ನವದೆಹಲಿ,ಡಿ.30- ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಮಹತ್ವದ ಘೋಷಣೆಯೊಂದನ್ನು ಮಾಡಿದ್ದು, ಮುಂಬರುವ ಚುನಾವಣೆಯಲ್ಲಿ ಆಮ್ ಆದಿ ಪಕ್ಷ (ಎಎಪಿ) ಮತ್ತೆ ಅಧಿಕಾರಕ್ಕೆ ಬಂದರೆ ದೇವಸ್ಥಾನಗಳ ಅರ್ಚಕರಿಗೆ 18,000 ರೂ. ಮಾಸಿಕ ವೇತನ ಮತ್ತು ಗುರುದ್ವಾರಗಳ ಅನುದಾನವನ್ನು ನೀಡುವುದಾಗಿ ಪ್ರಕಟಿಸಿದ್ದಾರೆ.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪುರೋಹಿತರು ಮತ್ತು ಗ್ರ್ಯಾಂಥಿಗಳು ನಮ ಧಾರ್ಮಿಕ ಪದ್ಧತಿಗಳ ಪಾಲಕರಾಗಿದ್ದಾರೆ. ಸಮಾಜಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ. ದುರದೃಷ್ಟವಶಾತ್ ಅವರ ಆರ್ಥಿಕ ಯೋಗಕ್ಷೇಮದ ಬಗ್ಗೆ ಯಾರೂ ಕಾಳಜಿ ವಹಿಸಿಲ್ಲ. ಇಂದು ಅವರಿಗಾಗಿ ನಾನು ಮಹತ್ವದ ಘೋಷಣೆ ಮಾಡುತ್ತಿದ್ದೇನೆ ಎಂದರು.
ಪುರೋಹಿತರದ್ದು ಆಚಾರ-ವಿಚಾರಗಳನ್ನು ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ಕೊಂಡೊಯ್ದ ವರ್ಗ. ಅವರು ತಮ ಕುಟುಂಬದ ಬಗ್ಗೆ ಎಂದಿಗೂ ಗಮನ ಹರಿಸಲಿಲ್ಲ ಮತ್ತು ನಾವು ಅವರತ್ತ ಗಮನಹರಿಸುತ್ತಿದ್ದೇವೆ ಎಂದರು. ಈ ಯೋಜನೆಯ ಹೆಸರು ಪೂಜಾರಿ ಗ್ರಂಥಿ ಸಮಾನ್ ಯೋಜನೆ . ಇದು ದೇಶದಲ್ಲೇ ಪ್ರಥಮ ಬಾರಿಗೆ ನಡೆಯುತ್ತಿದೆ. ನಾಳೆಯಿಂದ ಈ ಯೋಜನೆಗೆ ನೋಂದಣಿ ಪ್ರಾರಂಭವಾಗಲಿದೆ. ದೆಹಲಿಯ ಕನ್ನಾಟ್ ಪ್ಲೇಸ್ನಲ್ಲಿರುವ ಹನುಮಾನ್ ದೇವಾಲಯಕ್ಕೆ ಭೇಟಿ ನೀಡಿದ ನಂತರ ಈ ಯೋಜನೆಯನ್ನು ಪ್ರಾರಂಭಿಸುವುದಾಗಿ ಅವರು ತಿಳಿಸಿದರು.
ಈ ನೋಂದಣಿ ಪ್ರಕ್ರಿಯೆಗೆ ಯಾರೂ ಅಡೆತಡೆಗಳನ್ನು ಸೃಷ್ಟಿಸಬೇಡಿ ಎಂದು ನಾನು ಬಿಜೆಪಿಯನ್ನು ವಿನಂತಿಸುತ್ತೇನೆ. ಇದನ್ನು ತಡೆಯುವುದು ಪಾಪ ಮಾಡಿದಂತಾಗುತ್ತದೆ. ಏಕೆಂದರೆ ಅವು ದೇವರಿಗೆ ನಮ ಸೇತುವೆಯಾಗಿರುತ್ತದೆ ಎಂದು ಹೇಳಿದರು.
ಅರವಿಂದ್ ಕೇಜ್ರಿವಾಲ್ ಅವರ ಈ ಘೋಷಣೆ ದೆಹಲಿಯ ಜನರ ಕಲ್ಯಾಣ ಯೋಜನೆಗಳ ಮುಂದುವರಿಕೆಯಾಗಿದೆ. ಅವರು ಮೊದಲು ಹಿರಿಯ ನಾಗರಿಕರಿಗೆ ಸಂಜೀವನಿ ಯೋಜನೆ, ನಂತರ ಮಹಿಳಾ ಸಮಾನ್ ಯೋಜನೆ ಮತ್ತು ಈಗ ಅರ್ಚಕರಿಗೆ ಮಾಸಿಕ ವೇತನ ಯೋಜನೆಯನ್ನು ಘೋಷಿಸಿದ್ದಾರೆ.