Monday, September 16, 2024
Homeಬೆಂಗಳೂರುಗ್ರೇಟರ್‌ ಬೆಂಗಳೂರು ವ್ಯಾಪ್ತಿಗೆ ಕುಂಬಳಗೂಡು, ಕಡಬಗೆರೆ ಕ್ರಾಸ್..! ಬಿಬಿಎಂಪಿ ಚುನಾವಣೆ ಮತ್ತೆ ಮುಂದಕ್ಕೆ..?

ಗ್ರೇಟರ್‌ ಬೆಂಗಳೂರು ವ್ಯಾಪ್ತಿಗೆ ಕುಂಬಳಗೂಡು, ಕಡಬಗೆರೆ ಕ್ರಾಸ್..! ಬಿಬಿಎಂಪಿ ಚುನಾವಣೆ ಮತ್ತೆ ಮುಂದಕ್ಕೆ..?

ಬೆಂಗಳೂರು,ಆ.16– ಸಿಲಿಕಾನ್‌ ಸಿಟಿ ಹೊರ ವಲಯದ ಪ್ರದೇಶಗಳಿಗೆ ಶೀಘ್ರದಲ್ಲೇ ಶುಕ್ರದೆಸೆ ಆರಂಭವಾಗಲಿದೆ. ಕಳೆದ ನಾಲ್ಕು ವರ್ಷಗಳಿಂದ ಚುನಾವಣೆ ಕಾಣದ ಬಿಬಿಎಂಪಿಗೆ ಎಲೆಕ್ಷನ್‌ ಮಾಡುವ ಬದಲು ಈಗಿನ ಕಾಂಗ್ರೆಸ್‌‍ ಸರ್ಕಾರ ಬಿಬಿಎಂಪಿಯನ್ನು ಗ್ರೇಟರ್‌ ಬೆಂಗಳೂರನ್ನಾಗಿ ಪರಿವರ್ತಿಸಲು ತೀರ್ಮಾನಿಸಿರುವುದರಿಂದ ಬಿಬಿಎಂಪಿ ಹೊರ ವಲಯದ ಪ್ರದೇಶಗಳಿಗೆ ಶುಕ್ರದೆಸೆ ದಕ್ಕುವ ಸಾಧ್ಯತೆಗಳಿವೆ.

ಬಿಬಿಎಂಪಿ ವ್ಯಾಪ್ತಿಯಿಂದ ಒಂದು ಕಿ.ಮೀ ಸುತ್ತಳತೆಯ ಪ್ರದೇಶಗಳನ್ನು ಗ್ರೇಟರ್‌ ಬೆಂಗಳೂರು ವ್ಯಾಪ್ತಿಗೆ ಸೇರ್ಪಡೆ ಮಾಡಿಕೊಳ್ಳುವುದು ಸರ್ಕಾರದ ಉದ್ದೇಶವಾಗಿರುವುದರಿಂದ ಆ ಭಾಗದ ಪ್ರದೇಶಗಳ ಜಮೀನುಗಳಿಗೆ ಬಂಗಾರದ ಬೆಲೆ ಬರುವುದು ಗ್ಯಾರಂಟಿಯಾಗಿದೆ.

ಹೀಗಾಗಿ ಹೊರವಲಯಗಳಾದ ಮೈಸೂರು ರಸ್ತೆಯ ಕುಂಬಳಗೂಡು, ಮಾಗಡಿರಸ್ತೆಯ ಮಾಚೋಹಳ್ಳಿ ಗೇಟ್‌ವರೆಗಿನ ಪ್ರದೇಶಗಳು ಗ್ರೇಟರ್‌ ಬೆಂಗಳೂರು ವ್ಯಾಪ್ತಿಗೆ ಸೇರ್ಪಡೆಗೊಳ್ಳುವ ಸಾಧ್ಯತೆಗಳಿವೆ ಎನ್ನಲಾಗಿದೆ. ಇನ್ನು ತುಮಕೂರು ರಸ್ತೆಯ ದಾಸರಹಳ್ಳಿ ನಂತರದ ಪ್ರದೇಶಗಳು ಈಗಾಗಲೇ ಬಿಬಿಎಂಪಿ ಮಾದರಿಯಲ್ಲಿ ಸಾಕಷ್ಟು ಅಭಿವೃದ್ಧಿ ಹೊಂದಿರುವುದರಿಂದ ನೆಲಮಂಗಲದವರೆಗಿನ ಹಲವಾರು ಪ್ರದೇಶಗಳು ಗ್ರೇಟರ್‌ ಬೆಂಗಳೂರು ವ್ಯಾಪ್ತಿಗೆ ಸೇರ್ಪಡೆ ಮಾಡಿಕೊಳ್ಳಲು ಸರ್ಕಾರ ತೀರ್ಮಾನಿಸದೆ ಎಂದು ತಿಳಿದುಬಂದಿದೆ.

ಅದೇ ರೀತಿ ಯಲಹಂಕ ಸುತ್ತಮತ್ತಲ ಪ್ರದೇಶಗಳು, ಹೊಸಕೋಟೆ, ಹೊಸೂರು ರಸ್ತೆ ಹಾಗೂ ಕನಕಪುರ ರಸ್ತೆಯ ಹಲವಾರು ಪ್ರದೇಶಗಳು ಗ್ರೇಟರ್‌ ಬೆಂಗಳೂರು ವ್ಯಾಪ್ತಿಗೆ ತರಲು ಕಸರತ್ತು ನಡೆಸಲಾಗುತ್ತಿದೆ.ಬಿಬಿಎಂಪಿ ಚುನಾವಣೆ ಸಾಧಕ ಬಾಧಕ ಕುರಿತಂತೆ ವರದಿ ನೀಡುವಂತೆ ಸರ್ಕಾರ ರಚಿಸಿರುವ ಸಮಿತಿ ಸದಸ್ಯರುಗಳು ಬಿಬಿಎಂಪಿ ಹೊರ ವಲಯದ ಹಲವಾರು ಪ್ರದೇಶಗಳಿಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕುತ್ತಿದ್ದಾರೆ ಎಂದು ತಿಳಿದುಬಂದಿದೆ.

ಬಿಬಿಎಂಪಿ ಸುತ್ತಮುತ್ತಲಿನ ಪ್ರದೇಶಗಳನ್ನು ಒಳಗೊಂಡ ವಿಧಾನಸಭಾ ಕ್ಷೇತ್ರಗಳ ಶಾಸಕರುಗಳು ಈಗಾಗಲೇ ಗ್ರೇಟರ್‌ ಬೆಂಗಳೂರು ವ್ಯಾಪ್ತಿಗೆ ಸೇರ್ಪಡೆಗೊಳ್ಳುವ ಪ್ರದೇಶಗಳಿಗೆ ಭೇಟಿ ನೀಡಿ ಅಗತ್ಯ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ ಎಂದು ವರದಿಯಾಗಿದೆ.

ರಿಯಲ್‌ ಎಸ್ಟೇಟ್‌ ಉದ್ಯಮ ಚುರುಕು: ಬಿಬಿಎಂಪಿ ಹೊರ ವಲಯದ ಪ್ರದೇಶಗಳಿಗೆ ಈಗಾಗಲೇ ಚಿನ್ನದ ಬೆಲೆ ಇದೆ. ಇದೀಗ ಅಲ್ಲಿನ ಕೆಲವು ಪ್ರದೇಶಗಳು ಗ್ರೇಟರ್‌ ಬೆಂಗಳೂರು ವ್ಯಾಪ್ತಿಗೆ ಸೇರ್ಪಡೆಗೊಳ್ಳಲಿರುವ ಬಗ್ಗೆ ಮಾಹಿತಿ ಪಡೆದಿರುವ ರಿಯಲ್‌ ಎಸ್ಟೇಟ್‌ ಉದ್ಯಮ ಚುರುಕುಗೊಂಡಿದೆ.

ಗ್ರೇಟರ್‌ ಬೆಂಗಳೂರು ವ್ಯಾಪ್ತಿಗೆ ಸೇರ್ಪಡೆಗೊಳ್ಳುವ ಸಾಧ್ಯತೆಗಳಿರುವ ಪ್ರದೇಶಗಳಲ್ಲಿ ತಮ ಉದ್ಯಮಗಳನ್ನು ವಿಸ್ತರಿಸಲು ರಿಯಲ್‌ ಎಸ್ಟೇಟ್‌ ಉದ್ಯಮದವರು ತಯಾರಿ ನಡೆಸುತ್ತಿದ್ದಾರೆ ಎನ್ನಲಾಗಿದೆ.

ನ್ಯಾಯಾಲಯದ ತೀರ್ಮಾನವೇ ಅಂತಿಮ:
ಬಿಬಿಎಂಪಿ ಚುನಾವಣೆ ಕುರಿತಂತೆ ನ್ಯಾಯಾಲದಯ ತೀರ್ಪಿಗೆ ಕಾಯಲಾಗುತ್ತಿದೆ. ಒಂದು ವೇಳೆ ಕಳೆದ ನಾಲ್ಕು ವರ್ಷಗಳಿಂದ ಬಿಬಿಎಂಪಿಗೆ ಚುನಾವಣೆ ಮಾಡದಿರುವ ಸರ್ಕಾರದ ತೀರ್ಮಾನಕ್ಕೆ ನ್ಯಾಯಾಲಯ ಛೀಮಾರಿ ಹಾಕಿದರೆ ಗ್ರೇಟರ್‌ ಬೆಂಗಳೂರು ರಚನೆ ಮಾಡುವುದನ್ನು ಬಿಟ್ಟು ಬಿಬಿಎಂಪಿಗೆ ಚುನಾವಣೆ ನಡೆಸುವುದು ಸರ್ಕಾರಕ್ಕೆ ಅನಿವಾರ್ಯವಾಗಲಿದೆ.

ಹೀಗಾಗಿ ಗ್ರೇಟರ್‌ ಬೆಂಗಳೂರು ರಚನೆಯ ಜೊತೆಗೆ ಬಿಬಿಎಂಪಿಗೆ ಚುನಾವಣೆ ನಡೆಸುವ ಬಗ್ಗೆಯೂ ಸರ್ಕಾರ ಸಿದ್ದತೆ ಮಾಡಿಕೊಳ್ಳತೊಡಗಿದೆ. ಹೇಗಾದರೂ ಮಾಡಿ ಸರ್ಕಾರದ ಗ್ರೇಟರ್‌ ಬೆಂಗಳೂರು ರಚನೆಗೆ ನ್ಯಾಯಾಲಯ ಅಡ್ಡಿಬರದಂತೆ ನೋಡಿಕೊಳ್ಳಬೇಕು ಎಂದು ಅಡ್ವೋಕೇಟ್‌ ಜನರಲ್‌ ಅವರಿಗೆ ಸರ್ಕಾರದ ಹಿರಿಯ ಸಚಿವರೊಬ್ಬರು ಸೂಚ್ಯವಾಗಿ ತಿಳಿಸಿದ್ದಾರೆ ಎಂದು ನಂಬಲರ್ಹ ಮೂಲಗಳು ಈ ಸಂಜೆಗೆ ತಿಳಿಸಿವೆ.

ಸರ್ಕಾರದವರ ಮಾತಿಗೆ ಮನ್ನಣೆ ನೀಡದೆ ನಾಲ್ಕು ವರ್ಷಗಳಿಂದ ಚುನಾವಣೆ ನಡೆಸದಿರುವ ಕ್ರಮವನ್ನು ಖಂಡಿಸಿ ಈ ಕೂಡಲೇ ಬಿಬಿಎಂಪಿಗೆ ಚುನಾವಣೆ ನಡೆಸುವಂತೆ ನ್ಯಾಯಾಲಯ ಸೂಚಿಸಿದರೆ ಡಿಸಂಬರ್‌ ವೇಳೆಗೆ ಚುನಾವಣೆ ನಡೆದರೂ ನಡೆಯಬಹುದು ಒಂದು ವೇಳೆ ಗ್ರೇಟರ್‌ ಬೆಂಗಳೂರು ರಚನೆಗೆ ನ್ಯಾಯಾಲಯ ಸಮತಿಸಿದರೆ ಇನ್ನು ಎರಡು ವರ್ಷಗಳ ಕಾಲ ಬಿಬಿಎಂಪಿಗೆ ಚುನಾವಣೆ ನಡೆಯುವುದಿಲ್ಲ ಎನ್ನುವಂತಾಗಿದೆ.

RELATED ARTICLES

Latest News