Wednesday, September 11, 2024
Homeರಾಜಕೀಯ | Politicsಸರ್ಕಾರದ ವಿರುದ್ಧ ಅಶ್ವತ್ಥ್ ನಾರಾಯಣ್‌ ವಾಗ್ದಾಳಿ

ಸರ್ಕಾರದ ವಿರುದ್ಧ ಅಶ್ವತ್ಥ್ ನಾರಾಯಣ್‌ ವಾಗ್ದಾಳಿ

ಬೆಂಗಳೂರು,ಆ.22- ಭ್ರಷ್ಟಾಚಾರವನ್ನೇ ಉಂಡೆದ್ದು ಮಲಗುತ್ತಿರುವ ಕಾಂಗ್ರೆಸ್‌‍ ನೇತೃತ್ವದ ಸರ್ಕಾರ ಅಧಿಕಾರದಲ್ಲಿ ಇದ್ದರೆಷ್ಟು? ಬಿಟ್ಟರೆಷ್ಟು? ಮೊದಲು ಅಧಿಕಾರದಿಂದ ತೊಲಗಲಿ ಎಂದು ಮಾಜಿ ಸಚಿವ ಡಾ.ಅಶ್ವತ್ಥ ನಾರಾಯಣ ತೀವ್ರ ವಾಗ್ದಾಳಿ ನಡೆಸಿದರು.

ಫ್ರೀಡಂ ಪಾರ್ಕ್‌ನಲ್ಲಿ ಬಿಜೆಪಿ ವತಿಯಿಂದ ಹಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಭ್ರಷ್ಟಾಚಾರ ರಹಿತ ಆಡಳಿತ ನಡೆಸುತ್ತೇವೆ ಎಂದು ಜನತೆ ಮುಂದೆ ವಾಗ್ದಾನ ಮಾಡಿದ್ದ ಕಾಂಗ್ರೆಸ್‌‍ ಸರ್ಕಾರ ಭ್ರಷ್ಟಾಚಾರವನ್ನೇ ಒಂದಂಶದ ಕಾರ್ಯಕ್ರಮ ಮಾಡಿಕೊಂಡಿದೆ ಎಂದು ವ್ಯಂಗ್ಯವಾಡಿದರು.

ಎಷ್ಟು ಬೇಗ ಈ ಸರ್ಕಾರ ತೊಲಗುತ್ತದೆಯೋ ಎಂದು ರಾಜ್ಯದ ಜನತೆ ಎದುರು ನೋಡುತ್ತಿದ್ದಾರೆ. ಎಲ್ಲಿ ನೋಡಿದರೂ ಲಂಚ ಲಂಚ ಎಂದು ಜನರು ಹಿಡಿಶಾಪ ಹಾಕುತ್ತಿದ್ದಾರೆ. ಇಂತಹ ದರಿದ್ರ ಸರ್ಕಾರ ಇದ್ದರೂ ಒಂದೇ, ಇಲ್ಲದಿದ್ದರೂ ಒಂದೇ ಎಂದು ಕೆಂಡ ಕಾರಿದರು.

ಕಾರ್ಯಾಂಗದ ಮುಖ್ಯಸ್ಥನಾಗಿರುವ ರಾಜ್ಯಪಾಲರು ದಾಖಲೆಗಳನ್ನು ಪರಿಶೀಲಿಸಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುತ್ತಾರೆ. ಕಾನೂನುಬದ್ಧವಾಗಿ ಅದನ್ನು ಎದುರಿಸಬೇಕೇ ವಿನಃ ಬೆಂಬಲಿಗರನ್ನು ಛೂ ಬಿಟ್ಟು ಬಾಯಿಗೆ ಬಂದಂತೆ ಮಾತನಾಡಿಸುವುದು ಸಿದ್ದರಾಮಯ್ಯನವರಿಗೆ ಶೋಭೆ ತರುವುದಿಲ್ಲ ಎಂದು ಟೀಕಾ ಪ್ರಹಾರ ನಡೆಸಿದರು.

ರಾಜ್ಯಪಾಲರ ಅನುಮತಿಯನ್ನು ಪ್ರಶ್ನಿಸಿ ನೀವು ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಿ. ನ್ಯಾಯಾಲಯವು ಪರಿಶೀಲನೆ ನಡೆಸಿ ಆದೇಶ ನೀಡುತ್ತದೆ. ಅದನ್ನು ಬಿಟ್ಟು ರಾಜ್ಯಪಾಲರ ವಿರುದ್ಧ ಮನಸೋ ಇಚ್ಛೆ ಟೀಕೆ ಮಾಡುವುದು ಕಾಂಗ್ರೆಸ್‌‍ ಪಕ್ಷಕ್ಕಾಗಲೀ, ಸಿದ್ದರಾಮಯ್ಯನವರಿಗಾಗಲೀ ಶೋಭೆ ತರದು ಎಂದರು.

ಇದು ಭಂಡಗೆಟ್ಟ, ಮಾನಗೆಟ್ಟ ಸರ್ಕಾರ ಎಂದು ಪ್ರತಿಪಕ್ಷದವರಿಗಿಂತ ಆಡಳಿತ ಪಕ್ಷದ ಶಾಸಕರೇ ಹಿಡಿಶಾಪ ಹಾಕುತ್ತಿದ್ದಾರೆ. ವರ್ಗಾವಣೆ ದಂಧೆ ಬಿಟ್ಟರೆ ಅಭಿವೃದ್ಧಿ ಶೂನ್ಯ. ಸರ್ಕಾರದಲ್ಲಿ ಅಭಿವೃದ್ಧಿ ಎಂಬುದೇ ಮರೀಚಿಕೆಯಾಗಿದೆ. ಯಾವ ನೈತಿಕತೆ ಇಟ್ಟುಕೊಂಡು ಸರ್ಕಾರ ನಡೆಸುತ್ತಿದ್ದೀರಿ ಎಂದು ಅಶ್ವತ್ಥನಾರಾಯಣ ಪ್ರಶ್ನೆ ಮಾಡಿದರು.

ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿರುವ ಈ ಸರ್ಕಾರ ಅಧಿಕಾರದಲ್ಲಿ ಮುಂದುವರೆಯುವ ಯಾವುದೇ ನೈತಿಕತೆ ಉಳಿಸಿಕೊಂಡಿಲ್ಲ. ಸಾರ್ವಜನಿಕ ವೇದಿಕೆಯಲ್ಲಿ ಹೇಗೆ ಮಾತನಾಡಬೇಕೆಂಬ ಸಾಮಾನ್ಯ ಜ್ಞಾನವನ್ನು ಕಾಂಗ್ರೆಸ್‌‍ ಹೇಳಿಕೊಡಲಿರುವುದು ದುರಂತವೇ ಸರಿ ಎಂದು ವ್ಯಂಗ್ಯವಾಡಿದರು.

ಆಂಗ್ಲ ಮಾದರಿಯಲ್ಲಿ ರಾಜಭವನಕ್ಕೆ ನುಗ್ಗುತ್ತೇವೆ ಎನ್ನುತ್ತಿರುವ ವಿಧಾನಪರಿಷತ್‌ ಸದಸ್ಯ ಐವಾನ್‌ ಡಿಸೋಜಾ ವಿರುದ್ಧ ಪೊಲೀಸರು ಸುಮೋಟೊ ಪ್ರಕರಣ ದಾಖಲಿಸಿ ತತ್‌ ಕ್ಷಣವೇ ಬಂಧಿಸಬೇಕು. ಇಂತವರು ಸಮಾಜದಲ್ಲಿ ಇದ್ದರೆ ಅದು ಅಪಾಯಕಾರಿ ಎಂದು ಆತಂಕ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಶಾಸಕರಾದ ಕೆ.ಗೋಪಾಲಯ್ಯ, ವಿಧಾನಪರಿಷತ್‌ಸದಸ್ಯೆ ಭಾರತಿ ಶೆಟ್ಟಿ ಮತ್ತಿತರರು ಭಾಗಿಯಾಗಿದ್ದರು.

RELATED ARTICLES

Latest News