ಬೆಂಗಳೂರು,ಸೆ.2– ಬಾಕಿ ಇರುವ ಬಿಲ್ ಪಾವತಿಗೆ ಒತ್ತಾಯಿಸಿ ಗುತ್ತಿಗೆದಾರರು ಇಂದಿನಿಂದ ಬಿಬಿಎಂಪಿ ವ್ಯಾಪ್ತಿಯ ಎಲ್ಲ ಕಾಮಗಾರಿಗಳನ್ನು ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಈ ಹಿಂದೆ ಮಾಡಿದ್ದ ಕಾಮಗಾರಿಗಳ ಶೇ.75 ರಷ್ಟು ಬಿಲ್ ಅನ್ನು ಪಾವತಿಸಿರುವ ಬಿಬಿಎಂಪಿ ಅಧಿಕಾರಿಗಳು ಬಾಕಿ ಬಿಡುಗಡೆ ಮಾಡಬೇಕಾದ ಶೇ.25ರಷ್ಟು ಬಿಲ್ ಪಾವತಿಗೆ ಮೀನಾಮೇಷ ಎಣಿಸುತ್ತಿರುವುದನ್ನು ಖಂಡಿಸಿ ಗುತ್ತಿಗೆದಾರರು ಈ ನಿರ್ಧಾರಕ್ಕೆ ಬಂದಿದ್ದಾರೆ.
ಗುತ್ತಿಗೆದಾರರಿಗೆ ಪಾವತಿಸಬೇಕಾದ ಬಿಲ್ ಮೊತ್ತ ಬರೋಬ್ಬರಿ 1600 ಕೋಟಿ ಇದೆ. ಕಳೆದ ಎರಡು ವರ್ಷಗಳಿಂದ ಬಿಬಿಎಂಪಿ ಗುತ್ತಿಗೆದಾರರ ಬಿಲ್ ಬಾಕಿ ಉಳಿಸಿಕೊಂಡಿದೆ. ಹೀಗಾಗಿ ಬಾಕಿ ಬಿಲ್ ಪಾವತಿಗೆ ಗುತ್ತಿಗೆದಾರರ ಪಟ್ಟು ಹಿಡಿದಿದ್ದಾರೆ.
ಬಾಕಿ ಬಿಲ್ ಬಿಡುಗಡೆ ಮಾಡುವಂತೆ ಬೆಂಗಳೂರು ಉಸ್ತುವಾರಿ ಸಚಿವರಾಗಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಹಲವು ಬಾರಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಗುತ್ತಿಗೆದಾರರು ಪ್ರತಿಭಟನೆ ಹಾದಿ ಹಿಡಿದಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಗುಂಡಿ ಮುಚ್ಚೋದು.ಬೀದಿ ದೀಪ ನಿರ್ವಹಣೆ.. ಕಟ್ಟಡಗಳ ನಿರ್ಮಾಣ.. ವೈಟ್ ಟ್ಯಾಪಿಂಗ್ ಕಾಮಗಾರಿ ಸೇರಿದಂತೆ ಎಲ್ಲಾ ರೀತಿಯ ಕಾಮಗಾರಿಗಳನ್ನು ಸ್ಥಗಿತಗೊಳಿಸಲು ಬಿಬಿಎಂಪಿ ಗುತ್ತಿಗೆದಾರರು ನಿರ್ಧರಿಸಿದ್ದಾರೆ.
ಸರ್ಕಾರ ತೀರ್ಮಾನಿಸಲಿದೆ; ಗುತ್ತಿಗೆದಾರರ ಪ್ರತಿಭಟನೆ ಕುರಿತಂತೆ ಪ್ರತಿಕ್ರಿಯಿಸಿರುವ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಕಾಮಗಾರಿ ಸ್ಥಗಿತದಿಂದ ಯಾವುದೇ ಪ್ರಯೋಜನವಿಲ್ಲ. ಆದರೂ ನಾವು ಗುತ್ತಿಗೆದಾರರ ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತರುತ್ತೇವೆ ಸರ್ಕಾರ ಕೈಗೊಳ್ಳುವ ನಿರ್ಧಾರಕ್ಕೆ ನಾವು ಬದ್ಧರಾಗಿರುತ್ತೇವೆ ಎಂದಿದ್ದಾರೆ.