Friday, May 3, 2024
Homeರಾಜ್ಯಬೆಂಗಳೂರಿಗೆ ಕುಡಿಯುವ ನೀರು ಕಾಯ್ದಿರಿಸಲಾಗುವುದು : ಡಿಕೆಶಿ

ಬೆಂಗಳೂರಿಗೆ ಕುಡಿಯುವ ನೀರು ಕಾಯ್ದಿರಿಸಲಾಗುವುದು : ಡಿಕೆಶಿ

ಬೆಂಗಳೂರು., ಫೆ.13- ಬೆಂಗಳೂರು ಮಹಾನಗರಕ್ಕೆ ಕಾವೇರಿಯಿಂದ ಬಳಕೆ ಮಾಡಿಕೊಳ್ಳಲು ಅಗತ್ಯ ನೀರು ಕಾಯ್ದಿರಿಸಲಾಗುವುದು ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು. ವಿಧಾನಸಭೆಯ ಪ್ರಶ್ನೋತ್ತರದ ಅವಧಿಯಲ್ಲಿ ಬೆಂಗಳೂರಿನ ಜಯನಗರ ಕ್ಷೇತ್ರದ ಬಿಜೆಪಿ ಶಾಸಕ ಸಿ.ಕೆ.ರಾಮಮೂರ್ತಿ ತಮ್ಮ ಕ್ಷೇತ್ರದ ಜಯನಗರದಲ್ಲಿರುವ ಕೊಳಚೆ ಪ್ರದೇಶದಲ್ಲಿ ಎರಡುವರೆ ಸಾವಿರ ಮನೆಗಳಿವೆ. ಅಲ್ಲಿ ಮನೆ ನಿರ್ಮಿಸಿಕೊಡಲಾಗಿದೆ, ಆದರೆ ಕುಡಿಯುವ ನೀರು ಪೂರೈಕೆ ಸೌಲಭ್ಯ ಇಲ್ಲ. ಕಾವೇರಿಯಿಂದ ನೀರು ಪೂರೈಕೆ ಮಾಡಿ, ಆರಂಭಿಕ ಸಂಪರ್ಕಕ್ಕೆ ವೆಚ್ಚವಾಗುವ ನಾಲ್ಕು ಕೋಟಿ ರೂಪಾಯಿಗಳನ್ನು ಸರ್ಕಾರವೇ ಭರಿಸಬೇಕು ಎಂದು ಒತ್ತಾಯಿಸಿದರು.

ಉತ್ತರಿಸಿದ ಡಿ.ಕೆ.ಶಿವಕುಮಾರ್, 2017ರಿಂದ ಈ ಸ್ಲಂಗೆ ಉಚಿತವಾಗಿ ನೀರು ಪೂರೈಸಲಾಗುತ್ತಿದೆ. ಜಯನಗರದಲ್ಲಿ ನಿರ್ಮಾಣವಾಗಿರುವ ಫ್ಲಾಟ್‍ಗಳಿಗೆ ಬೋರ್ ವೆಲ್‍ನಿಂದ ನೀರು ಪೂರೈಸಲಾಗುತ್ತಿದೆ ಎಂದರು. ಕಾವೇರಿಯಿಂದ ಆರು ಟಿಎಂಸಿ ನೀರನ್ನು ಹೆಚ್ಚುವರಿಯಾಗಿ ಕಾಯ್ದಿರಿಸಲಾಗಿದೆ. ಒಟ್ಟು ನೀರಿನ ಮೀಸಲು ಪ್ರಮಾಣದಿಂದ 1.5 ಟಿಎಂಸಿ ಹೆಚ್ಚುವರಿಯಾಗಿ ಉಳಿಯಲಿದೆ ಎಂದು ತಿಳಿಸಿದರು.

ಶಾಸಕರ ಪ್ರದೇಶಾಭಿವೃದ್ಧಿಗೆ ಐದು ಕೋಟಿ ರೂಪಾಯಿಗಳನ್ನು ನೀಡುತ್ತೇನೆ. ಅದನ್ನು ಖರ್ಚು ಮಾಡಿ ಜಯನಗರ ಸ್ಲಂಗೆ ಉಚಿತ ನೀರಿನ ಸಂಪರ್ಕ ಕಲ್ಪಿಸಿ ಎಂದು ಡಿ.ಕೆ.ಶಿವಕುಮಾರ್ ಸಲಹೆ ನೀಡಿದರು. ಶಾಸಕರು ಆಗಬಹುದು ಎಂದು ಒಪ್ಪಿಕೊಂಡರು. ಮಧ್ಯ ಪ್ರವೇಶಿಸಿದ ವಿಪಕ್ಷ ನಾಯಕ ಆರ್.ಅಶೋಕ್, ಜಾಣತನದಿಂದ ಉತ್ತರ ಹೇಳಬೇಡಿ, ರಾಮಮೂರ್ತಿ ಹೊಸದಾಗಿ ಶಾಸಕರಾಗಿದ್ದಾರೆ. ಶಾಸಕರ ಪ್ರದೇಶಾಭಿವೃದ್ದಿಗೆ ನೀಡುವ ಅನುದಾನ ಬೇರೆ, ಅದನ್ನು ನೀರಿನ ಸಂಪರ್ಕಕ್ಕೆ ಬಳಕೆ ಮಾಡಿಕೊಳ್ಳಲು ಹೇಗೆ ಸಾಧ್ಯ. ಶಾಸಕರನ್ನು ದಾರಿ ತಪ್ಪಿಸಬೇಡಿ. ನೀರಿನ ಸಂಪರ್ಕಕ್ಕೆ ತಗುಲುವ ವೆಚ್ಚವನ್ನು ಬಿಬಿಎಂಪಿಯಿಂದ ಪ್ರತ್ಯೇಕವಾಗಿ ಭರಿಸಲಿ ಎಂದು ಆಗ್ರಹಿಸಿದರು. ಅಶೋಕ್ ಅವರ ಮಧ್ಯ ಪ್ರವೇಶಕ್ಕೆ ಡಿ.ಕೆ.ಶಿವಕುಮಾರ್ ನಕ್ಕು ಸುಮ್ಮನಾದರು.

JEE ಮೇನ್ಸ್ ಪರೀಕ್ಷಾ ಫಲಿತಾಂಶ ಪ್ರಕಟ : 100ಕ್ಕೆ 100 ಅಂಕ ಪಡೆದ 23 ವಿದ್ಯಾರ್ಥಿಗಳು

ಬಿಜೆಪಿ ಶಾಸಕ ಅರವಿಂದ ಬೆಲ್ಲದ್, ಬೆಂಗಳೂರಿನಲ್ಲಿ ಟ್ಯಾಂಕರ್‍ಗಳಲ್ಲಿ ಪೂರೈಸಲು ಸಾಕಷ್ಟು ನೀರು ಲಭ್ಯ ಇದೆ. ಆದರೆ ಜನರಿಗೆ ಪೂರೈಸಲು ನೀರು ಸಿಗುತ್ತಿಲ್ಲ. ಈ ವಿಚಾರವೇ ಅರ್ಥವಾಗುತ್ತಿಲ್ಲ. ಡಿ.ಕೆ.ಶಿವಕುಮಾರ್ ಪ್ರಭಾವಿಯಾಗಿದ್ದಾರೆ. ಟ್ಯಾಂಕರ್ ಲಾಬಿಯನ್ನು ಮಟ್ಟ ಹಾಕಲಿ ಎಂದು ಸಲಹೆ ನೀಡಿದರು.

ಬೆಂಗಳೂರಿನ ನೀರಿನ ವಿಚಾರದಲ್ಲಿ ಏನೇಲ್ಲೇ ನಡೆಯುತ್ತದೆ ಎಂದು ಅಕ್ಕಪಕ್ಕ ಕುಳಿತ ಆರ್.ಅಶೋಕ್ ಮತ್ತು ಸುರೇಶ್ ಕುಮಾರ್‍ರನ್ನು ಕೇಳಿ ತಿಳಿದುಕೊಳ್ಳಲಿ ಎಂದು ಸಲಹೆ ನೀಡಿದ ಡಿ.ಕೆ.ಶಿವಕುಮಾರ್, ಬೆಂಗಳೂರಿನ ನೀರಿನ ಬೇಡಿಕೆಯನ್ನೂ ಈಡೇರಿಸಲು ನಾವು ಮೇಕೆದಾಟು ಯೋಜನೆ ರೂಪಿಸಿದ್ದೇವೆ. ಅದರ ಅಂಗೀಕಾರಕ್ಕೆ ಬಿಜೆಪಿ ಸದಸ್ಯರು ಸಹಕಾರ ನೀಡಲಿ ಎಂದು ಮನವಿ ಮಾಡಿದರು. ವಿಚಾರವನ್ನು ಎಲ್ಲಿಂದ ಎಲ್ಲಿಗೆ ಸಂಪರ್ಕ ಮಾಡುತ್ತೀರಾ ಎಂದು ಅರವಿಂದ ಬೆಲ್ಲದ್ ಚೇಡಿಸಿದರು.

RELATED ARTICLES

Latest News