Tuesday, February 27, 2024
Homeರಾಜ್ಯಹಿಂದುಳಿದ ಆಯೋಗದ ಸಮೀಕ್ಷೆಗೆ ಲಿಂಗಾಯತ ವೀರಶೈವ ಸಮುದಾಯದ ವಿರೋಧ ಇಲ್ಲ : ಸಚಿವ ಎಂ.ಬಿ.ಪಾಟೀಲ್

ಹಿಂದುಳಿದ ಆಯೋಗದ ಸಮೀಕ್ಷೆಗೆ ಲಿಂಗಾಯತ ವೀರಶೈವ ಸಮುದಾಯದ ವಿರೋಧ ಇಲ್ಲ : ಸಚಿವ ಎಂ.ಬಿ.ಪಾಟೀಲ್

ಬೆಂಗಳೂರು,ಡಿ.18- ಹಿಂದುಳಿದ ವರ್ಗಗಳ ಆಯೋಗದಿಂದ ನಡೆಸಲಾಗಿರುವ ಸಮೀಕ್ಷೆಗೆ ಲಿಂಗಾಯತ ವೀರಶೈವ ಸಮುದಾಯದ ವಿರೋಧ ಇಲ್ಲ. ಆದರೆ ವರದಿ ಬಹಿರಂಗಕ್ಕೂ ಮುನ್ನ ಉಪ ಸಮುದಾಯಗಳ ಜನಸಂಖ್ಯೆಯನ್ನು ಪರಿಗಣಿಸಿ ಸಮಗ್ರವಾಗಿ ಲೆಕ್ಕ ಹಾಕಬೇಕೆಂಬುದಷ್ಟೇ ನಮ್ಮ ಹಕ್ಕೊತ್ತಾಯ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ವರದಿಯನ್ನು ವಿರೋಧಿಸಿ ಲಿಂಗಾಯತ ಸಮುದಾಯದ ಶಾಸಕರು, ಸಚಿವರು, ಮುಖ್ಯಮಂತ್ರಿಯವರಿಗೆ ಪತ್ರ ನೀಡಿದ್ದಾರೆ ಎಂಬ ವರದಿಗೆ ಸ್ಪಷ್ಟನೆ ನೀಡಿದರು.

ಸರ್ಕಾರದ ಭಾಗವಾಗಿ ಸಚಿವರು ವರದಿಗೆ ಸಹಿ ಹಾಕಿದ್ದಾರೆ ಎಂಬ ಆಕ್ಷೇಪ ಅನಗತ್ಯ. ಇದರಲ್ಲಿ ಮುಚ್ಚುಮರೆ ಏನೂ ಇಲ್ಲ. ಎಲ್ಲರೂ ಈ ರೀತಿಯ ಮನವಿಗಳನ್ನು ನೀಡಿದ್ದಾರೆ. ನಮಗೂ ಆತಂಕಗಳಿವೆ. ಲಿಂಗಾಯತ ಸಮುದಾಯದಲ್ಲಿ 40 ರಿಂದ 50 ಉಪಸಮುದಾಯಗಳಿವೆ. ಲಿಂಗಾಯತ ಗಾಣಿಗ ಎಂದು ಬರೆಸಿದರೆ ಅವರಿಗೆ 2 ಎ ಸೌಲಭ್ಯ ಸಿಗುವುದಿಲ್ಲ. ಅದಕ್ಕಾಗಿ ಹಿಂದೂ ಗಾಣಿಗ ಎಂದು ಬರೆಸಿದ್ದಾರೆ.

ಸಾದರು, ಬಣಜಿಗ, ಕುಂಬಾರ, ಕಮ್ಮಾರ, ಉಪ್ಪಾರ, ಮಾಲಗಾರ ಸೇರಿದಂತೆ ಹಲವು ಜಾತಿಗಳು ಲಿಂಗಾಯತ ಎಂದು ಬರೆಸಿದರೆ 2 ಎ ಸೌಲಭ್ಯ ಸಿಗುವುದಿಲ್ಲ ಎಂಬ ಕಾರಣಕ್ಕೆ ಹಿಂದೂ ಎಂದು ಬರೆಸಿರುತ್ತಾರೆ.
ರೆಡ್ಡಿ ಲಿಂಗಾಯತರು ಕೂಡ 3 ಎ ಸೌಲಭ್ಯ ಲಭ್ಯವಾಗುತ್ತದೆ ಎಂಬ ಕಾರಣಕ್ಕಾಗಿ ಹಿಂದೂ ಎಂದು ನಮೂದಿಸಿದ್ದಾರೆ. ಲಿಂಗಾಯತ ಉಪ ಸಮುದಾಯಗಳ ಬಗ್ಗೆ ಎಲ್ಲರಿಗೂ ಸ್ಪಷ್ಟ ಮಾಹಿತಿ ಇದೆ. ಅವರು ಏನೇ ಬರೆಸಿದರೂ ಲಿಂಗಾಯತ ಎಂದು ಪರಿಗಣಿಸಿ ಲೆಕ್ಕ ಹಾಕಿ ಜನಸಂಖ್ಯೆ ನಿರ್ಧರಿಸಬೇಕು ಎಂಬುದು ನಮ್ಮ ಬೇಡಿಕೆ. ಇದರಲ್ಲಿ ತಪ್ಪೇನಿದೆ ? ಎಂದು ಪ್ರಶ್ನಿಸಿದರು.

ನಾವು ಸಮಾವೇಶ ಮಾಡುತ್ತಿರುವುದು ವರದಿಯನ್ನು ವಿರೋಧಿಸಿ ಅಲ್ಲ. ಗೊಂದಲವನ್ನು ಸರಿಪಡಿಸಿ ಎಂದು ಮುಖ್ಯಮಂತ್ರಿಯವರ ಸಭೆಯಲ್ಲಿ ನಾನೇ ಒತ್ತಾಯಿಸಿದ್ದೇನೆ. ಒಕ್ಕಲಿಗ ಸಮುದಾಯ ಒಂದೇ ಶೀರ್ಷಿಕೆಯಡಿ ಬಂದರೂ ಕೂಡ ಅಲ್ಲೂ ಕೂಡ ಈ ರೀತಿಯ ಗೊಂದಲಗಳಾಗಿವೆ. ಕೆಲವರು ಉಪಜಾತಿಯನ್ನು ಬರೆಸಿಲ್ಲ, ಇನ್ನೂ ಕೆಲವರು ಉಪಜಾತಿಯನ್ನಷ್ಟೇ ಬರೆಸಿದ್ದಾರೆ. ಇವೆಲ್ಲವನ್ನೂ ಸರಿಪಡಿಸಬೇಕಿದೆ ಎಂದರು.
ಗೊಂದಲಗಳನ್ನು ಸರಿಪಡಿಸಿದರೆ ವರದಿ ಆಧಾರಿತವಾಗಿ ಲೋಕಸಭೆ ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

BIG NEWS : ಬೆಂಗಳೂರು ಸೇರಿ ದೇಶದ ಹಲವೆಡೆ ಎನ್‍ಐಎ ದಾಳಿ

ಜನಗಣತಿ ನಡೆಸಲು ಕೇಂದ್ರ ಸರ್ಕಾರಕ್ಕೆ ಮಾತ್ರ ಅಧಿಕಾರ ಇದೆ. ನಮ್ಮದು ಸಮೀಕ್ಷೆ ಮಾತ್ರ. ನಾವು ವಿರೋಧ ಮಾಡುತ್ತಿದ್ದೇವೆ ಎಂಬ ಅಭಿಪ್ರಾಯ ಸರಿಯಲ್ಲ. ಉಪಜಾತಿಗಳ ಜನಸಂಖ್ಯೆಯನ್ನು ವರದಿ ನೀಡಿದ ನಂತರ ಲೆಕ್ಕ ಹಾಕಲು ಹೋದರೆ ಸಮಸ್ಯೆಗಳಾಗುತ್ತವೆ. ವರದಿ ಬಹಿರಂಗವಾಗುವ ಮುನ್ನವೇ ಅದರ ಕುರಿತು ನಿರ್ಧಾರ ತೆಗೆದುಕೊಳ್ಳಬೇಕು. ಇದಕ್ಕೆ ಅವಕಾಶಗಳಿವೆ ಎಂದು ತಿಳಿಸಿದರು.

ಅಹಿಂದ ಸಮಾವೇಶ ನಡೆಯುತ್ತಿರುವುದರಲ್ಲಿ ತಪ್ಪಿಲ್ಲ. ಎಲ್ಲರಿಗೂ ಹಕ್ಕಿದೆ. ಲಂಬಾಣಿ, ಪರಿಶಿಷ್ಟ ಪಂಗಡ, ಸಣ್ಣ ಸಮುದಾಯದ ಪತ್ತಾರ, ಕುಂಬಾರ ಸೇರಿದಂತೆ ಇತರ ಸಮುದಾಯಗಳು ಕೂಡ ಸಮಾವೇಶ ನಡೆಸಬಹುದು. ತಪ್ಪೇನೂ ಇಲ್ಲ. ಹಿಂದುಳಿದ ವರ್ಗಗಳ ಆಯೋಗದ ಸಮೀಕ್ಷೆಯಲ್ಲಿ ಆಗಿರುವ ಲೋಪಗಳನ್ನು ಮುಖ್ಯಮಂತ್ರಿಯವರು ಸರಿಪಡಿಸಿದ್ದಾರೆ ಎಂಬ ವಿಶ್ವಾಸವಿದೆ ಎಂದರು. ಲೋಕಸಭೆ ಚುನಾವಣೆಯ ಅಭ್ಯರ್ಥಿಗಳ ಆಯ್ಕೆಗೆ ಪ್ರಕ್ರಿಯೆಗಳು ನಡೆಯುತ್ತಿವೆ. ವಿಜಯಪುರ ಜಿಲ್ಲೆಗೆ ಸಚಿವ ಸತೀಶ್ ಜಾರಕಿಹೊಳಿ ವೀಕ್ಷಕರಾಗಿದ್ದಾರೆ. ಈಗಾಗಲೆ ಅವರು ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಿದ್ದಾರೆ. 20 ಕ್ಕೂ ಹೆಚ್ಚು ಜನ ಆಕಾಂಕ್ಷಿಗಳಿದ್ದಾರೆ. ರಾಜ್ಯದ ಯಾವುದೇ ಕ್ಷೇತ್ರಗಳಲ್ಲೂ ನಮಗೆ ಅಭ್ಯರ್ಥಿಗಳ ಕೊರತೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ಸಚಿವರು ಲೋಕಸಭೆ ಚುನಾವಣೆಯಲ್ಲಿ ಸ್ರ್ಪಧಿಸಬೇಕು ಎಂದು ಹೈಕಮಾಂಡ್ ಸೂಚನೆ ನೀಡಿದರೆ ಅದನ್ನು ಪಾಲಿಸಲೇಬೇಕಾಗುತ್ತದೆ ಎಂದು ತಿಳಿಸಿದರು. ಅಧಿಕಾರ ಹಂಚಿಕೆಯಾಗಬೇಕು. ಈ ಹಿನ್ನೆಲೆಯಲ್ಲಿ ನಿಗಮ ಮಂಡಳಿಗಳಲ್ಲಿ ನೇಮಕವಾಗಬೇಕು. ಮೂರ್ನಾಲ್ಕು ಬಾರಿ ಅಧ್ಯಕ್ಷರಾಗಿರುವವರಿಗೆ ಅವಕಾಶ ಸಿಗಬೇಕು. ತಮ್ಮ ಕೈಗಾರಿಕಾ ಇಲಾಖಾ ವ್ಯಾಪ್ತಿಯಲ್ಲಿ ಮೂರ್ನಾಲ್ಕು ನಿಗಮಗಳಿವೆ. ಅಲ್ಲಿಗೆ ಶಾಸಕರನ್ನು ನೇಮಿಸಲು ನಮ್ಮ ಯಾವುದೇ ಆಕ್ಷೇಪಗಳಿಲ್ಲ. ದೆಹಲಿಗೆ ಭೇಟಿ ನೀಡುತ್ತಿರುವ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಯವರು ಈ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಎತ್ತಿನಹೊಳೆ ಯೋಜನೆ ಜಾರಿ ವಿಳಂಬವಾಗಿದೆ. ಯೋಜನಾ ವೆಚ್ಚ ದುಪ್ಪಟ್ಟಾಗಿದೆ. ನೀರಿನ ಲಭ್ಯತೆ ಇದ್ದಾಗ ಯೋಜನೆ ಆರಂಭಿಸಲಾಗಿತ್ತು. ಮತ್ತಷ್ಟು ವಿಳಂಬವಾಗಬಾರದು ಎಂಬುದು ನಮ್ಮ ಅಭಿಪ್ರಾಯ. ಹೀಗಾಗಿ ತಾವು ಮುಖ್ಯಮಂತ್ರಿಗಳ ಜೊತೆ ಚರ್ಚೆ ನಡೆಸುವುದಾಗಿ ಹೇಳಿದ ಅವರು, ಕೊನೆಯ ಭಾಗದವರೆಗೂ ನೀರು ತಲುಪಿಸಲು ಪ್ರಯತ್ನಿಸಬೇಕಿದೆ ಎಂದರು. ಕೆಪಿಸಿಸಿ ಸದಸ್ಯರ ಹುದ್ದೆಗೆ ತಾವು ಆಕಾಂಕ್ಷಿಯಲ್ಲ. ಪಕ್ಷದ ಪ್ರಚಾರ ಸಮಿತಿಗೆ ನಾನು ಅಧ್ಯಕ್ಷನಾಗಿದ್ದೇನೆ. ಅದನ್ನು ಬಿಟ್ಟುಕೊಡಲೂ ನಾನು ಸಿದ್ಧನಿದ್ದೇನೆ ಎಂದು ತಿಳಿಸಿದರು.

RELATED ARTICLES

Latest News