ಬೆಂಗಳೂರು,ನ.23- ಸಾರ್ ಮೇಲಾಧಿಕಾರಿಗಳ ಕಿರುಕುಳದಿಂದ ನಮಗೆ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಇದೇ ರೀತಿ ನಾವು ವಿಶ್ರಾಂತಿ ಇಲ್ಲದೆ ಕೆಲಸ ಮಾಡಿದರೆ ಖಿನ್ನತೆಗೆ ಒಳಗಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಅನಾಹುತ ನಡೆಯುವ ಮೊದಲು ನಮಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಿ' ಎಂದು ಬಿಬಿಎಂಪಿ ಕಂದಾಯ ವಿಭಾಗದ ಅಧಿಕಾರಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಸಂಬಂಧ ಪಟ್ಟವರೊಂದಿಗೆ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಅಣ್ಣ ನಮಸ್ತೆ ಇಲ್ಲಿ ಎಲ್ಲ ನೌಕರರಿಗೂ ತೊಂದರೆ ಆಗುತ್ತಿದೆ ಬಟ್ ಮೇಲಿನ ಅಧಿಕಾರಗಳ ಹಿಂಸೆಯಿಂದ ತುಂಬಾ ಕಿರುಕುಳವಾಗುತ್ತಿದೆ. ಸರಿಯಾದ ಸಮಯಕ್ಕೆ ಮನೆಗೆ ಹೋಗದೆ ಹಲವಾರು ಮಂದಿ ಅನಾರೋಗ್ಯಕ್ಕೆ ಈಡಾಗುತ್ತಿದ್ದಾರೆ. ನಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಡಿ’ ಎಂದು ಕಂದಾಯಾಧಿಕಾರಿಯೊಬ್ಬರು ಸಾಮಾಜಿಕ ಜಾಲತಾಣದ ಮೂಲಕ ಅಲವತ್ತುಕೊಂಡಿದ್ದಾರೆ.
ಬಿಬಿಎಂಪಿ ಕಂದಾಯ ವಿಭಾಗದಲ್ಲಿ ಕಂದಾಯಧಿಕಾರಿ, ಸಹಾಯಕ ಕಂದಾಯಾಧಿಕಾರಿ ಮತ್ತು ಕಂದಾಯ ನಿರೀಕ್ಷಕ ಮತ್ತು ಸಿಬ್ಬಂದಿಗಳು ದಿನದ 24 ಗಂಟೆಗಳ ಕಾಲ ಕೆಲಸ ಮಾಡುವಂತಾಗಿದೆ. ಇದರಿಂದ ನಮ್ಮ ಗೋಳು ಕೇಳುವವರು ಯಾರು ಎಂದು ಅವರುಗಳು ಪ್ರಶ್ನಿಸಿದ್ದಾರೆ.
ಬೃಹತ್ ಬೆಂಗಳೂರು ಮಹಾ ನಗರ ವ್ಯಾಪ್ತಿಯಲ್ಲಿ 1.30 ಕೋಟಿ ಜನರು ವಾಸವಿದ್ದಾರೆ. ಅಂದಾಜು 28ಲಕ್ಷಕ್ಕೂ ಹೆಚ್ಚು ಆಸ್ತಿಗಳು ನಗರ ಪ್ರದೇಶದಲ್ಲಿ ಇದೆ . ಈ ಪ್ರಮಾಣದ ಜನಸಂಖ್ಯೆಗೆ ಸಮರ್ಪಕವಾಗಿ ಕಾರ್ಯನಿರ್ವಹಿಸಲು ಕಂದಾಯ ಇಲಾಖೆಯಲ್ಲಿ ಸಿಬ್ಬಂದಿಗಳ ಕೊರತೆ ಇದೆ.
ಇತ್ತೀಚೆಗಿನ ದಿನಗಳಲ್ಲಿ ಕಂದಾಯ ಇಲಾಖೆಯ ಕಂದಾಧಿಯಾಕಾರಿ ಮತ್ತು ಸಿಬ್ಬಂದಿಗಳ ಮೇಲೆ ಕೆಲಸದ ಒತ್ತಡ ಹೆಚ್ಚಾಗಿರುವುದರಿಂದ ನಾವೆಲ್ಲಾ ಮಾನಸಿಕವಾಗಿ ಜರ್ಜರಿತರಾಗಿದ್ದೇವೆ ಎಂದು ಅವರುಗಳು ಹೇಳಿಕೊಂಡಿದ್ದಾರೆ. ಕಂದಾಯ ವಸೂಲಾತಿ, ಚುನಾವಣೆ ತಯಾರಿ, ಬೆಸ್ಕಾಂ ತೆರಿಗೆ ಮತ್ತು ಮನೆಗಳ ಸರ್ವೆ, ಈ ಆಸ್ತಿ ಮತ್ತು ಸಕಾಲ, ಪೊಲೀಸ್ ಸೆನ್ಸಸ್, ಶಿಕ್ಷಕರ ಚುನಾವಣೆ ಹಾಗೂ ಮಾಹಿತಿ ಹಕ್ಕು ಈ ಎಲ್ಲ ಕೆಲಸಗಳನ್ನು ಕರ್ತವ್ಯ ನಿರ್ವಹಿಸುವ ಎಂಟು ಗಂಟೆಗಳ ನಿರ್ವಹಣೆ ಮಾಡಬೇಕು.
ಪ್ರತಿ ದಿನ 25ಮನೆಗಳಿಗೆ ಭೇಟಿ ಮತ್ತು 25ಮನೆಗಳಿಗೆ ಸರ್ವೆ ಮಾಡಬೇಕು, ಚುನಾವಣೆ ಸಂಬಂಧಿಸಿದ ವಿಷಯದಲ್ಲಿ ಗಮನಹರಿಸಬೇಕು ಕಂದಾಯ ವಸೂಲಾತಿ ಯಾಗಬೇಕು ಇಷ್ಟೆಲ್ಲ ಕಾರ್ಯ ಮಾಡಲು ಸಮಯ ಮತ್ತು ಸಿಬ್ಬಂದಿಗಳ ಕೊರತೆ ಇದೆ.
ಬಿಬಿಎಂಪಿ ಮೇಲಾಧಿಕಾರಿಗಳಿಗೆ ಇವೆಲ್ಲ ಸಮಸ್ಯೆಗಳ ಮಾಹಿತಿ ಇದ್ದರೂ ವಿನಾಕಾರಣ ಕಂದಾಯ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳ ಮೇಲೆ ಒತ್ತಡ ಹಾಕುತ್ತಿದ್ದಾರೆ. ಮನುಷ್ಯ ಪ್ರತಿನಿತ್ಯ ಎಷ್ಟು ಗಂಟೆ ಕೆಲಸ ಮಾಡಬಹುದು, ಅತಿಯಾದ ಕೆಲಸ ಮಾನಸಿಕ ಒತ್ತಡದಿಂದ ಕಂದಾಯ ಇಲಾಖೆ ಕಾರ್ಯನಿರ್ವಹಿಸುವ ಅಧಿಕಾರಿ, ಸಿಬ್ಬಂದಿಗಳು ಮಾನಸಿಕವಾಗಿ ನೊಂದು ಹೋಗಿದ್ದಾರೆ ' ಎಂದು ಹೆಸರು ಹೇಳಿಲಿಚ್ಚಿಸದ ಕಂದಾಯಾಕಾರಿಗಳು
ಈ ಸಂಜೆ’ ಯೊಂದಿಗೆ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಸಮಯದ ಕಡೆ ಗಮನಹರಿಸದೇ ಕೆಲಸ ಮಾಡುತ್ತಿರುವುದರಿಂದ ಎಲ್ಲರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಿದೆ. ಕಂದಾಯ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶೇ. 90 ನೌಕರರಿಗೆ ಸಕ್ಕರೆ ಖಾಯಿಲೆ, ಬಿ.ಪಿಯಂತಹ ಗಂಭೀರ ಖಾಯಿಲೆಗಳಿಗೆ ತುತ್ತಾಗಿದ್ದಾರೆ. ಆದರೂ ಕೆಲಸದ ಹೊರೆ ತಪ್ಪಿಲ್ಲ. ನಮ್ಮ ಕಷ್ಟ ಹೇಳಿಕೊಂಡರೂ ಮೇಲಾಧಿಕಾರಿಗಳು ನಮ್ಮ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ.
ಇದೇ ಧೋರಣೆ ಮುಂದುವರೆದರೆ ನಾವು ಕೆಲಸ ಮಾಡುವುದನ್ನು ಬಿಟ್ಟು ಅನಿವಾರ್ಯವಾಗಿ ಪ್ರತಿಭಟನೆಯ ಹಾದಿ ಹಿಡಿಯಬೇಕಾಗುತ್ತದೆ ಎಂದು ಕೆಲವರು ಎಚ್ಚರಿಸಿದ್ದಾರೆ.