ಬೆಂಗಳೂರು,ಅ.27- ಅಕ್ರಮವಾಗಿ ಪಿಸ್ತೂಲ್ ಮತ್ತು ಜೀವಂತ ಗುಂಡುಗಳನ್ನು ಹೊಂದಿದ್ದ ಡ್ರಗ್ ಪೆಡ್ಲರ್‌ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.ಸುದ್ದಗುಂಟೆಪಾಳ್ಯದ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಪಕ್ಕದ ಖಾಲಿ ಜಾಗದಲ್ಲಿ ವ್ಯಕ್ತಿಯೊಬ್ಬ ಅಕ್ರಮ ಶಸ್ತ್ರ ಹಾಗೂ ಮದ್ದು ಗುಂಡುಗಳೊಂದಿಗೆ ದುಷ್ಕೃತ್ಯವೆಸಗಲು ಸಜ್ಜಾಗುತ್ತಿರುವ ಬಗ್ಗೆ ಸಿಸಿಬಿ ಪೊಲೀಸರಿಗೆ ಮಾಹಿತಿ ಲಭಿಸಿದೆ.
ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ಸ್ಥಳದ ಮೇಲೆ ದಾಳಿ ಮಾಡಿ ಆರೋಪಿಯನ್ನು ಸುತ್ತುವರೆದು ವಶಕ್ಕೆ ಪಡೆದು ಅಂಗ ಶೋಧನೆ ಮಾಡಿದಾಗ ಆತನ ಬಳಿ ಒಂದು ಪಿಸ್ತೂಲು ಹಾಗೂ ನಾಲ್ಕು ಜೀವಂತ ಗುಂಡುಗಳಿರುವುದು ಕಂಡು ಬಂದಿದೆ.
ಆರೋಪಿಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ತಾನು ಡ್ರಗ್ ಪೆಡ್ಲಿಂಗ್ ವ್ಯವಹಾರ ಮಾಡುತ್ತಿದ್ದು, ತನಗೆ ಪರಿಚಯವಿರುವ ಮಧ್ಯಪ್ರದೇಶದ ವ್ಯಕ್ತಿಯಿಂದ ಅನಧಿಕೃತವಾಗಿ ಪಿಸ್ತೂಲ್ ಹಾಗೂ ಜೀವಂತ ಗುಂಡುಗಳನ್ನು ಖರೀದಿಸಿದ್ದು, ಈ ಪಿಸ್ತೂಲ್‌ನಿಂದ ತನ್ನ ವಿರೋಧಿಗಳನ್ನು ಹೆದುರಿಸಿ ಮಾದಕ ವಸ್ತುಗಳ ಮಾರಾಟದ ವ್ಯವಹಾರಗಳನ್ನು ಮಾಡುತ್ತಿದ್ದುದಾಗಿ ಹೇಳಿದ್ದಾನೆ. ಆರೋಪಿಯನ್ನು ಪಿಸ್ತೂಲ್ ಹಾಗೂ ಜೀವಂತ ಗುಂಡುಗಳ ಸಮೇತ ಬಂಧಿಸಿ ಮುಂದಿನ ತನಿಖೆಕೈಗೊಂಡಿದ್ದಾರೆ.
ಈ ವಿಶೇಷ ಕಾರ್ಯಾಚರಣೆ ಯನ್ನು ಸಿಸಿಬಿ ಜಂಟಿ ಪೊಲೀಸ್ ಆಯುಕ್ತರ ಮಾರ್ಗದರ್ಶನದಲ್ಲಿ ಉಪ ಪೊಲೀಸ್ ಆಯುಕ್ತರು, ಸಹಾಯಕ ಪೊಲೀಸ್ ಆಯುಕ್ತರು ಹಾಗೂ ಅಧಿಕಾರಿ, ಸಿಬ್ಬಂದಿ ತಂಡ ಯಶಸ್ವಿಯಾಗಿ ಕೈಗೊಂಡಿದೆ.
