ಬೆಂಗಳೂರು, ಏ.19- ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಹಲವಾರು ತಿಂಗಳುಗಳಿಂದ ತಲೆಮರೆಸಿಕೊಂಡಿದ್ದ ಆರು ಮಂದಿ ರೌಡಿಗಳನ್ನು ದಕ್ಷಿಣ ವಿಭಾಗದ ಪೊಲೀಸರು ಬಂಧಿಸಿದ್ದಾರೆ.
ಐದು ಮಂದಿ ರೌಡಿಗಳ ಸೆರೆ:
ಬನಶಂಕರಿ, ತಿಲಕ್ನಗರ, ಜಯನಗರ ಮತ್ತು ಜೆ.ಪಿ.ನಗರ ಪೊಲೀಸ್ ಠಾಣೆಗಳ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ, ರೌಡಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷರೋಪಣ ಪಟ್ಟಿ ಸಲ್ಲಿಸಲಾಗಿತ್ತು. ಆದರೆ ರೌಡಿಗಳು ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದು, ಅವರ ವಿರುದ್ಧ ವಾರೆಂಟ್ ಜಾರಿ ಮಾಡಲಾಗಿತ್ತು.
ರೌಡಿಗಳ ಪತ್ತೆಗಾಗಿ ಜಯನಗರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರನ್ನೊಳಗೊಂಡ ಒಂದು ವಿಶೇಷ ತಂಡವನ್ನು ರಚಿಸಿ ತನಿಖೆ ಕೈಗೊಂಡ ಪೊಲೀಸರು ಬರೋಬ್ಬರಿ 24 ಪ್ರಕರಣಗಳಲ್ಲಿ ಭಾಗಿಯಾಗಿ ಹಲವಾರು ತಿಂಗಳುಗಳಿಂದ ತಲೆಮರೆಸಿಕೊಂಡಿದ್ದ ಐದು ಮಂದಿ ರೌಡಿಗಳನ್ನು ಬಂಧಿಸಿದ್ದಾರೆ.
ರೌಡಿಗಳ ಬಂಧನದಿಂದ, ಬನಶಂಕರಿ ಪೊಲೀಸ್ ಠಾಣೆಯ 21 ಪ್ರಕರಣಗಳು, ತಿಲಕ್ನಗರ, ಜಯನಗರ ಮತ್ತು ಜೆ.ಪಿ ನಗರ ಠಾಣೆಯ ತಲಾ 1 ಪ್ರಕರಣ ಸೇರಿದಂತೆ ಒಟ್ಟು 24 ಪ್ರಕರಣಗಳಲ್ಲಿ ಭಾಗಿಯಾಗಿರುವುದು ವಿಚಾರಣೆಯಿಂದ ಗೊತ್ತಾಗಿದೆ.
ಸಿದ್ದಾಪುರ:
ಕಳೆದ ಒಂದೂವರೆ ವರ್ಷದಿಂದ ತಲೆಮರೆಸಿಕೊಂಡಿದ್ದ ರೌಡಿಯನ್ನು ಬಂಸಲಾಗಿದ್ದು, ಈತನ ವಿರುದ್ಧ 16 ಪ್ರಕರಣಗಳು ದಾಖಲಾಗಿವೆ.ತಲೆಮರೆಸಿಕೊಂಡಿದ್ದ ಈತನ ವಿರುದ್ಧ ನ್ಯಾಯಾಲಯವು ಪೊ್ರಕ್ಲಮೇಷನ್ ಹಾಗೂ ವಾರೆಂಟ್ಗಳು ಜಾರಿ ಮಾಡಿದೆ.
ಈ ರೌಡಿಯನ್ನು ಪತ್ತೆಹಚ್ಚಲು ಜಯನಗರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರವರ ನೇತೃತ್ವದಲ್ಲಿ ಒಂದು ವಿಶೇಷ ತಂಡವನ್ನು ರಚಿಸಲಾಗಿತ್ತು. ಈ ವಿಶೇಷ ತಂಡವು ಕಾರ್ಯಾಚರಣೆ ಕೈಗೊಂಡು ಜಯನಗರದ ಸೋಮೇಶ್ವರನಗರದ ಹೆಬ್ಬಾಗಿಲಿನ ಹತ್ತಿರ ತಲೆಮರೆಸಿಕೊಂಡಿದ್ದ ರೌಡಿಯನ್ನು ವಶಕ್ಕೆ ಪಡೆದಿದೆ.
ಈತ 2011ನೇ ಸಾಲಿನ ಸಿದ್ದಾಪುರ ಪೊಲೀಸ್ ಠಾಣೆಯ ಪ್ರ್ರಕರಣಕ್ಕೆ ಸಂಬಂಧಿಸಿದಂತೆ, ವಾರೆಂಟ್ ಜಾರಿಯಾಗಿದ್ದರೂ ಸಹ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದನು. ಈತನ ವಿರುದ್ಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ 10 ಪ್ರಕರಣ, ಎಸ್.ಆರ್.ನಗರ 2, ಅಮೃತ್ತಹಳ್ಳಿ 2 ಮತ್ತು ಎಸ್.ಜೆ.ಪಾರ್ಕ್ ಮತ್ತು ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯ ತಲಾ 1 ಪ್ರಕರಣ ಸೇರಿದಂತೆ ಒಟ್ಟು 16 ಪ್ರಕರಣಗಳು ದಾಖಲಾಗಿರುತ್ತವೆ.
ಈ ಕಾರ್ಯಾಚರಣೆಯನ್ನು ದಕ್ಷಿಣ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಲೋಕೇಶ್ ಭರಮಪ್ಪ ಜಗಲಾಸರ್, ಜಯನಗರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ನಾರಾಯಣಸ್ವಾಮಿ ಮಾರ್ಗದರ್ಶನದಲ್ಲಿ ಸಿದ್ದಾಪುರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್, ಬನಶಂಕರಿ ಠಾಣೆ ಇನ್ಸ್ಪೆಕ್ಟರ್ ಮತ್ತು ಸಿಬ್ಬಂದಿ ತಂಡ ಈ ಕಾರ್ಯಾಚರಣೆ ಕೈಗೊಂಡಿತ್ತು.