊಂಡು ಮಂಗಳೂರು ಸೇರಿದಂತೆ ವಿವಿಧೆಡೆ ಉಗ್ರ ಚಟುವಟಿಕೆ ನಡೆಸಲು ಸಂಚು ರೂಪಿಸಿದ್ದರು. ಮೂವರೂ ಬಾಂಬ್ ತಯಾರಿಸುವ ಬಗ್ಗೆ ತರಬೇತಿ ಪಡೆದಿದ್ದರು.

RELATED ARTICLES

Latest News