ಬೆಂಗಳೂರು, ಸೆ.26- ಸರ್ಕಾರ ತನ್ನ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಪ್ರತಿಭಟನೆಯನ್ನು ಹತ್ತಿಕ್ಕುವ ಯತ್ನ ನಡೆಸಿದೆ ಎಂದು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಆರೋಪಿಸಿದ್ದಾರೆ. ಬೆಂಗಳೂರು ಬಂದ್ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿದೆ. ಕಾನೂನು ಹೋರಾಟದಲ್ಲಿ ಹಿನ್ನಡೆ ಅನುಭವಿಸಿದೆ. ಈ ವೈಫಲ್ಯಗಳನ್ನು ಮರೆಮಾಚಿಕೊಳ್ಳಲು ಪ್ರತಿಭಟನೆಯನ್ನು ತಡೆಯಲು ನಾನಾ ರೀತಿಯ ಕಾರ್ಯತಂತ್ರಗಳನ್ನು ಅನುಸರಿಸುತ್ತಿದೆ ಎಂದು ಕಿಡಿಕಾರಿದರು.
ಬಂದ್ ವಿಷಯದಲ್ಲಿ ಯಾವುದೇ ಗೊಂದಲಗಳಿಲ್ಲ. ಸೆ.23 ಕ್ಕೆ ನಾವು ಬಂದ್ ಘೋಷಿಸಿದ್ದೆವು. ಅದಕ್ಕೆ ನಮ್ಮ ವಿರೋಧ ಇಲ್ಲ ಎಂದು ವಾಟಾಳ್ ನಾಗರಾಜ್ ಮತ್ತು ಅವರ ಸಂಗಡಿಗರು ಸ್ಪಷ್ಟಪಡಿಸಿದ್ದರು. ಬೆಂಗಳೂರು ಬಂದ್‍ಗೆ ಬೆಂಬಲ ನೀಡುವ ಕುರಿತಂತೆ ಸೆ. 25 ರಂದು ನಡೆಯುವ ಸಭೆಯಲ್ಲಿ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದ್ದೆವು. ನಾವೂ ಕೂಡ ಆ ಸಭೆಯಲ್ಲಿ ಭಾಗವಹಿಸಿ ಒಗ್ಗಟ್ಟಿನ ಹೋರಾಟಕ್ಕೆ ಸಹಕರಿಸಿ ಎಂದು ಮನವಿ ಮಾಡಿದ್ದೆವು. ಅದರ ಹೊರತಾಗಿಯೂ ಬಂದ್‍ಗೆ ಬೆಂಬಲ ಇಲ್ಲ ಎಂದು ನಿನ್ನೆ ಘೋಷಣೆ ಮಾಡಿದ್ದಾರೆ. ಇದು ನಾಡಿನ ಹಿತಾಸಕ್ತಿಯ ದೃಷ್ಟಿಯಿಂದ ಸರಿಯಲ್ಲ ಎಂದರು.
ಜಮ್ಮುವಿನಲ್ಲಿ ಶಂಕಿತ ಉಗ್ರರ ಮನೆ ಮೇಲೆ ದಾಳಿ
ವಾಟಾಳ್ ನಾಗರಾಜ್ ಮತ್ತು ಅವರ ಸಂಗಡಿಗರು ಸೆ. 29 ಕ್ಕೆ ಕರೆ ನೀಡಿರುವ ಕರ್ನಾಟಕ ಬಂದ್‍ಗೆ ಬೆಂಬಲ ನೀಡಬೇಕೆ, ಬೇಡವೇ ಎಂದು ನಾವೂ ಕೂಡ ನಮ್ಮ ಸಂಘಟನೆಗಳ ಜೊತೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದರು. ಇಂದು ಬೆಳಿಗ್ಗೆಯಿಂದಲೂ ಪೊಲೀಸ್ ಬಲವನ್ನು ಬಳಸಿ ಹೋರಾಟಗಾರರನ್ನು ಅಲ್ಲಲ್ಲಿ ಬಂಧಿಸಲಾಗುತ್ತಿದೆ. ಪ್ರತಿಭಟನೆಗೂ ಅವಕಾಶ ನೀಡುತ್ತಿಲ್ಲ. ಇದು ಸರಿಯಲ್ಲ ಎಂದು ಕಿಡಿಕಾರಿದರು.