ಬೆಂಗಳೂರು,ಫೆ.11- ಕೆಲವು ರಸ್ತೆ, ಸಿಗ್ನಲ್‍ಗಳಲ್ಲಿ ಸಂಚಾರಿ ಪೊಲೀಸರಿಲ್ಲ ಎಂದು ನಿಯಮ ಪಾಲಿಸದೆ ವಾಹನ ಚಾಲನೆ ಮಾಡುವ ಸವಾರರು/ಚಾಲಕರೇ ಹುಶಾರ್…!! ನೀವು ಜವಾಬ್ದಾರಿಯುತವಾಗಿ ವಾಹನ ಚಾಲನೆ ಮಾಡಬೇಕು. ಇಲ್ಲದಿದ್ದರೆ ನಿಮ್ಮ ಮನೆಗೆ ಪೊಲೀಸರು ಬರುತ್ತಾರೆ. ಈಗಾಗಲೇ ನಗರದಲ್ಲಿ ಅಲರ್ಟ್ ಆಗಿರುವ ಸಂಚಾರಿ ಪೊಲೀಸರು ಅಪಘಾತಗಳನ್ನು ಹಾಗೂ ಸಂಚಾರ ದಟ್ಟಣೆಯನ್ನು ತಗ್ಗಿಸುವ ನಿಟ್ಟಿನಲ್ಲಿ ಹಲವು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದಾರೆ.
ವಾಹನ ಸವಾರರು ಎಲ್ಲೆಂದರಲ್ಲಿ ವಾಹನ ನಿಲ್ಲಿಸುವುದು, ಸಂಚಾರಕ್ಕೆ ಅಡಚಣೆ ಉಂಟುಮಾಡುವುದು, ಜೀಬ್ರಾ ಕ್ರಾಸಿಂಗ್‍ನಲ್ಲಿ ವಾಹನ ನಿಲ್ಲಿಸುವುದು, ಪಾದಚಾರಿ ಮಾರ್ಗದ ಮೇಲೆ ವಾಹನ ಚಲಾಯಿಸುವುದು, ಹೆಲ್ಮೆಟ್ ಧರಿಸದಿರುವುದು, ವೇಗ ಹಾಗೂ ಅಜಾಗರೂಕತೆ ಚಾಲನೆಗೆ ನಿಮಗೆ ಖಂಡಿತವಾಗಿಯೂ ದಂಡ ಬೀಳುತ್ತದೆ. ಈಗಾಗಲೇ ಎಲ್ಲಾ ವೃತ್ತಗಳಲ್ಲೂ ಅತ್ಯಾಧುನಿಕ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದ್ದು, ವಾಹನ ಸವಾರರು ಉಲ್ಲಂಘಿಸುವ ನಿಯಮಗಳನ್ನು ಚಿತ್ರಸಮೇತ ದಂಡವನ್ನು ವಿಧಿಸಿ ನೋಟಿಸ್‍ಗಳನ್ನು ವಾಹನ ಮಾಲಿಕರಿಗೆ ಕಳುಹಿಸಲಾಗುತ್ತಿದೆ.
ಅಭ್ಯರ್ಥಿಗಳ ಆಯ್ಕೆ ಹೈಕಮಾಂಡ್ ತೀರ್ಮಾನ : ಅನಗತ್ಯ ಗೊಂದಲಕ್ಕೆ ಕಡಿವಾಣ
ಈ ಸಂಬಂಧ ಈಗ ಅತೀ ಹೆಚ್ಚು ದಂಡ ಉಳಿಸಿಕೊಂಡಿರುವ ಪ್ರಕರಣಗಳ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಿ ಪ್ರಸ್ತುತ 50 ಸಾವಿರ ಮೇಲ್ಪಟ್ಟು 3 ಲಕ್ಷದವರೆಗೆ ದಂಡ ಉಳಿಸಿಕೊಂಡಿರುವ 2,621 ವಾಹನ ಮಾಲಿಕರನ್ನು ಗುರುತಿಸಲಾಗಿದ್ದು, ಅವರಿಗೆ ದಂಡ ಕಟ್ಟಲು ತಿಳಿಹೇಳಿ ನೋಟಿಸ್ ಜಾರಿ ಮಾಡಲು ಅವರುಗಳ ಮನೆಗೆ ಸಂಚಾರಿ ಪೊಲೀಸರು ಭೇಟಿ ನೀಡುತ್ತಿದ್ದಾರೆ.
3 ಲಕ್ಷ ರೂ. ದಂಡವಿರುವ ಸ್ಕೂಟಿಪೆಪ್ ವಾಹನವನ್ನು ಪತ್ತೆ ಹಚ್ಚಿರುವ ಆರ್‍ಟಿ ನಗರ ಸಂಚಾರಿ ಠಾಣೆ ಪೊಲೀಸರು, ಮಾಲಿಕರು ದಂಡ ಕಟ್ಟದೇ ಇರುವುದರಿಂದ ವಾಹನವನ್ನು ಜಪ್ತಿ ಮಾಡಿ ಅವರಿಗೆ ನೋಟಿಸ್ ನೀಡಿದ್ದಾರೆ. ಬಹುತೇಕ ದಂಡ ಪ್ರಕರಣಗಳಲ್ಲಿ ವಾಹನ ಸವಾರರು ಅಸಡ್ಡೆಯಿಂದ ರಸ್ತೆಯಲ್ಲಿ ಸಂಚರಿಸುತ್ತಿರುವುದು ತಿಳಿದುಬರುತ್ತಿದೆ. ಸಿಗ್ನಲ್ ಜಂಪ್ ಮತ್ತು ವೀಲಿಂಗ್‍ನಂತಹ ಪ್ರಕರಣಗಳನ್ನು ನಗರ ಸಂಚಾರಿ ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ. ಎಲ್ಲಾ ಸಂಚಾರ ಉಲ್ಲಂಘನೆಗಳು ಕ್ಯಾಮರಾಗಳಲ್ಲಿ ಸೆರೆಯಾಗುತ್ತಿವೆ ಹುಶಾರ್.