Sunday, November 24, 2024
Homeರಾಜ್ಯಹುಬ್ಬಳ್ಳಿ: ಧರ್ಮದರ್ಶಿ ಕೊಲೆ ಆರೋಪಿ ಸೆರೆ

ಹುಬ್ಬಳ್ಳಿ: ಧರ್ಮದರ್ಶಿ ಕೊಲೆ ಆರೋಪಿ ಸೆರೆ

ಹುಬ್ಬಳ್ಳಿ, ಜು.23- ನಗರದ ಎಪಿಎಂಸಿಯಲ್ಲಿರುವ ದಕ್ಷಿಣ ವೈಷ್ಣೋದೇವಿ ದೇವಸ್ಥಾನದ ಧರ್ಮದರ್ಶಿ ದೇವೇಂದ್ರಪ್ಪ ಮಹಾದೇವಪ್ಪ ವನಹಳ್ಳಿ ಎಂಬವರ ಭೀಕರ ಹತ್ಯೆ ಪ್ರಕರಣಕ್ಕೆ ಸಂಬಂಸಿದಂತೆ ಹತ್ಯೆಗೈದ ಆರೋಪಿಯನ್ನು ಪ್ರಕರಣ ದಾಖಲಾದ 24 ಗಂಟೆಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಹುಧಾ ಮಹಾನಗರ ಪೊಲೀಸ್ ಕಮೀಷನರ್ ಎನ್. ಶಶಿಕುಮಾರ್ ಹೇಳಿದರು.

ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿಯ ಕಮರಿಪೇಟ್‍ನ ನಿವಾಸಿ ಸಂತೋಷ್ ತಿಪ್ಪಣ್ಣಾ ಬೋಜಗಾರ (44) ಎಂಬ ಆರೋಪಿಯನ್ನು ನಗರದ ಚೆನ್ನಮ್ಮ ವೃತ್ತದಲ್ಲಿ ಬಂಧಿಸಲಾಗಿದೆ.
ದೇವಸ್ಥಾನದ ಧರ್ಮದರ್ಶಿಯನ್ನು ಹತ್ಯೆ ಮಾಡಿದ್ದು, ಆರೋಪಿಯ ಕೆಲ ಸಂಬಂಧಿಕರು ಕೊಲೆಯಾದ ವ್ಯಕ್ತಿಯೊಂದಿಗೆ ಸೇರಿಕೊಂಡು ಆರೋಪಿತನಿಗೆ ಹಾಗೂ ಆತನ ಕುಟುಂಬದವರಿಗೆ ಕೆಲವು ಪೂಜೆಗಳನ್ನು ಮಾಡಿಸುವ ಮೂಲಕ ನಮ್ಮ ಕುಟುಂಬಕ್ಕೆ ಹಾನಿ ಉಂಟು ಮಾಡಿದ್ದಾರೆಂಬವುದನ್ನು ಈತ ಗಟ್ಟಿಯಾಗಿ ನಂಬಿದ್ದನು. ಇದರಿಂದ ದೇವೇಂದ್ರಪ್ಪ ಕೊಲೆಗೆ ಸಂಚು ರೂಪಿಸಿ ಕೊಲೆ ಮಾಡಿರುವುದಾಗಿ ಆರೋಪಿ ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾನೆ ಎಂದು ತಿಳಿಸಿದರು.

ಇದೇ ಹಿನ್ನೆಲೆಯಲ್ಲಿಯೇ ದೇವೇಂದ್ರಪ್ಪನ ಹತ್ಯೆಗೆ 2022 ರಲ್ಲಿ ಮಾರ್ಚ್‍ನಲ್ಲಿ ಕೊಲೆಗೂ ಯತ್ನಿಸಿದ್ದನು. ಈ ಸಂಬಂಧಿಸಿದಂತೆ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆ ಸಂದರ್ಭದಲ್ಲಿ ನಡೆಸಿದ ತನಿಖೆ ವೇಳೆ ಆರೋಪಿ ಗುರುತು ಸಿಕ್ಕಿರಲಿಲ್ಲ. ಈ ಆರೋಪಿ ಸೆರೆಯಾದ ನಂತರದಲ್ಲಿ ಎರಡು ಪ್ರಕರಣದ ಕೆಲ ತಾಂತ್ರಿಕ ಸಾಕ್ಷ್ಯಧಾರಗಳಿಂದ ಈತನೇ 2022 ರಲ್ಲಿಯೂ ಕೊಲೆಗೆ ಯತ್ನಿಸಿದ್ದನು ಎಂದು ತಿಳಿದು ಬಂದಿದೆ. ಅಲ್ಲದೇ, ಆರೋಪಿಯೂ ಇದನ್ನು ಒಪ್ಪಿಕೊಂಡಿದ್ದಾನೆ ಎಂದರು.

6 ವರ್ಷದ ಸಂಚು
ಆರೋಪಿಯು ಕಳೆದ ಆರುವರೆ ವರ್ಷದಿಂದ ಕೊಲೆ ಮಾಡಬೇಕೆಂದು ನಿರ್ಧಾರ ಮಾಡಿದ್ದನು. ಈ ಹಿನ್ನೆಲೆಯಲ್ಲಿ ದೇವೇಂದ್ರಪ್ಪನ ಚಲನವಲನಗಳ ಮೇಲೆ ನಿರಂತರ ನಿಗಾವಹಿಸಿದ್ದನು. ಅಲ್ಲದೇ, ಒಂಟಿಯಾಗಿ ಸಿಕ್ಕಾಗ ಕೊಲೆ ಮಾಡುವ ಉದ್ದೇಶದಿಂದ ಆತನ ಮನೆ, ದೇವಸ್ಥಾನ ಸುತ್ತ ಓಡಾಡಿದ್ದು, ಸಿಸಿಟಿವಿ ದೃಶ್ಯಾವಳಿಯಲ್ಲಿ ಸೆರೆಯಾಗಿದೆ ಎಂದರು.

ಆರೋಪಿಯ ಬಂಧನಕ್ಕಾಗಿ ಪ್ರಕರಣ ದಾಖಲಾದ 24 ಗಂಟೆಯಲ್ಲಿ ಬಂಧನ ಮಾಡಿದ್ದು, 180 ಕ್ಕೂ ಹೆಚ್ಚು ಸಿಸಿ ಕ್ಯಾಮರಾ ಪರಿಶೀಲಿಸಿ ಆರೋಪಿಯ ಗುರುತು ಪತ್ತೆ ಹಚ್ಚಿ, ಸಂಶಯಾಸ್ಪದ ವ್ಯಕ್ತಿಯ ಮಾಹಿತಿ ನೀಡುವಂತೆ ಮನವಿ ಮಾಡಿದ್ದೇವು. ಸೋಮವಾರ ರಾತ್ರಿ 11 ಗಂಟೆ ಸುಮಾರಿಗೆ ಚೆನ್ನಮ್ಮ ಸರ್ಕಲ್ ಸುತ್ತಮುತ್ತಲಿನಲ್ಲಿ ಆರೋಪಿ ಓಡಾಡುತ್ತಿದ್ದಾನೆ ಎಂಬ ಖಚಿತ ಮಾಹಿತಿ ಮೇರೆಗೆ ಬಂಧಿಸಲಾಗಿದೆ ಎಂದರು.

ಆರೋಪಿಯನ್ನು ಬಂಧನ ಮಾಡುವಲ್ಲಿ ಡಿಸಿಪಿ ಮಹಾನಿಂಗ ನಂದಗಾವಿ, ಅಪರಾಧ ವಿಭಾಗದ ಡಿಸಿಪಿ ರವೀಶ್ ಎಸ್, ನವನಗರ ಠಾಣೆಯ ಇನ್ಸ್‍ಪೆಕ್ಟರ್ ಸಮ್ಮಿವುಲ್ಲಾ ಹಾಗೂ ಸಿಬ್ಬಂದಿ ಕ್ಷಿಪ್ರ ಕಾರ್ಯಾಚರಣೆಯಿಂದ ಪ್ರಕರಣ ಬೇಧಿಸಿದ್ದು, ತ್ವರಿತ ಕಾರ್ಯವನ್ನು ಪ್ರಶಂಸಿಸಿ 50 ಸಾವಿರ ಬಹುಮಾನ ಘೋಷಣೆ ಮಾಡಲಾಗಿದೆ ಎಂದರು.

RELATED ARTICLES

Latest News