Friday, August 29, 2025
Homeರಾಷ್ಟ್ರೀಯ | Nationalಬಾನು ಮುಷ್ತಾಕ್‌ರಿಂದ ದಸರಾ ಉದ್ಘಾಟನೆ ತೀವ್ರಗೊಂಡ ಅಸಮಾಧಾನ

ಬಾನು ಮುಷ್ತಾಕ್‌ರಿಂದ ದಸರಾ ಉದ್ಘಾಟನೆ ತೀವ್ರಗೊಂಡ ಅಸಮಾಧಾನ

Banu Mushtaq’s selection for Mysuru Dasara inauguration insult to Hindus

ಬೆಂಗಳೂರು,ಆ.29- ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಸಿದ್ದತೆಗಳು ಒಂದೆಡೆ ಭರದಿಂದ ಸಾಗಿದ್ದರೆ ಮತ್ತೊಂದೆಡೆ ದಸರಾ ಉದ್ಘಾಟನೆಗೆ ಬೂಕರ್‌ ಪ್ರಶಸ್ತಿ ಪುರಸ್ಕೃತರಾದ ಸಾಹಿತಿ ಬಾನು ಮುಷ್ತಾಕ್‌ ಅವರಿಗೆ ಆಹ್ವಾನ ನೀಡಲಾಗಿದೆ. ಇದು ಬಹುಸಂಖ್ಯಾತರ ಅಸಮಾಧಾನಕ್ಕೆ ಎಡೆಮಾಡಿ ಕೊಟ್ಟಿರುವುದಲ್ಲದೆ ಕೆಲವರ ವಿರೋಧಕ್ಕೂ ಆಸ್ಪದ ನೀಡಿದೆ.

ಮುಖ್ಯಮಂತ್ರಿಯವರು ದಸರಾ ಉದ್ಘಾಟನಾಕಾರರ ಹೆಸರು ಪ್ರಕಟಿಸಿದ ಬೆನ್ನಲ್ಲೇ ಅಸಮಾಧಾನದ ಹೊಗೆಯಾಡತೊಡಗಿದ್ದು, ಇನ್ನೂ ನಿಂತಿಲ್ಲ. ಹಿಂದೂ ಧರ್ಮದ ಪಂಚಾಂಗದ ಪ್ರಕಾರ ದಸರಾ ಉದ್ಘಾಟನೆಗೆ ಮುಹೂರ್ತ, ಸಮಯ, ಘಳಿಗೆ ನಿಗದಿ ಮಾಡಲಾಗುತ್ತದೆ. ಹಿಂದೂ ಪಂಚಾಂಗದಂತೆ ಮುಹೂರ್ತ:ಈ ಬಾರಿ ಸೆ.22ರಿಂದ ದಸರಾ ಉತ್ಸವ ವಿದ್ಯುಕ್ತವಾಗಿ ಆರಂಭಗೊಳ್ಳಲಿದೆ.

ಅಂದು ಮೈಸೂರಿನ ಚಾಮುಂಡಿ ಬೆಟ್ಟದ ಮೇಲಿರುವ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಲಾಗುತ್ತದೆ. ದಸರಾ ಆಚರಣೆಗಾಗಿ ತರುವ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಗೆ ಉದ್ಘಾಟನಾಕಾರರು ಪುಷ್ಪಾರ್ಚನೆ ಮಾಡುವುದು ಇದುವರೆಗೂ ನಡೆದು ಬಂದಿರುವ ಸಾಂಪ್ರದಾಯಿಕ ರೂಢಿ.

ರಾಜಮನೆತನದಿಂದ ನಡೆಯುತ್ತಿದ್ದ ದಸರಾ ಉತ್ಸವವು ರಾಜ್ಯ ಸರ್ಕಾರದ ವತಿಯಿಂದ ನಡೆಯಲು ಆರಂಭವಾದ ಮೇಲೆ ಜನತಾ ದಸರಾವಾಗಿ ಮಾರ್ಪಟ್ಟಿತು. ವರ್ಷದಿಂದ ವರ್ಷಕ್ಕೆ ದಸರಾ ವೈಭೋಗವೂ ಹೆಚ್ಚುತ್ತಾ ಬಂದಿದೆ. ಧಾರ್ಮಿಕ ಆಚರಣೆಗಳ ಜೊತೆ ಜೊತೆಯಲ್ಲೇ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು, ಕ್ರೀಡೆಗಳು, ವಸ್ತುಪ್ರದರ್ಶನಗಳು ನಡೆದು ದಸರಾದ ಉತ್ಸವವನ್ನು ಇಮಡಿಗೊಳಿಸುತ್ತವೆ.

ಈ ಬಾರಿ ಬಾನು ಮುಷ್ತಾಕ್‌ ಅವರು ದಸರಾ ಉದ್ಘಾಟಿಸಬೇಕಿದೆ. ಅವರು ತಮ ಸ್ವಧರ್ಮದ ನಂಬಿಕೆಗೆ ವಿರುದ್ಧವಾಗಿ ದಸರಾ ಉದ್ಘಾಟನೆಗೂ ಮುನ್ನ ಚಾಮುಂಡೇಶ್ವರಿ ಮೂರ್ತಿಗೆ ಪೂಜೆ ಸಲ್ಲಿಸಲಿದ್ದಾರೆಯೇ ಎಂಬುದು ಬಹು ಚರ್ಚೆಗೆ ಗ್ರಾಸವಾಗಿರುವ ವಿಚಾರವಾಗಿದೆ. ಏಕೆಂದರೆ, ಅವರು ಕನ್ನಡಾಂಬೆ ಭುವನೇಶ್ವರಿ ಪ್ರತಿಮೆ ವಿಚಾರದಲ್ಲಿ ಈ ಹಿಂದೆ ಮಾತನಾಡಿರುವ ವಿಚಾರಕ್ಕೆ ಹಲವರ ವಿರೋಧ ವ್ಯಕ್ತವಾಗಿದೆ.

ಸಾಹಿತಿಗಳ ಬಗ್ಗೆ ಗೌರವ: ಸಾಹಿತಿಯಾದವರನ್ನು ಈ ನಾಡು ಬಹಳ ಗೌರವದಿಂದ ಸನಾಸಿ, ಸತ್ಕರಿಸುತ್ತಾ ಬಂದಿದೆ. ಅವರನ್ನು ಸಾಹಿತ್ಯ ಸಮೇಳನದ ಅಧ್ಯಕ್ಷ ಸ್ಥಾನದಂತಹ ಗೌರವಕ್ಕೆ ಆಯ್ಕೆ ಮಾಡಿದ್ದರೆ ಯಾರೂ ತಕರಾರು ತೆಗೆಯುತ್ತಿರಲಿಲ್ಲ. ಆದರೆ ಧಾರ್ಮಿಕ ಶ್ರದ್ದೆಯ ವಿಚಾರವಾಗಿರುವ ದಸರಾ ಮಹೋತ್ಸವ ಉದ್ಘಾಟನೆಗೆ ಇವರನ್ನು ಆಹ್ವಾನಿಸುತ್ತಿರುವುದು ಬಹುಸಂಖ್ಯಾತರ ಅಸಹನೆಗೆ ಕಾರಣವಾಗಿದೆ. ಹೀಗಾಗಿ ಒಂದೆಡೆ ತೀವ್ರ ವಿರೋಧವು ವ್ಯಕ್ತವಾಗುತ್ತಿದೆ.

ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿ ದಸರಾ ಮಹೋತ್ಸವಕ್ಕೆ ಪುಷ್ಪಾರ್ಚನೆ ಮೂಲಕ ಚಾಲನೆ ನೀಡುವ ಸಂಪ್ರದಾಯವಿದೆ. ನಿರಂತರವಾಗಿ ನಡೆದುಕೊಂಡು ಬಂದಿರುವ ಸಂಪ್ರದಾಯ, ಪರಂಪರೆ, ನಂಬಿಕೆಗಳಿಗೆ ವಿರುದ್ಧವಾಗಿ ಅವರನ್ನು ದಸರಾ ಉದ್ಘಾಟನಕಾರರನ್ನಾಗಿ ಮಾಡಿರುವುದು ಬಹಳಷ್ಟು ಜನರ ಅಸಮಾಧಾನಕ್ಕೆ ಅವಕಾಶ ಕಲ್ಪಿಸಿದೆ.

ವಿಜಯನಗರದ ಅರಸರು ಆರಂಭಿಸಿದ ದಸರಾ ಮಹೋತ್ಸವವನ್ನು ಅನಂತರ ಮೈಸೂರಿನ ಅರಸರು ಮುಂದುವರೆಸುತ್ತಾ ಬಂದಿದ್ದಾರೆ. ಈಗಲೂ ಅರಸು ಮನೆತನದವರು ಪ್ರತಿ ವರ್ಷ ಖಾಸಗಿಯಾಗಿ ದಸರಾ ಮಹೋತ್ಸವವನ್ನು ಮೈಸೂರು ಅರಮನೆಯಲ್ಲಿ ನೆರವೇರಿಸುತ್ತಾರೆ.

ಲಭ್ಯವಿರುವ ಮಾಹಿತಿ ಪ್ರಕಾರ ನಾಲ್ಕು ದಶಕಗಳಿಗೂ ಹೆಚ್ಚು ಕಾಲದಿಂದಲೂ ರಾಜ್ಯ ಸರ್ಕಾರದಿಂದ ದಸರಾ ಆಚರಿಸುತ್ತಿದ್ದು, ಇದು ನಾಡಹಬ್ಬವಾಗಿದೆ. ಈಗಲೂ ದಸರಾ ಆಚರಣೆಯ ಮಹಾನವಮಿ ದಿಬ್ಬವನ್ನು ವಿಜಯನಗರ ಸಾಮ್ರಾಜ್ಯದ ಹಂಪಿಯಲ್ಲಿ ಕಾಣಬಹುದಾಗಿದೆ.ಇದೇ ಮೊದಲಲ್ಲ:ದಸರಾ ಉತ್ಸವದ ಉದ್ಘಾಟನೆಗೆ ರಾಜ್ಯ ಸರ್ಕಾರ ಸಾಹಿತಿಯೊಬ್ಬರನ್ನು ಆಹ್ವಾನಿಸಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಡಾ.ಚಂದ್ರಶೇಖರ್‌ ಕಂಬಾರ, ಗಿರೀಶ್‌ ಕಾರ್ನಾಡ್‌, ಖ್ಯಾತ ಕವಿಗಳಾದ ಕೆ.ಎಸ್‌‍.ನಿಸಾರ್‌ ಅಹದ್‌, ಚನ್ನವೀರ ಕಣವಿ, ಸಾಹಿತಿಗಳಾದ ಬರಗೂರು ರಾಮಚಂದ್ರಪ್ಪ, ಹಂಪ ನಾಗರಾಜಯ್ಯ, ಚಿತ್ರ ಸಾಹಿತಿ ಹಂಸಲೇಖ, ಸಂಸದೆ ಸುಧಾ ನಾರಾಯಣಮೂರ್ತಿ ಅವರು ಕೂಡ ದಸರಾವನ್ನು ಉದ್ಘಾಟಿಸಿದ್ದಾರೆ.

ಅಲ್ಲದೆ, ಮಠಾಧೀಶರು, ವಿಜ್ಞಾನಿಗಳು, ರಾಜಕಾರಣಿಗಳು, ವೈದ್ಯರು ಸೇರಿದಂತೆ ಸಮಾಜದ ವಿವಿಧ ವರ್ಗಕ್ಕೆ ಸೇರಿದವರು ಕೂಡ ದಸರಾವನ್ನು ಉದ್ಘಾಟಿಸಿರುವ ನಿದರ್ಶನವಿದೆ. ನಾಡ ಉತ್ಸವವಾಗಿರುವ ದಸರಾ ಉದ್ಘಾಟನೆಯು ಸಂಪ್ರದಾಯ, ಪರಂಪರೆ, ಧಾರ್ಮಿಕ ಆಚರಣೆಗಳಿಗೆ ಧಕ್ಕೆಯಾಗದ ರೀತಿಯಲ್ಲಿ ಯಥಾರೀತಿ ನಡೆಯಬೇಕೆಂಬುದು ಬಹುತೇಕರಲ್ಲಿದೆ. ಇದಕ್ಕೆ ಯಾರ ಆಕ್ಷೇಪವೂ ಇದ್ದಂತಿಲ್ಲ.

ಜನರ ಭಾವನಗೆ ಧಕ್ಕೆಯಾಗದಿರಲಿ : ದಸರಾ ವೀಕ್ಷಣೆಗೆ ರಾಜ್ಯ ಮಾತ್ರವಲ್ಲದೆ ವಿವಿಧ ರಾಜ್ಯಗಳು ಹಾಗೂ ದೇಶ, ವಿದೇಶಿಗರು ಆಗಮಿಸಿ ವೀಕ್ಷಣೆ ಮಾಡುತ್ತಾರೆ. ದಸರಾ ಉತ್ಸವದ ಕೊನೆಯ ದಿನ ನಡೆಯುವ ಜಂಬೂಸವಾರಿ ವಿಶ್ವವಿಖ್ಯಾತವಾಗಿದೆ. ಇಂತಹ ಮಹತ್ವವಿರುವ ಆಚರಣೆಯಲ್ಲಿ ಜನರ ಭಾವನೆಗಳಿಗೆ ಭಿನ್ನವಾದ ನಿರ್ಧಾರವನ್ನು ಆಳುವ ಸರ್ಕಾರಗಳು ಮಾಡಬಾರದೆಂಬ ಅಭಿಪ್ರಾಯ ಬಹಳಷ್ಟು ಜನರಿಂದ ಕೇಳಿಬರುತ್ತಿದೆ.

ಓಲೈಕೆಯ ರಾಜಕಾರಣವನ್ನು ಚುನಾವಣೆಗೆ ಬಳಸಿಕೊಳ್ಳಲು ಅಡ್ಡಿ ಇಲ್ಲ. ಆದರೆ ಧಾರ್ಮಿಕ ಆಚರಣೆಯಲ್ಲಿ ತರುವುದು ಸೂಕ್ತವಲ್ಲ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ. ಸಂವಿಧಾನದಲ್ಲಿ ಎಲ್ಲಾ ಧರ್ಮ ಹಾಗೂ ನಂಬಿಕೆ, ಆಚರಣೆಗಳಿಗೆ ಗೌರವ ದೊರೆತಿದೆ. ಅದರಂತೆ ಯಾರ ಭಾವನೆಗೂ ಧಕ್ಕೆಯಾಗದ ರೀತಿಯಲ್ಲಿ ನಡೆದುಕೊಳ್ಳುವುದು ಯುಕ್ತವಾಗಿದೆ. ಪರಸ್ಪರ ಗೌರವ ಇರಬೇಕು.

ದಿನ ದಿನಕ್ಕೂ ಒಂದೊಂದು ಸ್ವರೂಪ ಪಡೆಯುತ್ತಿರುವ ದಸರಾ ಉದ್ಘಾಟನೆಯ ಚರ್ಚೆಯು ಮುಂದೆ ಯಾವ ಸ್ವರೂಪ ಪಡೆಯುತ್ತದೆಯೋ ತಿಳಿಯದು. ತೀವ್ರ ಚರ್ಚೆಯ ವಿಷಯವಾಗಿರುವುದರಿಂದ ನಾಡಿನ ಜನರ ಗಮನವನ್ನೂಕೂಡ ದಸರಾ ಆಚರಣೆ ಬಗ್ಗೆ ಹೆಚ್ಚು ಗಮನಸೆಳೆದಿರುವುದರಲ್ಲಿ ಎರಡು ಮಾತಿಲ್ಲ.

RELATED ARTICLES

Latest News