Monday, October 7, 2024
Homeರಾಜ್ಯನಿಗಮ ಮಂಡಳಿ ನೇಮಕಾತಿ ಚರ್ಚೆಗೆ ಸಿಎಂ,ಡಿಸಿಎಂ ದೆಹಲಿಗೆ

ನಿಗಮ ಮಂಡಳಿ ನೇಮಕಾತಿ ಚರ್ಚೆಗೆ ಸಿಎಂ,ಡಿಸಿಎಂ ದೆಹಲಿಗೆ

ಬೆಂಗಳೂರು,ಜ.1- ಲೋಕಸಭೆ ಚುನಾವಣೆ ತಯಾರಿ ನಿಗಮ ಮಂಡಳಿ ನೇಮಕಾತಿ ಸೇರಿದಂತೆ ವಿವಿಧ ವಿಚಾರಗಳ ಕುರಿತು ಹೈಕಮಾಂಡ್ ಜೊತೆ ಚರ್ಚೆ ನಡೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜ.4 ರಂದು ದೆಹಲಿಗೆ ತೆರಳಲಿದ್ದಾರೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ನಡೆಯಲಿರುವ ಸಭೆಯಲ್ಲಿ ಕರ್ನಾಟಕದಲ್ಲಷ್ಟೇ ಅಲ್ಲ, ವಿವಿಧ ರಾಜ್ಯಗಳ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರು, ಶಾಸಕಾಂಗ ಪಕ್ಷದ ನಾಯಕರು, ಪಕ್ಷದ ಸರ್ಕಾರಗಳು ಅಧಿಕಾರದಲ್ಲಿರುವ ರಾಜ್ಯದ ಮುಖ್ಯಮಂತ್ರಿಗಳು ಸಭೆಯಲ್ಲಿ ಭಾಗವಹಿಸಲಿದ್ದಾರೆ. ಈ ಸಭೆಯಲ್ಲಿ ಲೋಕಸಭೆ ಚುನಾವಣೆಗೆ ತಯಾರಿ ನಡೆಸುವ ಸಂಬಂಧಪಟ್ಟಂತೆ ಮಹತ್ವದ ಚರ್ಚೆಗಳಾಗುವ ಸಾಧ್ಯತೆಗಳಿವೆ.

ಅಭ್ಯರ್ಥಿಗಳ ಆಯ್ಕೆ, ಇಂಡಿಯಾ ರಾಜಕೀಯ ಮೈತ್ರಿಕೂಟದ ನಡುವಿನ ಸೀಟು ಹಂಚಿಕೆ ಸೇರಿದಂತೆ ವಿವಿಧ ವಿಚಾರಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಸುವ ಸಾಧ್ಯತೆಯಿದೆ. ಇದೇ ರೀತಿ ಕರ್ನಾಟಕದಲ್ಲಿನ ನಿಗಮ ಮಂಡಳಿಗಳ ನೇಮಕಾತಿ ವಿಷಯವಾಗಿಯೂ ಚರ್ಚೆಯಾಗುವ ನಿರೀಕ್ಷೆಗಳಿವೆ. ಕಾಂಗ್ರೆಸ್‍ನ ಕಾರ್ಯಕರ್ತರು, ಮುಖಂಡರು, ಶಾಸಕರು, ನಿಗಮ ಮಂಡಳಿಗಳ ನೇಮಕಾತಿಯಾಗಲಿದೆ, ತಮಗೆ ಅವಕಾಶ ಸಿಗಲಿದೆ ಎಂಬ ನಿರೀಕ್ಷೆಯಲ್ಲಿದ್ದಾರೆ. ಆದರೆ ಕಳೆದ 7 ತಿಂಗಳಿನಿಂದಲೂ ನಿಗಮ ಮಂಡಳಿಗಳಿಗೆ ನೇಮಕಾತಿಯಲ್ಲೇ ಕಾಲಾಹರಣ ಮಾಡುತ್ತಿರುವುದು ವ್ಯಾಪಕ ಅಸಮಾಧಾನಕ್ಕೂ ಕಾರಣವಾಗಿದೆ.

ಈ ಮೊದಲು ನಾಲ್ಕು ಬಾರಿ ಸಭೆಗಳಾಗಿ ಚರ್ಚೆಗಳಾಗಿವೆ. ಮುಖ್ಯಮಂತ್ರಿ ಹಾಗೂ ಉಪಮುಖ್ಯ ಮಂತ್ರಿ ಎರಡು-ಮೂರು ಬಾರಿ ದೆಹಲಿಗೆ ಭೇಟಿ ನೀಡಿ ಬರಿಗೈಲಿ ಮರಳಿದ್ದಾರೆ. ಮೂಲಗಳ ಪ್ರಕಾರ ರಾಜ್ಯದ ನಾಯಕರು ಸಂಭವನೀಯ ಅಧ್ಯಕ್ಷರ ಪಟ್ಟಿಯನ್ನು ಸಿದ್ಧಪಡಿಸಿ ಹೈಕಮಾಂಡ್‍ಗೆ ಸಲ್ಲಿಸಿದ್ದಾರೆ. ಅದರಲ್ಲಿ ಕೆಲವು ಭಿನ್ನಮತಗಳಿದ್ದು, ಅದನ್ನು ಬಗೆಹರಿಸಿಕೊಳ್ಳುವಂತೆ ಹೈಕಮಾಂಡ್ ಸೂಚನೆ ನೀಡಿದೆ. ಆದರೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಯವರು ಪ್ರತಿಷ್ಠೆಗೆ ಬಿದ್ದಿರುವುದರಿಂದ ಪಟ್ಟಿ ಅಂತಿಮಗೊಂಡಿಲ್ಲ ಎಂಬ ಮಾಹಿತಿ ಇದೆ. ಪ್ರತಿ ಬಾರಿ ದೆಹಲಿಗೆ ಹೋದಾಗಲೂ ಬೇರೆಬೇರೆ ವಿಚಾರಗಳು ಚರ್ಚೆಯಾಗುತ್ತಿದ್ದು, ನಿಗಮ ಮಂಡಳಿ ಕಾರ್ಯಕರ್ತರಿಗೆ ಮರೀಚಿಕೆಯಾಗಿಯೇ ಉಳಿದಿದೆ.

ಇತ್ತೀಚೆಗೆ ಬೆಂಗಳೂರಿನಲ್ಲಿ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನಖರ್ಗೆ, ಶೀಘ್ರವೇ ನೇಮಕಾತಿ ಪಟ್ಟಿಗೆ ಅಂಗೀಕಾರ ನೀಡುವುದಾಗಿ ತಿಳಿಸಿದರು. ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳಿಬ್ಬರೂ ದೆಹಲಿಗೆ ಹೋಗುವ ಮುನ್ನ ನಿಗಮ ಮಂಡಳಿಗಳ ನೇಮಕಾತಿ ಪಟ್ಟಿಯನ್ನು ಅಂತಿಮಗೊಳಿಸಿಕೊಂಡೇ ಬರುವುದಾಗಿ ಹೇಳಿದ್ದರು. ಆದರೆ ವಾಪಸ್ ಬಂದ ನಂತರ ಅದರ ಬಗ್ಗೆ ಚಕಾರ ಎತ್ತುತ್ತಿಲ್ಲ. ಮೊದಲ ಹಂತದಲ್ಲಿ ಶಾಸಕರಿಗೆ, ಎರಡನೇ ಹಂತದಲ್ಲಿ ಕಾರ್ಯಕರ್ತರು, ಮುಖಂಡರು ಹಾಗೂ ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡ ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸಲು ನೇಮಕಾತಿ ಮಾಡುವುದಾಗಿ ತಿಳಿಸಿದರು. ಆದರೆ ಆ ಕಾಲ ಇನ್ನೂ ಕೂಡದೇ ಇರುವುದು ನಾನಾ ರೀತಿಯ ಚರ್ಚೆಗಳನ್ನು ಹುಟ್ಟುಹಾಕಿದೆ.

RELATED ARTICLES

Latest News