ಬೆಂಗಳೂರು,ಡಿ.27- ನೂರ ಮೂವತ್ತಕ್ಕೂ ಹೆಚ್ಚು ಪೌರ ಕಾರ್ಮಿಕರಿಗೆ ಕಳೆದ ಮೂರೂವರೆ ವರ್ಷಗಳಿಂದ ಪಿಎಫ್ ಮತ್ತು ಇಎಸ್‍ಐ ಪಾವತಿಸದೆ ವಂಚಿಸಿರುವ ವಂಚಕರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಸಫಾಯಿ ಕರ್ಮಚಾರಿಗಳ ಖಾಯಂ ಹಾಗೂ ನೇರವೇತನ ಪೌರ ಕಾರ್ಮಿಕರ ಮೇಲ್ವಿಚಾರಕರ ಮಹಾ ಸಂಘ ಆಗ್ರಹಿಸಿದೆ.
ಈ ಕುರಿತಂತೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರಿಗೆ ಪತ್ರ ಬರೆದಿರುವ ಮಹಾ ಸಂಘದ ಬೆಂಗಳೂರು ನಗರ ಘಟಕದ ಅಧ್ಯಕ್ಷ ಮುತ್ಯಾಲಪ್ಪ ಅವರು ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ದಕ್ಷಿಣ ವಲಯದ ಪದ್ಮನಾಭನಗರ ವಿಭಾಗದ ಗಣೇಶ ಮಂದಿರ ವಾರ್ಡ್‍ನಲ್ಲಿ 2013 ರ ಜೂನ್ ತಿಂಗಳಿನಿಂದ 2019 ರ ಸೆಪ್ಟೆಂಬರ್ ತಿಂಗಳ ವರೆಗೆ ವಿ.ಕೆ ಎಂಟರ್‍ಪ್ರೈಸಸ್ ಸಂಸ್ಥೆಯ ಮಾಲೀಕರಾದ ವಿಜಯ್ ಕುಮಾರ್ ಮತ್ತು ಮುನಿರಾಜು ಎಂಬುವವರು ತ್ಯಾಜ್ಯ ವಿಲೇವಾರಿ ಗುತ್ತಿಗೆದಾರರಾಗಿ ಕಾರ್ಯ ನಿರ್ವಹಿಸಿರುತ್ತಾರೆ. ಈ ಅವಧಿಯಲ್ಲಿ ಇವರು 134 ಮಂದಿ ಪೌರ ಕಾರ್ಮಿಕರನ್ನು ಉಪಯೋಗಿಸಿಕೊಂಡು ತ್ಯಾಜ್ಯ ವಿಲೇವಾರಿ ಕಾರ್ಯವನ್ನು ನಿರ್ವಹಿಸಿ, ತಮ್ಮ ಪಾಲಿನ ಸಂಪೂರ್ಣ ಹಣವನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವತಿಯಿಂದ ಪಡೆದುಕೊಂಡಿರುತ್ತಾರೆ.
ಆದರೆ, ತಾವು ಪಡೆದುಕೊಂಡ ಗುತ್ತಿಗೆ ಹಣದಲ್ಲಿ ಈ ಪೌರ ಕಾರ್ಮಿಕರಿಗೆ ನ್ಯಾಯಯುತವಾಗಿ ಸಲ್ಲಿಸಲೇಬೇಕಿದ್ದ ಪಿಎಫ್ ಮತ್ತು ಇಎಸ್‍ಐ ವಂತಿಕೆಗಳನ್ನು ಆಯಾ ಸಂಸ್ಥೆಗಳಿಗೆ ಪಾವತಿಸದೇ ವಂಚಿಸಿರುತ್ತಾರಲ್ಲದೇ, ಮೇಲೆ ತಿಳಿಸಿರುವ 134 ಮಂದಿ ಪೌರ ಕಾರ್ಮಿಕರಿಗೆ ಸಿಗಬೇಕಾದ ಯಾವುದೇ ಸೌಲಭ್ಯಗಳನ್ನು ನೀಡಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಲೋಕಸಭೆ ಚುನಾವಣೆ ಘೋಷಣೆ ಮುನ್ನವೇ ಅಭ್ಯರ್ಥಿಗಳ ಲಿಸ್ಟ್ ಪ್ರಕಟಿಸಲು ಮುಂದಾದ ಬಿಜೆಪಿ
ಈ ಸಂಬಂಧ ಸಹಾಯಕ ಕಾರ್ಯಪಾಲಕ ಅಭಿಯಂತರರು, ಘನತ್ಯಾಜ್ಯ ನಿರ್ವಹಣೆ ಇಲಾಖೆ, ಬನಶಂಕರಿ ಉಪ ವಿಭಾಗ ಇವರು ಚನ್ನಮ್ಮನ ಕೆರೆ ಅಚ್ಚುಕಟ್ಟು ಪೋಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿ ಸದರಿ ಗುತ್ತಿಗೆದಾರರ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ.ಆದರೆ, ಈವರೆವಿಗೆ ಪಾಲಿಕೆಯ ಅಧಿಕಾರಿಗಳು ಸಂಬಂಧಪಟ್ಟ ಪೋಲೀಸ್ ಠಾಣೆಯ ತನಿಖಾಧಿಕಾರಿಗಳಿಗೆ ಅಗತ್ಯವಿರುವ ದಾಖಲೆಗಳನ್ನು ಸಲ್ಲಿಸದೇ ಇರುವುದನ್ನು ನೋಡಿದರೆ ಇವರು ಗುತ್ತಿಗೆದಾರರೊಂದಿಗೆ ಶಾಮೀಲಾಗಿರುವುದು ಅತ್ಯಂತ ಸ್ಪಷ್ಟವಾಗಿರುತ್ತದೆ.
ಆದ ಕಾರಣ, ಸಂಬಂಧಪಟ್ಟ ಈ ಅಧಿಕಾರಿಗಳ ವಿರುದ್ಧ ಕಾನೂನು ರೀತ್ಯಾ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಬಿಬಿಎಂಪಿಯ ಮಾನ್ಯ ಮುಖ್ಯ ಆಯುಕ್ತರನ್ನು, ಮಾನ್ಯ ಆಡಳಿತಾಧಿಕಾರಿಗಳನ್ನು ಮತ್ತು ಘನತ್ಯಾಜ್ಯ ನಿರ್ವಹಣೆ ಇಲಾಖೆಯ ಮಾನ್ಯ ವಿಶೇಷ ಆಯುಕ್ತರನ್ನು ಆಗ್ರಹಿಸಲಾಗಿದೆ ಎಂದು ಮುತ್ಯಾಲಪ್ಪ ತಿಳಿಸಿದ್ದಾರೆ.
ಹಾಗೂ ಪೌರಕಾರ್ಮಿಕರಿಗೆ ಅನ್ಯಾಯ ಮಾಡಿರುವ ಸಂಸ್ಥೆಯನ್ನು ಕಪ್ಪುಪಟ್ಟಿಗೆ ಸೇರಿಸುವುದಲ್ಲದೆ ಅನ್ಯಾಯಕ್ಕೊಳಗಾಗಿರುವ ಪೌರ ಕಾರ್ಮಿಕರಿಗೆ ನ್ಯಾಯ ದೊರಕಿಸಿಕೊಡಬೇಕು ಇಲ್ಲದಿದ್ದರೆ ಬಿಬಿಎಂಪಿ ಕೇಂದ್ರ ಕಚೇರಿ ಹಾಗೂ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ನಿವಾಸದ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.