Friday, May 3, 2024
Homeರಾಜ್ಯಬೆಂಗಳೂರನ್ನು ವಿಶ್ವದರ್ಜೆ ನಗರವನ್ನಾಗಿಸಲು ಸಿದ್ದು ಸಂಕಲ್ಪ

ಬೆಂಗಳೂರನ್ನು ವಿಶ್ವದರ್ಜೆ ನಗರವನ್ನಾಗಿಸಲು ಸಿದ್ದು ಸಂಕಲ್ಪ

ಬೆಂಗಳೂರು, ಫೆ.9- ವಿಶ್ವದರ್ಜೆಯ ನಗರವನ್ನಾಗಿ ಬೆಂಗಳೂರನ್ನು ಅಭಿವೃದ್ಧಿಪಡಿಸುವ ಭರವಸೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಕ್ತಪಡಿಸಿದ್ದು, ಬೆಂಗಳೂರು ಬ್ಯುಜಿನೆಸ್ ಕಾರಿಡಾರ್ ಸ್ಥಾಪಿಸುವುದು ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಈ ಬಾರಿಯ ಬಜೆಟ್‍ನಲ್ಲಿ ಪ್ರಸ್ತಾಪಿಸಿದ್ದಾರೆ. ನಗರದ ಜನರ ಜೀವನ ಗುಣಮಟ್ಟ ಸುಧಾರಣೆ ಹಾಗೂ ಹೂಡಿಕೆದಾರರನ್ನು ಆಕರ್ಷಿಸಲು ವಿವಿಧ ವಲಯಗಳಲ್ಲಿ ದಿಟ್ಟ ಕ್ರಮಗಳನ್ನು ಕೈಗೊಳ್ಳಲು ನಮ್ಮ ಸರ್ಕಾರ ತೀರ್ಮಾನಿಸಿದೆ ಎಂದು ಸಿದ್ದರಾಮಯ್ಯ ಅವರು ಬಜೆಟ್ ಭಾಷಣದಲ್ಲಿ ತಿಳಿಸಿದ್ದಾರೆ.

ಸಂಪನ್ಮೂಲ ಹೆಚ್ಚಳ, ಸಂಚಾರ ದಟ್ಟಣೆ ನಿವಾರಣೆ, ಗುಣಮಟ್ಟದ ರಸ್ತೆಗಳ ನಿರ್ಮಾಣ, ಶುದ್ಧ ಕುಡಿಯುವ ನೀರು ಪೂರೈಕೆ, ಉತ್ತಮ ಸಾರಿಗೆ ಮತ್ತು ಸ್ವಚ್ಛ ಸುಂದರ ಬೆಂಗಳೂರು ನಿರ್ಮಾಣದ ಕಡೆ ಗಮನ ಹರಿಸುವುದಾಗಿ ಸಿದ್ದು ಭರವಸೆ ನೀಡಿದ್ದಾರೆ. ಬಿಬಿಎಂಪಿ ವ್ಯಾಪ್ತಿಯ ತೆರಿಗೆ ಮತ್ತು ತೆರಿಗೆಯೇತರ ಸಂಪನ್ಮೂಲ ಕ್ರೋಢೀಕರಣಕ್ಕೆ ಹೆಚ್ಚು ಒತ್ತು ನೀಡಲಾಗಿದ್ದು, 2023-24ನೆ ಸಾಲಿನಲ್ಲಿ 4300 ಕೋಟಿ ರೂ. ತೆರಿಗೆ ಸಂಗ್ರಹಕ್ಕೆ ಮುನ್ನುಡಿ ಬರೆಯಲಾಗಿದೆ.

2024-25ರಲ್ಲಿ ತೆರಿಗೆ ವ್ಯವಸ್ಥೆಯಲ್ಲಿನ ಸೋರಿಕೆ ತಡೆಗಟ್ಟುವ ಮೂಲಕ 6 ಸಾವಿರ ಕೋಟಿ ರೂ.ಗಳ ತೆರಿಗೆ ಸಂಗ್ರಹದ ನಿರೀಕ್ಷೆ ಹೊಂದಲಾಗಿದೆ ಎಂದು ಅವರು ವಿವರಿಸಿದರು. ಪ್ರಸಕ್ತ ಸಾಲಿನಿಂದ ಪರಿಷ್ಕøತ ಜಾಹೀರಾತು ನೀತಿ ಮತ್ತು ಪ್ರೀಮಿಯಂ ಎಫ್‍ಎಆರ್ ನೀತಿ ಜಾರಿಗೆ ತರುವ ಮೂಲಕ 2 ಸಾವಿರ ಕೋಟಿ ರೂ.ಗಳನ್ನು ತೆರಿಗೆಯೇತರ ಸಂಪನ್ಮೂಲ ಸಂಗ್ರಹದ ಗುರಿ ಹೊಂದಲಾಗಿದೆ.

ಬಿಬಿಎಂಪಿ ವ್ಯಾಪ್ತಿಯ ಎಲ್ಲ 20 ಲಕ್ಷ ಆಸ್ತಿಗಳ ತೆರಿಗೆ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಿ 2024-25ನೆ ಸಾಲಿನಲ್ಲಿ ಮಾಲೀಕರಿಗೆ ಡಿಜಿಟಲ್ ಇ-ಖಾತಾ ಮತ್ತು ಆಸ್ತಿ ತೆರಿಗೆ ಪಾವತಿ ವಿವರಗಳನ್ನು ದೊರಕಿಸಿಕೊಡಲಾಗುವುದು. ಇದರ ಜತೆಗೆ ಸಂಗ್ರಹವಾಗುವ ಹೆಚ್ಚುವರಿ ಸಂಪನ್ಮೂಲಗಳಿಂದ ನಗರದ ಸಂಚಾರ ದಟ್ಟಣೆಯನ್ನು ನಿವಾರಿಸಲು ನಮ್ಮ ಸರ್ಕಾರ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದರು.

ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ 147ಕಿಮೀ ಉದ್ದದ ರಸ್ತೆಗಳನ್ನು 1700 ಕೋಟಿ ರೂ. ವೆಚ್ಚದಲ್ಲಿ ವೈಟ್ ಟಾಪಿಂಗ್ ರಸ್ತೆಗಳನ್ನಾಗಿ ಪರಿವರ್ತಿಸಲಾಗಿದೆ. ಈ ಎಲ್ಲ ಕಾಮಗಾರಿಗಳನ್ನು 2025ರ ವೇಳೆಗೆ ಪೂರ್ಣಗೊಳಿಸಲಾಗುವುದು. ರಸ್ತೆಗಳ ವಿಸ್ತರಣೆ ಕಷ್ಟಸಾಧ್ಯವಾಗಿರುವುದರಿಂದ ಸುರಂಗ ಮಾರ್ಗಗಳ ಮೂಲಕ ಸಂಚಾರ ದಟ್ಟಣೆಯನ್ನು ಬಗೆಹರಿಸಲು ನಿರ್ಧರಿಸಲಾಗಿದ್ದು, ಈ ವರ್ಷ ಸಂಚಾರ ದಟ್ಟಣೆ ಹೆಚ್ಚಿರುವ ಹೆಬ್ಬಾಳ ಜಂಕ್ಷನ್‍ನಲ್ಲಿ ಪ್ರಾಯೋಗಿಕವಾಗಿ ಸುರಂಗ ಮಾರ್ಗ ನಿರ್ಮಿಸಲಾಗುತ್ತಿದೆ ಎಂದು ಅವರು ಹೇಳಿದರು.

ನಗರದ ನಾಲ್ಕು ಬಫರ್ ಝೋನ್‍ಗಳನ್ನು ಬಳಸಿಕೊಂಡು ಸರ್ವಋತು ರಸ್ತೆಗಳನ್ನು ನಿರ್ಮಿಸುವ ಹೊಸ ಪರಿಕಲ್ಪನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಈ ಯೋಜನೆಯಡಿ 200 ಕೋಟಿ ರೂ. ಅಂದಾಜು ವೆಚ್ಚದಲ್ಲಿ ನೂರು ಕಿಮೀ ಉದ್ದದ ರಸ್ತೆಯನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ಪ್ರಸಕ್ತ ಸಾಲಿನಲ್ಲಿ ಹೆಚ್ಚುವರಿಯಾಗಿ ನೂರು ಕಿ.ಮೀ. ರಸ್ತೆಯನ್ನು ಅಭಿವೃದ್ಧಿಪಡಿಸಲಾಗುವುದು.

ಸುಗಮ ಸಂಚಾರ-ಬ್ರಾಂಡ್ ಬೆಂಗಳೂರು ಯೋಜನೆಯಡಿ ಅಂತಾರಾಷ್ಟ್ರೀಯ ಮಟ್ಟದ ತಜ್ಞ ಸಂಸ್ಥೆಯನ್ನು ನೇಮಿಸಿಕೊಳ್ಳಲಾಗಿದೆ. ಆ ಸಂಸ್ಥೆ ನೀಡುವ ವರದಿಯನ್ನಾಧರಿಸಿ ಸಂಚಾರ ದಟ್ಟಣೆಗೆ ಪರಿಹಾರ ಕಂಡುಕೊಳ್ಳಲಾಗುವುದು. ಸಂಚಾರ ದಟ್ಟಣೆ ಕಡಿಮೆ ಮಾಡುವುದರ ಜತೆಗೆ ಬೆಂಗಳೂರಿನ ಆರ್ಥಿಕ ಚಟುವಟಿಕೆಗಳು ದೊಡ್ಡ ಪ್ರಮಾಣದಲ್ಲಿ ವೃದ್ಧಿಯಾಗುವಂತೆ ನೋಡಿಕೊಳ್ಳಲು ಪೆರಿಫೆರಲ್ ರಿಂಗ್‍ರಸ್ತೆಗಳನ್ನು ಬೆಂಗಳೂರು ಬ್ಯುಜಿನೆಸ್ ಕಾರಿಡಾರ್ ಎಂಬ ಪರಿಕಲ್ಪನೆಯಲ್ಲಿ ಪರಿಚಯಿಸಲು ತೀರ್ಮಾನಿಸಲಾಗಿದೆ.
ಈ ಯೋಜನೆಯಡಿ 73ಕಿಮೀ ಉದ್ದದ ರಸ್ತೆಯನ್ನು 27 ಸಾವಿರ ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಪಿಪಿಪಿ ಮಾದರಿಯಲ್ಲಿ ನಿರ್ಮಿಸಲು ಆರ್‍ಎಫ್‍ಪಿ ಕರೆಯಲಾಗಿದೆ ಎಂದು ಅವರು ತಿಳಿಸಿದರು.

ನಗರದಲ್ಲಿ 250 ಮೀಟರ್ ಎತ್ತರದ ಸ್ಕೈ ಡೆಕ್ ನಿರ್ಮಾಣಕ್ಕಾಗಿ ನೂತನ ಪರಿಕಲ್ಪನೆ ಒದಗಿಸುವಂತೆ ಅಂತಾರಾಷ್ಟ್ರೀಯ ಮಟ್ಟದ ವಾಸ್ತು ವಿನ್ಯಾಸಗಾರರನ್ನು ಆಹ್ವಾನಿಸಲಾಗಿದೆ. ಇದರಿಂದ ನಗರದ ಒಳಗೆ ಪ್ರವಾಸಿ ತಾಣಗಳನ್ನುಅಭಿವೃದ್ಧಿಪಡಿಸಲು ಅನುಕೂಲವಾಗಲಿದೆ ಎಂದರು.

ಪ್ರತಿ ಜಿಲ್ಲೆಯಲ್ಲೂ ಆಧುನಿಕ ಕ್ರಿಟಿಕಲ್ ಕೇರ್ ಬ್ಲಾಕ್‍ ಸ್ಥಾಪನೆ

ಬಿಬಿಎಂಪಿ, ಬಿಎಂಆರ್‍ಸಿಎಲ್, ಜಲಮಂಡಳಿ ಮತ್ತು ಬಿಡಿಎ ವ್ಯಾಪ್ತಿಗಳಲ್ಲಿ ಪ್ರತಿ ತಿಂಗಳು ವಿದ್ಯುತ್ ಶುಲ್ಕ ಪಾವತಿಯ ಆರ್ಥಿಕ ಹೊರೆ ಕಡಿಮೆಗೊಳಿಸಲು ಸೋಲಾರ್ ಪಾರ್ಕ್‍ಗಳನ್ನು ಸ್ಥಾಪಿಸಲು ತೀರ್ಮಾನಿಸಲಾಗಿದೆ.
ಬಿಎಂಟಿಸಿ ಸೇವೆಯೊಂದಿಗೆ ಮೆಟ್ರೋ ರೈಲು ಹಾಗೂ ಸಬರ್‍ಬನ್ ರೈಲು ಯೋಜನೆಗಳು ಸುಗಮ ಸಂಚಾರದಲ್ಲಿ ಕ್ರಾಂತಿಕಾರಕ ಬದಲಾವಣೆ ತರಲಿವೆ. ಈ ಎಲ್ಲ ಸಾರಿಗೆ ವ್ಯವಸ್ಥೆಗಳನ್ನು ಒಗ್ಗೂಡಿಸಿ ಸಮನ್ವಯದಿಂದ ಕಾರ್ಯಾಚರಣೆ ನಡೆಸುವಂತೆ ನೋಡಿಕೊಳ್ಳಲು ಆದ್ಯತೆ ನೀಡಲಾಗಿದೆ. ಈಗಿರುವ 74 ಕಿಮೀ ಉದ್ದದ ಮೆಟ್ರೋ ರೈಲು ಯೋಜನೆಯನ್ನು 2025ರ ವೇಳೆಗೆ ಹೆಚ್ಚುವರಿಯಾಗಿ 44ಕಿಮೀನಷ್ಟು ಸೇರ್ಪಡೆ ಮಾಡಲು ಆದ್ಯತೆ ನೀಡಲಾಗಿದೆ. ಮೆಟ್ರೋ ಯೋಜನೆ ಹಂತ-2 ಮತ್ತು 2ಎ ಯೋಜನೆಯಡಿ ಹೊರವರ್ತುಲ ರಸ್ತೆ-ವಿಮಾನ ನಿಲ್ದಾಣದ ಮಾರ್ಗ 2026 ಜೂನ್ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ಅವರು ಮಾಹಿತಿ ನೀಡಿದರು.

ಮೆಟ್ರೋ ಹಂತ-3ರಡಿ 15,611 ಕೋಟಿ ರೂ. ವೆಚ್ಚದ ಯೋಜನೆಗೆ ರಾಜ್ಯ ಸರ್ಕಾರವು ಆಡಳಿತಾತ್ಮಕ ಅನುಮೋದನೆ ನೀಡಿದ್ದು, ಕೇಂದ್ರ ಸರ್ಕಾರದ ಅನುದಾನ ನಿರೀಕ್ಷೆ ಮಾಡಲಾಗಿದೆ. ಈ ಯೋಜನೆಯಡಿ ಸರ್ಜಾಪುರದಿಂದ ಅಗರ, ಕೋರಮಂಗಲ ಡೈರಿ ವೃತ್ತ, ಮೇಕ್ರಿ ಸರ್ಕಲ್ ಮೂಲಕ ಹೆಬ್ಬಾಳವನ್ನು ಸಂಪರ್ಕಿಸುವ ಮಾರ್ಗ ನಿರ್ಮಾಣದ ಕರಡು ಸಿದ್ಧಪಡಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

ಮಂದಗತಿಯಲ್ಲಿ ಸಾಗುತ್ತಿದ್ದ ಉಪನಗರ ರೈಲು ಯೋಜನೆಯನ್ನು ಚುರುಕುಗೊಳಿಸಲಾಗಿದ್ದು, ಬಯ್ಯಪ್ಪನಹಳ್ಳಿಯಿಂದ ಚಿಕ್ಕಬಾಣಾವರ ವರೆಗಿನ ಕಾರಿಡಾರ್-2ರ ಕಾಮಗಾರಿಗಳನ್ನು ತ್ವರಿತಗೊಳಿಸಲಾಗಿದೆ. ಕಾರಿಡಾರ್-4ರಡಿ ಹೀಲಲಿಗೆಯಿಂದ ರಾಜಾನುಕುಂಟೆವರೆಗಿನ 46.2 ಕಿಮೀ ಉದ್ದದ ಮಾರ್ಗ ನಿರ್ಮಾಣಕ್ಕೆ ಕಾರ್ಯಾದೇಶ ನೀಡಲಾಗಿದೆ. ಇದಕ್ಕಾಗಿ ಹಲವಾರು ವಿದೇಶಿ ಬ್ಯಾಂಕ್‍ಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗುತ್ತಿದೆ. ಈ ಯೋಜನೆ ಬಗ್ಗೆ ಕೇಂದ್ರ ಸರ್ಕಾರದ ಗಮನ ಸೆಳೆದು ಹೆಚ್ಚುವರಿ ಅನುದಾನಕ್ಕಾಗಿ ಮನವಿ ಮಾಡಿಕೊಳ್ಳಲು ತೀರ್ಮಾನಿಸಲಾಗಿದೆ ಎಂದರು.

ಬಿಎಂಟಿಸಿಗೆ ಮುಂದಿನ ದಿನಗಳಲ್ಲಿ 1334 ಹೊಸ ಎಲೆಕ್ಟ್ರಿಕ್ ಬಸ್‍ಗಳು ಮತ್ತು 820 ಬಿಎಸ್-6 ಡೀಸೆಲ್ ಬಸ್‍ಗಳನ್ನು ಸೇರ್ಪಡೆಗೊಳಿಸಲಾಗುವುದು. ಪ್ರಯಾಣಿಕರ ಹಿತದೃಷ್ಟಿಯಿಂದ ಮಹಿಳೆಯರ ಸುರಕ್ಷತೆಗಾಗಿ ವೆಹಿಕಲ್ ಟ್ರಾಕಿಂಗ್ ಮೊಬೈಲ್ ಆ್ಯಪ್ ಅನುಷ್ಠಾನಗೊಳಿಸಲಾಗುತ್ತಿದೆ. ಜಪಾನ್ ನೆರವಿನೊಂದಿಗೆ ನಗರದ ಪ್ರಮುಖ 28 ಜಂಕ್ಷನ್‍ಗಳಲ್ಲಿ ಏರಿಯಾ ಟ್ರಾಫಿಕ್ ಸಿಗ್ನಲ್ ಕಂಟ್ರೋಲ್ ಸಿಸ್ಟಮ್‍ಗಳನ್ನು ಅಳವಡಿಸಲಾಗಿದೆ.
ನಗರದ ಅಭಿವೃದ್ಧಿಜತೆಗೆ ನಾಗರಿಕರ ಜೀವನ ಗುಣಮಟ್ಟ ಸುಧಾರಣೆಗೆ ನಾವು ಆದ್ಯತೆ ನೀಡಿದ್ದು, ಉತ್ತಮ ಪರಿಸರ, ದಿನದ 24 ಕುಡಿಯುವ ನೀರಿನ ಪೂರೈಕೆ, ಸ್ವಚ್ಛತೆ ನಿರ್ವಹಣೆಗೆ ಒತ್ತು ನೀಡಿದ್ದೇವೆ.

ಜಲಮಂಡಳಿಯಿಂದ 5550 ಕೋಟಿ ರೂ. ವೆಚ್ಚದಲ್ಲಿ 775 ಎಂಎಲ್‍ಡಿ ಸಾಮಥ್ರ್ಯದ ಕಾವೇರಿ 5ನೆ ಹಂತದ ಯೋಜನೆಯನ್ನು ಮೇ ತಿಂಗಳಿನಿಂದ ಆರಂಭಿಸುವ ಮೂಲಕ 12 ಲಕ್ಷ ಜನರಿಗೆ ಪ್ರತಿದಿನ 110 ಲೀಟರ್ ಶುದ್ಧ ಕುಡಿಯುವ ನೀರು ಒದಗಿಸಲಾಗುವುದು. ಒಳಚರಂಡಿ ಮಾರ್ಗಗಳಲ್ಲಿ 228 ಕಿಮೀ ಉದ್ದದಲ್ಲಿ ಕೊಳವೆಯನ್ನು ಅಳವಡಿಸಿ 13 ಎಸ್‍ಟಿಪಿ ಘಟಕಗಳಿಂದ ನೂರು ಎಂಎಲ್‍ಡಿ ನೀರನ್ನು ಸಂಸ್ಕರಿಸಲು ಕ್ರಮ ಕೈಗೊಳ್ಳಲಾಗಿದೆ. 441 ಕೋಟಿ ರೂ. ವೆಚ್ಚದಲ್ಲಿ ಏಳು ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳನ್ನು ಉನ್ನತೀಕರಿಸಲಾಗುವುದು. ಪ್ರತಿನಿತ್ಯ 268 ಎಂಎಲ್‍ಡಿ ತ್ಯಾಜ್ಯ ನೀರನ್ನು ಸಂಸ್ಕರಣೆ ಮಾಡಿ ಮರು ಬಳಕೆಗೆ ಅವಕಾಶ ಕಲ್ಪಿಸಿಕೊಡಲಾಗುವುದು.

ಬಿಬಿಎಂಪಿಗೆ ಸೇರ್ಪಡೆಯಾದ 110 ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಸೌಲಭ್ಯ ಕಲ್ಪಿಸಲು 200 ಕೋಟಿ ರೂ. ವೆಚ್ಚದಲ್ಲಿ ಎರಡನೆ ಹಂತದ ಕಾಮಗಾರಿ ಆರಂಭಿಸಲಾಗುವುದು. ನಗರದ ಹೊರವಲಯದ ನಾಲ್ಕು ಕಡೆಗಳಲ್ಲಿ 50 ರಿಂದ 100 ಎಕರೆ ಜಮೀನು ಗುರುತಿಸಿ ಮುಂದಿನ 30 ವರ್ಷಗಳ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ವೈಜ್ಞಾನಿಕ ತ್ಯಾಜ್ಯ ವಿಲೇವಾರಿಗೆ ಅವಕಾಶ ಕಲ್ಪಿಸಲಾಗುವುದು.

ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯವನ್ನು ಆಯುಕ್ತಾಲಯವನ್ನಾಗಿ ಉನ್ನತೀಕರಣ

ನಗರದಲ್ಲಿ ಮರಗಳ ಗಣತಿ, ಕೆರೆ ಮತ್ತು ಉದ್ಯಾನವನಗಳ ತಂತ್ರಾಂಶ ಆಧಾರಿತ ಮೇಲ್ವಿಚಾರಣೆ, ಕೆರೆ ಮತ್ತು ಉದ್ಯಾನವನಗಳ ಅಭಿವೃದ್ಧಿಯನ್ನು ಸಾರ್ವಜನಿಕ ಸಹಭಾಗಿತ್ವದಲ್ಲಿ ಹೆಚ್ಚಿಸಲು ಪ್ರತ್ಯೇಕ ನೀತಿ ಜಾರಿಗೊಳಿಸಲಾಗುವುದು. ಇದರ ಜತೆಗೆ ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದ ಸರ್ವಜ್ಞ ಉದ್ಯಾನವನ ಅಭಿವೃದ್ಧಿಪಡಿಸುತ್ತೇವೆ. ಬೆಂಗಳೂರು ಹಾಗೂ 10 ಮಹಾನಗರ ಪಾಲಿಕೆಗಳಲ್ಲಿ ವಾಣಿಜ್ಯ ಮತ್ತು ವ್ಯಾಪಾರದ ದೃಷ್ಟಿಯಿಂದ ರಾತ್ರಿ ವೇಳೆಯ ವ್ಯಾಪಾರ-ವಹಿವಾಟು ಮೇಲಿನ ನಿರ್ಬಂಧವನ್ನು ಬೆಳಗಿನ ಜಾವ 1 ಗಂಟೆವರೆಗೂ ವಿಸ್ತರಿಸಲು ಅನುಮತಿ ನೀಡಲು ನಮ್ಮ ಸರ್ಕಾರ ತೀರ್ಮಾನಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಹಿತಿ ನೀಡಿದ್ದಾರೆ.

RELATED ARTICLES

Latest News