ಬೆಂಗಳೂರು, ಸೆ.25- ಕಾವೇರಿ ನದಿ ನೀರಿನ ವಿಚಾರವಾಗಿ ವಿವಿಧ ಸಂಘಟನೆಗಳು ಕರೆ ನೀಡಿರುವ ಬೆಂಗಳೂರು ಬಂದ್ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಹಾಗೂ ಸಾರ್ವಜನಿಕ ಆಸ್ತಿಗಳಿಗೆ ಹಾನಿಯಾಗದಂತೆ ಎಚ್ಚರಿಕೆ ವಹಿಸಲು ಸಿಎಂ ಸಿದ್ದರಾಮಯ್ಯ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಇಂದು ಬೆಳಿಗ್ಗೆ ಪೊಲೀಸ್ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದ್ದಾರೆ. ಮುಖ್ಯಮಂತ್ರಿಯವರು ಬಂದ್‍ಗೆ ಸರ್ಕಾರ ಅಡ್ಡಿಪಡಿಸುವುದಿಲ್ಲ.
ಆದರೆ ಸಾರ್ವಜನಿಕ ಆಸ್ತಿ, ನೆಮ್ಮದಿಗೆ ಭಂಗ ಬರಬಾರದು. ಹೀಗಾಗಿ ಅಗತ್ಯ ಇರುವ ಕಡೆಗೆ ಸೂಕ್ತ ಬಂದೋಬಸ್ತ್ ಮಾಡುವಂತೆ ತಾಕೀತು ನೀಡಿದ್ದಾರೆ. ಇಂದು ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಗೃಹಸಚಿವ ಡಾ.ಜಿ.ಪರಮೇಶ್ವರ್, ಕಾವೇರಿ ವಿಷಯದಲ್ಲಿ ಸರ್ಕಾರ ಜನಪರವಾದ ನಿಲುವನ್ನು ಹೊಂದಿದೆ.
ನಾಳೆ ಬೆಂಗಳೂರು ಬಂದ್ : ಏನಿರುತ್ತೆ..? ಏನಿರಲ್ಲ..? ಇಲ್ಲಿದೆ ಮಾಹಿತಿ
ಹೀಗಾಗಿ ಬಂದ್ ಮಾಡಬೇಡಿ ಎಂದು ಮನವಿ ಮಾಡಿದೆ. ಅದರ ಹೊರತಾಗಿಯೂ ಕನ್ನಡ ಸಂಘಟನೆಗಳು ಬಂದ್ ಮಾಡುತ್ತಿವೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಸಾಕಷ್ಟು ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿದೆ. ಅಗತ್ಯವಿರುವ ಕಡೆ ವ್ಯಾಪಕ ಬಂದೋಬಸ್ತ್ ಆಯೋಜನೆ ಮಾಡಿದೆ ಎಂದರು.
ಬಂದ್ ಮಾಡುವವರು ಸಾರ್ವಜನಿಕ ಆಸ್ತಿಗಳಿಗೆ ತೊಂದರೆ ಮಾಡಬಾರದು, ಕಾನೂನನ್ನು ಕೈಗೆತ್ತಿಕೊಳ್ಳಬಾರದು, ಶಾಂತಿಯುತವಾಗಿ ಪ್ರತಿಭಟನೆ ಮಾಡಬೇಕು, ಇಲ್ಲವಾದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.