Thursday, September 19, 2024
Homeರಾಜ್ಯ2 ತಿಂಗಳೊಳಗಾಗಿ ಕೆಎಎಸ್ ಪೂರ್ವಭಾವಿ ಮರು ಪರೀಕ್ಷೆ

2 ತಿಂಗಳೊಳಗಾಗಿ ಕೆಎಎಸ್ ಪೂರ್ವಭಾವಿ ಮರು ಪರೀಕ್ಷೆ

KAS preliminary Re-examination within 2 months

ಬೆಂಗಳೂರು,ಸೆ.2- ಕೆಪಿಎಸ್ಸಿ ಪರೀಕ್ಷೆ ಕುರಿತಂತೆ ಸೃಷ್ಟಿಯಾಗಿದ್ದ ತೀವ್ರ ವಿವಾದಗಳಿಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಎರಡು ತಿಂಗಳೊಳಗಾಗಿ ಕೆಎಎಸ್ನ ಪೂರ್ವಭಾವಿ ಮರುಪರೀಕ್ಷೆ ನಡೆಸುವುದಾಗಿ ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಅವರು, ಗೆಜೆಟೆಡ್ ಪ್ರೊಬೆಷನರ್ರಸ ಹುದ್ದೆಗಳ ನೇಮಕಾತಿಗೆ ಕೆಪಿಎಸ್ಸಿ ನಡೆಸಿದ ಪರೀಕ್ಷೆಯಲ್ಲಿನ ಪ್ರಶ್ನೆಪತ್ರಿಕೆಗಳಲ್ಲಿ ಕನ್ನಡಕ್ಕೆ ಸಂಬಂಧಪಟ್ಟಂತೆ ಅಸಮರ್ಪಕ ಭಾಷಾಂತರ ಕಂಡುಬಂದಿದೆ ಎಂದಿದ್ದಾರೆ.

ಈ ಹಿನ್ನೆಲೆಯಲ್ಲಿ ನಾನು ಕೆಪಿಎಸ್ಸಿಗೆ ಸೂಚನೆ ನೀಡಿದ್ದು, ಎರಡು ತಿಂಗಳೊಳಗಾಗಿ ಮರುಪರೀಕ್ಷೆ ನಡೆಸುವಂತೆ ಸೂಚಿಸಿದ್ದೇನೆ. ಪರೀಕ್ಷಾ ಲೋಪಗಳಿಗೆ ಕಾರಣರಾದವರನ್ನು ಕರ್ತವ್ಯದಿಂದ ಮುಕ್ತಗೊಳಿಸಲಾಗಿದೆ.

ಮುಂದಿನ ಪರೀಕ್ಷೆಯನ್ನು ಜವಾಬ್ದಾರಿಯುತವಾಗಿ ಹಾಗೂ ಹೊಣೆಗಾರಿಕೆಯೊಂದಿಗೆ ನಡೆಸಲಾಗುವುದು. ನ್ಯಾಯಸಮತ ಹಾಗೂ ಶ್ರದ್ಧಾ ಕ್ರಮಗಳನ್ನ ಅನುಸರಿಸುವಂತೆ ಸೂಚಿಸಲಾಗಿದೆ. ನೇಮಕಾತಿಯ ಸಮಗ್ರತೆಯನ್ನು ಎತ್ತಿ ಹಿಡಿಯುವ ಬದ್ಧತೆ ನಮದಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

ಕಳೆದ ತಿಂಗಳ 27 ರಂದು ನಡೆದ ಕೆಎಎಸ್ ಪರೀಕ್ಷೆಯಲ್ಲಿನ ಪ್ರಶ್ನೆಪತ್ರಿಕೆಯಲ್ಲಿ 50ಕ್ಕೂ ಹೆಚ್ಚು ಪ್ರಶ್ನೆಗಳು ಅಸಮರ್ಪಕವಾಗಿದ್ದವು. ಅದರಲ್ಲೂ ಇಂಗ್ಲಿಷ್ನಿಂದ ಕನ್ನಡಕ್ಕೆ ಪ್ರಶ್ನೆಯನ್ನು ಭಾಷಾಂತರಿಸುವಾಗ ಸಾಕಷ್ಟು ಲೋಪಗಳಾಗಿದ್ದವು ಎಂಬ ಆರೋಪಗಳಿವೆ. ಈ ಹಿನ್ನೆಲೆಯಲ್ಲಿ ಮರುಪರೀಕ್ಷೆಗಾಗಿ ತೀವ್ರ ಸ್ವರೂಪದ ಹೋರಾಟಗಳು ಆಯೋಜನೆಗೊಳ್ಳುತ್ತಿದ್ದವು.

ಕಾಂಗ್ರೆಸ್ ಪಕ್ಷದಲ್ಲೇ ಗುರುತಿಸಿಕೊಂಡಿದ್ದ ಅನೇಕರು ಮರುಪರೀಕ್ಷೆಗೆ ಪಟ್ಟು ಹಿಡಿದಿದ್ದರು. ಕೆಪಿಎಸ್ಸಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಕರವೇ ಅಧ್ಯಕ್ಷ ನಾರಾಯಣ ಗೌಡ ಅವರು ಈ ನಿಟ್ಟಿನಲ್ಲಿ ಹೇಳಿಕೆ ನೀಡಿ ಕೆಎಎಸ್ ಪರೀಕ್ಷೆಯಲ್ಲಿನ ಲೋಪದೋಷಗಳ ಕುರಿತು ಕಿಡಿಕಾರಿ ಮರುಪರೀಕ್ಷೆಗೆ ಒತ್ತಾಯಿಸಿದ್ದರು. ಸಾರ್ವಜನಿಕರ ಆಕ್ರೋಶಕ್ಕೆ ಮಣಿದ ಸರ್ಕಾರ ಕೊನೆಗೂ ಮರುಪರೀಕ್ಷೆ ನಡೆಸಲು ಮುಂದಾಗಿದೆ.

RELATED ARTICLES

Latest News