ಬೆಂಗಳೂರು,ಜೂ.6- ನಗರದ ವಾಹನ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ಬಿಬಿಎಂಪಿ ಬೃಹತ್ ಸುರಂಗ ಮಾರ್ಗ ನಿರ್ಮಾಣಕ್ಕೆ ಸಿದ್ದತೆ ನಡೆಸಿದೆ.18 ರಿಂದ 20 ಕಿ.ಮೀ ಉದ್ದದ ಸುರಂಗ ಮಾರ್ಗದ ಕಾರಿಡಾರ್ ಗೆ ಡಿಪಿಅರ್ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಈ ಹಿಂದೆ ಮೂರರಿಂದ ನಾಲ್ಕು ಕಿ.ಮೀ ಉದ್ದದ ಸುರಂಗ ಕಾರಿಡಾರ್ ನಿರ್ಮಾಣಕ್ಕೆ ತೀರ್ಮಾನಿಸಲಾಗಿತ್ತು. ಆದರೆ, ಅದರಿಂದ ಯಾವುದೇ ಪ್ರಯೋಜನವಿಲ್ಲ ಎನ್ನುವುದನ್ನು ಮನಗಂಡು 20 ಕಿ.ಮೀ ಉದ್ದದ ಕಾರಿಡಾರ್ ನಿರ್ಮಾಣಕ್ಕೆ ಬಿಬಿಎಂಪಿ ಮುಂದಾಗಿದೆ.
ಉತ್ತರದಿಂದ ದಕ್ಷಿಣಕ್ಕೆ ಅದೇ ರೀತಿ ಪಶ್ಚಿಮ ದಿಂದ ಪೂರ್ವ ಕ್ಕೆ ಸುಮಾರು 20 ಕಿ.ಮೀ ಕಾರಿಡಾರ್ ರಸ್ತೆಗೆ ಡಿಪಿಅರ್ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.
ಈಗಾಗಲೇ ಖಾಸಗಿ ಸಂಸ್ಥೆಯಿಂದ ಸುರಂಗ ಮಾರ್ಗ ನಿರ್ಮಾಣದ ಡಿಪಿಆರ್ ಸಿದ್ದಪಡಿಸಲಾಗಿದ್ದು, ಶೀಘ್ರದಲ್ಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ ಮಾಡಲಾಗುವುದು ಸರ್ಕಾರಿ ಗ್ರೀನ್ ಸಿಗ್ನಲ್ ನೀಡಿದರೆ ಕಾರಿಡಾರ್ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗುವುದು.
ಸುರಂಗ ಮಾರ್ಗವನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಮಾಡಬೇಕೇ ಅಥವಾ ಸರ್ಕಾರದಿಂದ ನಿರ್ಮಾಣ ಮಾಡಬೇಕೆ ಎಂಬುದನ್ನು ಮುಖ್ಯಮಂತ್ರಿಗಳು ತೀರ್ಮಾನಿಸಲಿದ್ದಾರೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.
ತಳಭಾಗದಲ್ಲಿ ಮೂರು ಪಥ ಹಾಗೂ ಮೇಲ್ಬಾಗದಲ್ಲಿ ಎರಡು ಪಥ ರಸ್ತೆ ನಿರ್ಮಾಣ ಮಾಡುವ ಉದ್ದೇಶ ಹೊಂದಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.ನಗರದ ಸಂಚಾರ ದಟ್ಟಣೆ ಕಡಿಮೆ ಮಾಡಲು ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿ ಹಲವು ಯೋಜನೆಗಳನ್ನು ಜಾರಿಗೆ ತಂದರೂ ಯಾವುದೇ ಪ್ರಯೋಜನವಾಗದಿರುವ ಹಿನ್ನೆಲೆಯಲ್ಲಿ ಈ ಹೊಸ ಐಡಿಯಾದ ರೂಪುರೇಷೆ ಸಿದ್ದವಾಗಿದೆ ಎಂದು ತಿಳಿದುಬಂದಿದೆ.
ಮೊದಲ ಹಂತದ ಕಾರಿಡಾರ್ ರಸ್ತೆ ಹೆಬ್ಬಾಳ ಜಂಕ್ಷನ್. ಅರಮನೆ ರಸ್ತೆ. ರೇಸ್ ಕೋರ್ಸ್ ರಸ್ತೆ. ಜಯನಗರ.ಅಶೋಕ ಪಿಲ್ಲರ್ ಹಾಗೂ ಸಿಲ್ಕ್ ಬೋರ್ಡ್ ಜಂಕ್ಷನ್‌ನಲ್ಲಿ ಸುರಂಗ ಮಾರ್ಗ ಪ್ರವೇಶ ಹಾಗೂ ನಿರ್ಗಮನ ದ್ವಾರಗಳು ಇರುತ್ತವೆ ಎನ್ನಲಾಗಿದೆ.ಈ ಮಾರ್ಗದಲ್ಲಿ ಕೆಂಪೇಗೌಡ ಏರ್ ಪೋರ್ಟ್ ಗೆ ಸರಾಗವಾಗಿ ಸಂಚರಿಸಲು ಅನುಕೂಲವಾಗಲಿದೆ ಎನ್ನಲಾಗಿದೆ.