Friday, November 22, 2024
Homeಕ್ರೀಡಾ ಸುದ್ದಿ | Sportsಭಾರತ ಕ್ರಿಕೆಟ್ ತಂಡದ ಮುಖ್ಯ ತರಬೇತುದಾರರಾಗಿ ರಾಹುಲ್ ದ್ರಾವಿಡ್ ಮುಂದುವರಿಕೆ..?

ಭಾರತ ಕ್ರಿಕೆಟ್ ತಂಡದ ಮುಖ್ಯ ತರಬೇತುದಾರರಾಗಿ ರಾಹುಲ್ ದ್ರಾವಿಡ್ ಮುಂದುವರಿಕೆ..?

ಮುಂಬೈ,ನ.29- ವಿಶ್ವಕಪ್ ಮಹಾಸಮರದ ಫೈನಲ್ ಪಂದ್ಯದಲ್ಲಿ ಭಾರತ ಆಸ್ಟ್ರೇಲಿಯಾ ವಿರುದ್ಧ ಪರಾಭವಗೊಂಡರೂ ಟೀಂ ಇಂಡಿಯಾದ ಯಶಸ್ವಿ ರೂವಾರಿ ಕನ್ನಡಿಗ ರಾಹುಲ್ ದ್ರಾವಿಡ್ ಅವರನ್ನೇ ಭಾರತ ಕ್ರಿಕೆಟ್ ತಂಡದ ಮುಖ್ಯ ತರಬೇತುದಾರರನ್ನಾಗಿ ಮುಂದುವರೆಸಲು ಬಿಸಿಸಿಐ ಒಲವು ತೋರಿದೆ.

ಸದ್ಯ ರಾಹುಲ್ ದ್ರಾವಿಡ್ ಅವರನ್ನು ಭಾರತ ಕ್ರಿಕೆಟ್ ತಂಡದ ಮುಖ್ಯ ತರಬೇತುದಾರರನ್ನಾಗಿ ಮುಂದುವರೆಸುವ ಬಗ್ಗೆ ಯಾವುದೇ ತಕರಾರುಗಳು ಇಲ್ಲ. ಹೀಗಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಇನ್ನು ಎರಡು ವರ್ಷಗಳ ಕಾಲ ಗೋಡೆ ಖ್ಯಾತಿಯ ದ್ರಾವಿಡ್ ಅವರನ್ನೇ ಮುಂದುವರೆಸಲು ಚಿಂತನೆ ನಡೆಸಿದೆ.

ಸದ್ಯದಲ್ಲೇ ಭಾರತ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೈಗೊಳ್ಳಲಿದ್ದು, ದ್ರಾವಿಡ್ ಮುಖ್ಯ ತರಬೇತುದಾರರ ಸ್ಥಾನದಲ್ಲೇ ಮುಂದುವರೆಯಬೇಕೆಂಬುದು ಬಿಸಿಸಿಐ ಆಡಳಿತ ಮಂಡಳಿಯ ತೀರ್ಮಾನವಾಗಿದೆ. ಇದಕ್ಕೆ ಬಹುತೇಕ ಆಟಗಾರರ ಸಮ್ಮತಿ ಇದೆ ಎನ್ನಲಾಗಿದೆ.

ಉತ್ತರಾಕಾಶಿ ಸುರಂಗ ದಿಂದ ಬದುಕಿಬಂದ ಕಾರ್ಮಿಕರ ಜೊತೆ ಪ್ರಧಾನಿ ಮೋದಿ ಮಾತುಕತೆ

ಆಟಗಾರರಿಗೆ ದ್ರಾವಿಡ್ ನೀಡುವ ಸಲಹೆಗಳು, ಹೊಂದಾಣಿಕೆ ಮನೋಭಾವ, ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು, ಸಂದರ್ಭಕ್ಕೆ ತಕ್ಕಂತೆ ಬದಲಾವಣೆ ಹೀಗೆ ತಂಡದಲ್ಲಿ ಹಲವು ಹೊಸ ಪ್ರಯೋಗಗಳನ್ನು ನಡೆಸಿದ್ದರಿಂದ ಭಾರತ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಹಾಗೂ ಏಕದಿನ ವಿಶ್ವಕಪ್ ಪಂದ್ಯದಲ್ಲಿ ರನ್ನರ್ ಅಪ್ ಆಗಿ ಹೊರಹೊಮ್ಮಿದೆ.

ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತರೂ ಟೀಂ ಇಂಡಿಯಾದ ಪ್ರದರ್ಶನ ಸರಣಿಯುದ್ದಕ್ಕೂ ಅತ್ಯುತ್ತಮವಾಗೇ ಇತ್ತು. ಲೀಗ್ ಹಂತದಿಂದ ಕೊನೆಯ ಪಂದ್ಯದವರೆಗೂ ಭಾರತ ಬೌಲಿಂಗ್ ಮತ್ತು ಬ್ಯಾಂಟಿಂಗ್‍ನಲ್ಲಿ ವಿಶ್ವದ ಯಾವುದೇ ತಂಡಕ್ಕೆ ಕಡಿಮೆ ಇಲ್ಲ ಎಂಬಂತೆ ಪ್ರದರ್ಶನ ನೀಡಿತ್ತು.

ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗದಲ್ಲಿ ಭಾರತ ಇಷ್ಟು ಯಶಸ್ವಿಯಾಗಲು ಟೀಂ ಇಂಡಿಯಾದ ಮುಖ್ಯ ತರಬೇತುದಾರ ರಾಹುಲ್ ದ್ರಾವಿಡ್ ಅವರ ಮಾರ್ಗದರ್ಶನವೇ ಪ್ರಮುಖ ಕಾರಣ ಎಂಬದನ್ನು ಬಿಸಿಸಿಐ ಬಲವಾಗಿ ನಂಬಿದೆ.

ಈಗಲೂ ಬಹುತೇಕ ಕ್ರಿಕೆಟ್ ಪ್ರೇಮಿಗಳು ಮುಖ್ಯ ತರಬೇತುದಾರರಾಗಿ ರಾಹುಲ್ ದ್ರಾವಿಡ್ ಅವರೇ ಮುಂದುವರೆಯಬೇಕೆಂದು ಬಯಸುತ್ತಾರೆ. ಹೀಗಾಗಿ ಅವರು ಮಾಡಿಕೊಂಡಿರುವ ಒಪ್ಪಂದವನ್ನು ಇನ್ನು ಎರಡು ವರ್ಷಗಳ ಕಾಲ ಮುಂದುವರೆಸಲು ಬಿಸಿಸಿಐ ಒಲವು ತೋರಿದೆ ಎಂದು ನಂಬಲಾರ್ಹ ವಿಶ್ವಾಸನೀಯ ಮೂಲಗಳು ತಿಳಿಸಿವೆ. ಅಂತಿಮವಾಗಿ ದ್ರಾವಿಡ್ ಯಾವ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂಬುದರ ಮೇಲೆ ಇದು ಅವಲಂಬಿತವಾಗಿದೆ.

RELATED ARTICLES

Latest News