Wednesday, February 28, 2024
Homeರಾಜ್ಯಕುತೂಹಲ ಮೂಡಿಸಿದೆ ರಾಜಣ್ಣ-ಪರಂ ಉಪಹಾರ ಕೂಟ

ಕುತೂಹಲ ಮೂಡಿಸಿದೆ ರಾಜಣ್ಣ-ಪರಂ ಉಪಹಾರ ಕೂಟ

ತುಮಕೂರು,ನ.23- ರಾಜ್ಯ ಸರ್ಕಾರದಲ್ಲಿ ಪ್ರಭಾವಿಗಳಾಗಿರುವ ಇಬ್ಬರು ಸಚಿವರು ಇಂದು ಪರಸ್ಪರ ಭೇಟಿಯಾಗಿ ಉಪಹಾರ ಕೂಟ ನಡೆಸಿದ್ದಾರೆ. ಗೃಹ ಸಚಿವ ಡಾ.ಜಿ.ಪರಮೇಶ್ವರ್, ಸಹಕಾರ ಸಚಿವ ಕೆ.ಎನ್.ರಾಜಣ್ಣ ಇಂದು ಬೆಳಗ್ಗೆ ಭೇಟಿಯಾಗಿ ಚರ್ಚೆ ನಡೆಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಈ ಮೊದಲು ಪರಮೇಶ್ವರ್ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಎಚ್.ಸಿ.ಮಹದೇವಪ್ಪ, ಸತೀಶ್ ಜಾರಕಿಹೊಳಿ ಅವರ ಜೊತೆ ಭೋಜನಕೂಟ ನಡೆಸಿದ್ದು ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು. ರಾಜಕಾರಣದಲ್ಲಿ ಇದ್ದಕ್ಕಿದ್ದ ಹಾಗೆ ಸಿದ್ದರಾಮಯ್ಯನವರ ಗುಂಪಿಗೆ ಸ್ಥಳಾಂತರಗೊಂಡಿರುವ ಪರಮೇಶ್ವರ್ ಉಪಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಯಾಗಿದ್ದಾರೆ. ರಾಜಣ್ಣ ಜಾತಿ ಆಧಾರಿತವಾಗಿ ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಗೆ ಪದೇ ಪದೇ ಒತ್ತಾಯಿಸುತ್ತಿದ್ದಾರೆ.

ಡಿ.ಕೆ.ಶಿವಕುಮಾರ್ ಅವರು ತಮ್ಮನ್ನು ಹೊರತುಪಡಿಸಿ ಬೇರೆಯವರನ್ನು ಉಪಮುಖ್ಯಮಂತ್ರಿ ಮಾಡಬಾರದೆಂದು ಹೈಕಮಾಂಡ್ ಮಟ್ಟದಲ್ಲಿ ಪಟ್ಟು ಹಿಡಿದಿದ್ದಾರೆ. ಅಲ್ಲದೆ ಡಿ.ಕೆ.ಶಿವಕುಮಾರ್‍ರವರ ಪ್ರಭಾವ ತಗ್ಗಿಸಲು ಸಿದ್ದರಾಮಯ್ಯನವರ ಬಣ ನಾನಾ ರೀತಿಯ ರಣತಂತ್ರಗಳನ್ನು ರೂಪಿಸುತ್ತಿದೆ.

ಪರಮೇಶ್ವರ್ ಮತ್ತು ರಾಜಣ್ಣ ಈ ಮೊದಲು ವಿಧಾನಪರಿಷತ್ ಸದಸ್ಯರ ನೇಮಕಾತಿ ವೇಳೆ ಬಹಿರಂಗ ಅಸಮಾಧಾನ ಹೊರಹಾಕಿದ್ದರು. ಅದೆಲ್ಲವನ್ನು ದಾಟಿ ಡಿ.ಕೆ.ಶಿವಕುಮಾರ್ ತಮ್ಮ ಆಪ್ತರನ್ನು ಪರಿಶಿಷ್ಟ ಜಾತಿ ಕೋಟಾದಡಿ ವಿಧಾನಪರಿಷತ್‍ಗೆ ಆಯ್ಕೆ ಮಾಡಿದ್ದರು. ಅದರ ನಂತರ ಪರಮೇಶ್ವರ್ ಮತ್ತು ತಂಡ ಡಿ.ಕೆ.ಶಿವಕುಮಾರ್ ವಿರುದ್ಧ ಒಳಗೊಳಗೆ ಶೀತಲ ಸಮರ ನಡೆಸುತ್ತಿದೆ. ಇದಕ್ಕೆ ಅನುಗುಣವಾಗಿ ಇತ್ತೀಚೆಗೆ ಶುರುವಾಗಿರುವ ನಿಗಮ ಮಂಡಳಿಗಳ ನೇಮಕಾತಿಯಲ್ಲಿ ಕೆಲವರ ಪಾರುಪತ್ಯ ನಡೆಯುತ್ತಿದೆ ಎಂಬ ಆರೋಪಗಳಿವೆ.

ಜಾತಿಗಣತಿ ಸಮೀಕ್ಷೆಯನ್ನು ಮನೆಯಲ್ಲಿ ಕುಳಿತು ತಯಾರಿಸಿದ್ದಾರೆ : ಆರ್.ಅಶೋಕ್

ಅನ್ಯ ಪಕ್ಷಗಳಿಂದ ಪ್ರಮುಖ ನಾಯಕರನ್ನು ಪಕ್ಷಕ್ಕೆ ಕರೆತರಲು ಏಕಪಕ್ಷೀಯವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂಬ ಆಕ್ಷೇಪಗಳಿವೆ. ತುಮಕೂರು ಜಿಲ್ಲೆಯ ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕ ಗೌರಿಶಂಕರ್ ಅವರನ್ನು ಕಾಂಗ್ರೆಸ್‍ಗೆ ಕರೆತರಲಾಗಿತ್ತು. ಪರಮೇಶ್ವರ್ ಮತ್ತು ಕೆ.ಎನ್.ರಾಜಣ್ಣ ಅವರಿಲ್ಲದೆ ಕೆಪಿಸಿಸಿ ಕಚೇರಿಯಲ್ಲಿ ಗೌರಿಶಂಕರ್ ಕಾಂಗ್ರೆಸ್ ಸೇರಿದರು. ಕೆ.ಎನ್.ರಾಜಣ್ಣ ಈ ಕುರಿತಂತೆ ಬಹಿರಂಗವಾಗಿ ಅಸಮಾಧಾನ ಹೊರಹಾಕಿದರು.

ಮೂಲಗಳ ಪ್ರಕಾರ ಗೌರಿಶಂಕರ್ ಸೇರ್ಪಡೆಗೆ ಪರಮೇಶ್ವರ್ ಬೆಂಬಲವಿದೆ ಎನ್ನಲಾಗುತ್ತಿದೆ. ಸಮಾಧಾನಗೊಂಡಿರುವ ರಾಜಣ್ಣ ಅವರನ್ನು ಸಮಾಧಾನಪಡಿಸಲು ಪರಮೇಶ್ವರ್ ಉಪಹಾರಕೂಟ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.

ಆದರೂ ತೆರೆಮರೆಯ ವದಂತಿಗಳ ಪ್ರಕಾರ ಬೆಳಗಾವಿ ರಾಜಕಾರಣದಲ್ಲಿ ಡಿ.ಕೆ.ಶಿವಕುಮಾರ್ ಹಸ್ತಕ್ಷೇಪ ಮಾಡಿದಂತೆ ತುಮಕೂರು ಜಿಲ್ಲಾ ರಾಜಾಕರಣದಲ್ಲೂ ಹಸ್ತಕ್ಷೇಪಗಳಾಗುತ್ತಿವೆ. ಅದಕ್ಕೆ ಕಡಿವಾಣ ಹಾಕಲು ಪರಮೇಶ್ವರ್ ಮತ್ತು ರಾಜಣ್ಣ ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

RELATED ARTICLES

Latest News