Friday, October 11, 2024
Homeಬೆಂಗಳೂರುಮದುವೆಯಾಗುವಂತೆ ಯುವತಿಗೆ ಪೀಡಿಸುತ್ತಿದ್ದ ಅಂಕಲ್‌ಗೆ ಇರಿದು ಪರಾರಿಯಾದ ಆಕೆಯ ಸ್ನೇಹಿತ

ಮದುವೆಯಾಗುವಂತೆ ಯುವತಿಗೆ ಪೀಡಿಸುತ್ತಿದ್ದ ಅಂಕಲ್‌ಗೆ ಇರಿದು ಪರಾರಿಯಾದ ಆಕೆಯ ಸ್ನೇಹಿತ

ಬೆಂಗಳೂರು, ಸೆ.18- ತನ್ನ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿಗೆ ಮದುವೆಯಾಗುವಂತೆ ಪುಸಲಾಯಿಸುತ್ತಿದ್ದ ಬಟ್ಟೆ ಅಂಗಡಿ ಮಾಲೀಕನಿಗೆ ಆಕೆಯ ಸ್ನೇಹಿತ ಚಾಕುವಿನಿಂದ ಇರಿದು ಪರಾರಿಯಾಗಿರುವ ಘಟನೆ ಸುದ್ದಗೊಂಟೆಪಾಳ್ಯ ಪೊಲೀಸ್‌‍ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಬಟ್ಟೆ ವ್ಯಾಪಾರಿ ಹಿತೇಂದ್ರಕುಮಾರ್‌ (51) ಇರಿತದಿಂದ ಗಾಯಗೊಂಡಿದ್ದಾರೆ. ಈತನ ಬಟ್ಟೆ ಅಂಗಡಿಯಲ್ಲಿ ಬೆಳಗಾವಿ ಮೂಲದ ಯುವತಿ ಕೆಲಸ ಮಾಡುತ್ತಿದ್ದು, ಆ ವೇಳೆ ಆಕೆಗೆ ಮದುವೆಯಾಗಲು ಪುಸಲಾಯಿಸುತ್ತಿದ್ದನು. ಈತನ ವರ್ತನೆಯಿಂದ ಬೇಸತ್ತು ಆಕೆ ಕೆಲಸ ಬಿಟ್ಟಿದ್ದಾಳೆ.

ತದನಂತರವೂ ಹಿತೇಂದ್ರಕುಮಾರ್‌ ಆಗಾಗ್ಗೆ ಆ ಯುವತಿಗೆ ಫೋನ್‌ ಮಾಡುತ್ತಿದ್ದನು. ಈ ವಿಷಯವನ್ನು ಯುವತಿ ತನ್ನ ಸ್ನೇಹಿತನೊಂದಿಗೆ ಹೇಳಿಕೊಂಡಿದ್ದಾಳೆ. ಆತನಿಗೆ ಬುದ್ದಿ ಕಲಿಸೋಣ ಎಂದು ಮಾತನಾಡಿಕೊಂಡು ಕಳೆದ ಮೂರು ದಿನಗಳ ಹಿಂದೆ ಬಟ್ಟೆ ವ್ಯಾಪಾರಿಯನ್ನು ಬಿಟಿಎಂ ಲೇಔಟ್‌ 16ನೇ ಮುಖ್ಯರಸ್ತೆಯ ಪಾರ್ಕ್‌ಗೆ ಯುವತಿ ಕರೆಸಿಕೊಂಡಿದ್ದಾಳೆ.

ಹಿತೇಂದ್ರಕುಮಾರ್‌ ಪಾರ್ಕ್‌ಗೆ ಬಂದು ಯುವತಿ ಜೊತೆ ಕುಳಿತು ಮಾತನಾಡುತ್ತಿದ್ದಾಗ ಅನುಚಿತ ವರ್ತನೆಗೆ ಪ್ರಯತ್ನಿಸಿದ್ದಾನೆ. ಇದನ್ನು ಮರೆಯಲ್ಲಿ ನಿಂತು ಗಮನಿಸಿದ ಆಕೆಯ ಸ್ನೇಹಿತ ಇವರ ಬಳಿ ಬಂದು ಏಕಾಏಕಿ ಹಿತೇಂದ್ರಕುಮಾರ್‌ ಕುತ್ತಿಗೆಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ.

ಇರಿತದಿಂದ ಗಾಯಗೊಂಡಿರುವ ಹಿತೇಂದ್ರಕುಮಾರ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಈ ಬಗ್ಗೆ ಸುದ್ದಗುಂಟೆಪಾಳ್ಯ ಪೊಲೀಸ್‌‍ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

RELATED ARTICLES

Latest News