Thursday, November 21, 2024
Homeರಾಜ್ಯಬೆಂಗಳೂರು ಬಂದ್‌ಗೆ ಉತ್ತಮ ಪ್ರತಿಕ್ರಿಯೆ

ಬೆಂಗಳೂರು ಬಂದ್‌ಗೆ ಉತ್ತಮ ಪ್ರತಿಕ್ರಿಯೆ

ಬೆಂಗಳೂರು, ಸೆ.26- ನಾಡಿನ ಜೀವನದಿ ಕಾವೇರಿಗಾಗಿ ಕಳೆದ ಒಂದು ತಿಂಗಳಿನಿಂದ ನಡೆಯುತ್ತಿರುವ ಪ್ರತಿಭಟನೆಗಳು ತೀವ್ರ ಸ್ವರೂಪ ಪಡೆದುಕೊಂಡಿದ್ದು, ಇಂದು ಕರೆ ನೀಡಲಾಗಿದ್ದ ಬೆಂಗಳೂರು ಬಂದ್ ಸಂಪೂರ್ಣ ಯಶಸ್ವಿಯಾಗಿದ್ದು, ಜನಜೀವನ ಅಸ್ತವ್ಯಸ್ಥಗೊಂಡಿದೆ. ಸುಮಾರು 150 ಕ್ಕೂ ಹೆಚ್ಚು ಸಂಘಟನೆಗಳು ಕರೆ ನೀಡಿದ್ದ ಬೆಂಗಳೂರು ಬಂದ್‍ಗೆ ಸಾರ್ವಜನಿಕರು ಸ್ವಯಂಪ್ರೇರಿತರಾಗಿ ಭಾರೀ ಬೆಂಬಲ ನೀಡಿದ್ದಾರೆ.

ನಗರದ ಪ್ರಮುಖ ರಸ್ತೆಗಳ ಅಂಗಡಿಗಳು ಮುಚ್ಚಲ್ಪಟ್ಟಿದ್ದವು. ಬಿಎಂಟಿಸಿ, ಕೆಎಸ್‍ಆರ್‍ಟಿಸಿ, ಖಾಸಗಿ ಬಸ್‍ಗಳ ಸಂಚಾರ ವಿರಳವಾಗಿತ್ತು. ಆಟೋ, ಕ್ಯಾಬ್‍ಗಳು ಬೆರಳೆಣಿಕೆಯಷ್ಟು ಓಡಾಡುತ್ತಿದ್ದವು. ಕೆಲವರು ಇದರ ದುರುಪಯೋಗ ಪಡೆದುಕೊಂಡು ಪ್ರಯಾಣಿಕರನ್ನು ಸುಲಿಗೆ ಮಾಡುವ ಯತ್ನವನ್ನೂ ನಡೆಸಿದರು.ಪೊಲೀಸರು ಮುಂಜಾಗ್ರತವಾಗಿ ನಿಷೇಧಾಜ್ಞೆ ಜಾರಿಗೊಳಿಸಿದ್ದು, ಎಲ್ಲೆಡೆ ವ್ಯಾಪಕ ಬಿಗಿ ಬಂದೋಬಸ್ತ್ ಆಯೋಜಿಸಿತ್ತು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಖಾಕಿ ಸರ್ಪಗಾವಲು ಹಾಕಲಾಗಿತ್ತು.

ಬಂದ್‍ಗೆ ಕರೆ ನೀಡಿದ್ದ ಸಂಘಟನೆಗಳ ಪ್ರಮುಖ ನಾಯಕ ಕುರುಬೂರು ಶಾಂತಕುಮಾರ್, ಇಂದು ಬೆಳಿಗ್ಗೆ ಮೈಸೂರು ಬ್ಯಾಂಕ್ ರಸ್ತೆಯ ಮಧ್ಯಭಾಗದಲ್ಲಿ ರೈತರೊಂದಿಗೆ ಕುಳಿತು ಉಪಹಾರ ಸೇವಿಸಲು ಮುಂದಾದರು. ಅವರನ್ನು ಅಲ್ಲಿಂದ ಫ್ರೀಡಂ ಪಾರ್ಕ್‍ಗೆ ಪೊಲೀಸರು ಕರೆತಂದರು. ಅಲ್ಲಿ ರೈತರು ಹಾಗೂ ವಿವಿಧ ಸಂಘಟನೆಗಳು ಸಮಾವೇಶಗೊಂಡಿದ್ದವು. ಅಮ್ ಆದ್ಮಿ ಪಕ್ಷದ ಕಾರ್ಯಕರ್ತರು ಅಲ್ಲಲ್ಲಿ ಪ್ರತಿಭಟನೆಯಲ್ಲಿ ತೊಡಗಿಸಿಕೊಂಡರು.
ಫ್ರೀಡಂಪಾರ್ಕ್‍ನಲ್ಲಿ ರೈತರು ಖಾಲಿ ಬಿಂದಿಗೆಗಳನ್ನು ಹಿಡಿದು ಅರೆಬೆತ್ತಲೆ ಪ್ರತಿಭಟನೆ ನಡೆಸಿದ್ದಾರೆ.

ಕಾವೇರಿ ವಿಚಾರದಲ್ಲಿ ರಾಜ್ಯಸರ್ಕಾರ ವಿಫಲವಾಗಿದೆ : ಮುಖ್ಯಮಂತ್ರಿ ಚಂದ್ರು

ಈ ಸಂದರ್ಭದಲ್ಲಿ ಹೂವುಗಳನ್ನು ಹಂಚಿರುವ ಕಾರ್ಯಕರ್ತರು ಹೂವು ಕೊಡುತ್ತೇವೆ, ನೀರು ಬಿಡುವುದಿಲ್ಲ ಎಂದು ಘೋಷಿಸಿದ್ದಾರೆ. ಪ್ರತಿಭಟನೆಯ ಸಂದರ್ಭದಲ್ಲಿ ಕಾರ್ಯಕರ್ತರೊಬ್ಬರು ಅಸ್ವಸ್ಥರಾಗಿ ಕುಸಿದುಬಿದ್ದರು. ತಕ್ಷಣ ಅವರನ್ನು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ.

ಟೌನ್‍ಹಾಲ್‍ನಿಂದ ಫ್ರೀಡಂ ಪಾರ್ಕ್‍ವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳು, ಓಲಾ, ಊಬರ್, ಹೋಟೆಲ್ ಮಾಲಿಕರ ಸಂಘಟನೆಗಳು, ಆಟೋ ಚಾಲಕರ ಸಂಘಟನೆಗಳು, ಬೀದಿ ಬದಿ ವ್ಯಾಪಾರಿಗಳು ಸೇರಿದಂತೆ ನೂರಾರು ಸಂಘಟನೆಗಳು ಬಂದ್‍ಗೆ ಬೆಂಬಲ ನೀಡಿದ್ದವು. ಹೀಗಾಗಿ ಬಂದ್ ಯಶಸ್ಸು ಕಂಡಿದೆ.

ನಗರದೆಲ್ಲೆಡೆ ಅಂಗಡಿಗಳು ಹಾಗೂ ವ್ಯಾಪಾರೋದ್ಯಮಗಳು ಮುಚ್ಚಲ್ಪಟ್ಟು ವಾತಾವರಣ ಬಿಕೋ ಎನ್ನುತ್ತಿತ್ತು. ಸಾರ್ವಜನಿಕರೇ ಸ್ವಯಂಪ್ರೇರಿತರಾಗಿ ಅಂಗಡಿಗಳನ್ನು ಮುಚ್ಚಿ ಬೆಂಬಲ ವ್ಯಕ್ತಪಡಿಸಿದರು. ಕೆಲವು ಪ್ರಮುಖ ಕೇಂದ್ರ ಸ್ಥಾನಗಳಲ್ಲಿ ಪ್ರತಿಭಟನೆಗಳು ನಡೆದಿರುವ ವರದಿಯಾಗಿವೆ.

ಶಾಲಾ-ಕಾಲೇಜುಗಳಿಗೆ ಮುಂಜಾಗ್ರತಾ ಕ್ರಮವಾಗಿ ರಜೆ ಘೋಷಿಸಲಾಗಿತ್ತು. ಕೆಲವು ಖಾಸಗಿ ಶಾಲೆಗಳು ತರಗತಿಗಳನ್ನು ನಡೆಸಿದರಾದರೂ, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿತ್ತು. ಕೆಲವು ವಿಶ್ವವಿದ್ಯಾಲಯಗಳ ಪರೀಕ್ಷೆಗಳನ್ನು ಮುಂದೂಡಿವೆ.

ಕಳೆದ ಮೂರು ದಿನಗಳಿಂದಲೂ ಬಂದ್ ಬಗ್ಗೆ ವ್ಯಾಪಕ ಚರ್ಚೆಯಾದ ಹಿನ್ನೆಲೆಯಲ್ಲಿ ಸಾರ್ವಜನಿಕರು ಸಾಮಾನ್ಯವಾಗಿ ಪ್ರವಾಸ ಅಥವಾ ಓಡಾಟವನ್ನು ನಿಯಂತ್ರಿಸಿಕೊಂಡಿದ್ದರು. ಹೀಗಾಗಿ ಬೆಂಗಳೂರಿನ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಕೆಎಸ್‍ಆರ್‍ಟಿಸಿ, ಬಿಎಂಟಿಸಿ, ಶಾಂತಿನಗರ, ಕಲಾಸಿಪಾಳ್ಯ, ಯಶವಂತಪುರ ಸೇರಿದಂತೆ ಹಲವು ನಿಲ್ದಾಣಗಳಲ್ಲಿ ಬಸ್‍ಗಳು ಸಾಲುಗಟ್ಟಿ ನಿಂತಿದ್ದವು. ಬಂದ್‍ನ ನಡುವೆಯೂ ಅನಿವಾರ್ಯವಾಗಿ ಓಡಾಡಲೇಬೇಕಾದ ಪ್ರಯಾಣಿಕರು ರಸ್ತೆಯಲ್ಲಿ ಕಾದುನಿಂತು ಬಸವಳಿದಿದ್ದರು.

ಆಟೋ ಮತ್ತು ಕ್ಯಾಬ್‍ಗಳ ಪ್ರಯಾಣದರ ದುಪ್ಪಟ್ಟಾಗಿತ್ತು. ಹಾಲು, ಮೊಸರು, ಔಷ, ತರಕಾರಿಯಂತಹ ಅಗತ್ಯ ವಸ್ತುಗಳ ವಹಿವಾಟು ಎಂದಿನಂತೆ ನಡೆದಿತ್ತು. ಆಸ್ಪತ್ರೆಗಳು ಕಾರ್ಯನಿರ್ವಹಿಸಿದವು. ಬಂದ್ ಪ್ರಯುಕ್ತ ಪ್ರತಿಭಟನೆ ನಡೆಸಿದ ವಿವಿಧ ಸಂಘಟನೆಗಳು, ತಮಿಳುನಾಡು, ಕರ್ನಾಟಕದ ರಾಜ್ಯಸರ್ಕಾರಗಳು ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿವೆ.

ಫ್ರೀಡಂಪಾರ್ಕ್‍ನಲ್ಲಿ ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರ ಅಣಕು ತಿಥಿ ನಡೆಸಲಾಗಿದೆ. ರಾಜ್ಯಸರ್ಕಾರ ತಮಿಳುನಾಡಿಗೆ ಕಾವೇರಿ ನೀರು ಬಿಡುವ ಮೂಲಕ ನಾಡಿನ ಹಿತಾಸಕ್ತಿಯನ್ನು ಕಡೆಗಣಿಸಿದೆ ಎಂದು ಕಿಡಿಕಾರಿದ್ದಾರೆ. ರಾಜ್ಯದ ಸಂಸದರು, ಅಂತರಾಜ್ಯ ನದಿ ವಿವಾದಕ್ಕೆ ಸಂಬಂಧಪಟ್ಟಂತೆ ಸಂಸತ್‍ನಲ್ಲಿ ಬಾಯಿ ಬಿಡದೆ ಮೌನಕ್ಕೆ ಶರಣಾಗುವ ಮೂಲಕ ಹೇಡಿತನ ಪ್ರದರ್ಶಿಸಿದ್ದಾರೆ. ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡದೇ ಉದ್ದೇಶಪೂರ್ವಕವಾಗಿ ನುಣುಚಿಕೊಳ್ಳುತ್ತಿದೆ ಎಂಬ ಆರೋಪಗಳು ಕೇಳಿಬಂದವು.

ಇಂಡೋ ಪೆಸಿಫಿಕ್ ರಾಷ್ಟ್ರಗಳ ಸಮಗ್ರತೆಗೆ ಒತ್ತು : ಮನೋಜ್‍ ಪಾಂಡೆ

ಟೌನ್‍ಹಾಲ್, ಫ್ರೀಡಂಪಾರ್ಕ್ ಹಾಗೂ ಮೈಸೂರು ಬ್ಯಾಂಕ್ ಬಳಿ ಪ್ರತಿಭಟನೆಯಲ್ಲಿ ತೊಡಗಿದ್ದ ಸಂಘಟನೆಗಳ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು. ಸರ್ಕಾರ ತಾನು ಮಾಡಬೇಕಾದ ಜವಾಬ್ದಾರಿಯನ್ನು ಮರೆತು ಕನ್ನಡಪರ ಸಂಘಟನೆಗಳನ್ನು ಬಂಸುವ ಮೂಲಕ ನಾಡ ವಿರೋಧಿತನ ಅನುಸರಿಸುತ್ತಿದೆ ಎಂಬ ಆಕ್ರೋಶಗಳು ಕೇಳಿಬಂದವು.

ಬೆಂಗಳೂರು ಬಂದ್ ವಿಷಯವಾಗಿ ಕನ್ನಡ ಸಂಘಟನೆಗಳು ಹಾಗೂ ವಿವಿಧ ಸಂಘ ಸಂಸ್ಥೆಗಳ ನಡುವೆ ಭಿನ್ನ ಅಭಿಪ್ರಾಯಗಳು ವ್ಯಕ್ತವಾಗಿದ್ದವು. ಅದರ ಹೊರತಾಗಿಯೂ ಕಾವೇರಿ ವಿಷಯವಾಗಿ ಬೆಂಗಳೂರು ಜನ ಸ್ವಯಂಪ್ರೇರಿತರಾಗಿ ಬಂದ್‍ಗೆ ಬೆಂಬಲ ನೀಡಿದ್ದಾರೆ.

ಕುರುಬೂರು ಶಾಂತಕುಮಾರ್ ಮಾತನಾಡಿ, ರಾಜ್ಯಸರ್ಕಾರ ತಮಿಳುನಾಡಿನ ಏಜೆಂಟ್‍ನಂತೆ ವರ್ತಿಸುತ್ತಿದೆ. ನಿರಂತರವಾಗಿ ಕಾವೇರಿ ನೀರನ್ನು ಹರಿಸಲಾಗುತ್ತಿದೆ. ಅದನ್ನು ತಡೆಯುವಂತೆ ನಾವು ಪ್ರತಿಭಟನೆ ನಡೆಸುತ್ತಿದ್ದರೆ, ನಮ್ಮನ್ನು ಬಂಧಿಸಿ ಚಳುವಳಿಗೂ ಅಡ್ಡಿಪಡಿಸುತ್ತಿದೆ. ಬೆಂಗಳೂರಿನಲ್ಲಿ ಸಾವಿರಕ್ಕೂ ಹೆಚ್ಚು ಮುಖಂಡರನ್ನು ಬಂಧಿಸಿದ್ದಾರೆ. ಚಳುವಳಿಯನ್ನು ಹತ್ತಿಕ್ಕುವ ಯತ್ನ ನಡೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

RELATED ARTICLES

Latest News