ಬೆಂಗಳೂರು, ಏ.7- ಬಿಎಂಟಿಸಿ ಚಾಲಕನ ಮೇಲೆ ಮಚ್ಚು ಬೀಸಿ ಹಲ್ಲೆ ಮಾಡಿ ಪರಾರಿಯಾಗಿದ್ದ ಇಬ್ಬರು ಆರೋಪಿಗಳಲ್ಲಿ ಒಬ್ಬನನ್ನು ಕುಮಾರಸ್ವಾಮಿ ಲೇಔಟ್ ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪರಾರಿಯಾಗಿರುವ ಮತ್ತೊಬ್ಬ ಆರೋಪಿಗಾಗಿ ಪೊಲೀಸರು ವ್ಯಾಪಕ ಶೋಧ ನಡೆಸುತ್ತಿದ್ದಾರೆ.
ಏ.4ರಂದು ಬಿಎಂಟಿಸಿ ಚಾಲಕ ನಾಗೇಂದ್ರ ಹಾಗೂ ನಿರ್ವಾಹಕ ಕರ್ತವ್ಯ ಮುಗಿಸಿ ಕುಮಾರಸ್ವಾಮಿ ಲೇಔಟ್ ನ 15ಇ ಬಸ್ ನಿಲ್ದಾಣದಲ್ಲಿ ಬಸ್ ನಿಲ್ಲಿಸಿ ಮಲಗಿದ್ದರು. ರಾತ್ರಿ 12.30ರ ಸಮಯದಲ್ಲಿ ನಾಲ್ಕು ಜನ ಅಪರಿಚಿತರು ಬಸ್ ನಿಲ್ದಾಣಕ್ಕೆ ಬಂದು ಕುಡಿತ ಮತ್ತಿನಲ್ಲಿ ಜೋರಾಗಿ ಕೂಗಾಡುತ್ತಿದ್ದರು. ಆಗ ಚಾಲಕ ನಾಗೇಂದ್ರ ಎಚ್ಚರಗೊಂಡು ಇಲ್ಲಿಗೆ ಏಕೆ ಬಂದು ಕೂಗಾಡುತ್ತೀರಿ ಎಂದು ಕೇಳಿದ್ದಾರೆ.
ಆಗ ಆರೋಪಿಗಳು ನಾವು ಏನಾದರೂ ಮಾಡುತ್ತೇವೆ ನಿನಗೇಕೆ? ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಆಗ ಬಸ್‍ನಿಂದ ಕೆಳಗಡೆ ಇಳಿದುಬಂದ ನಾಗೇಂದ್ರ ನನಗ್ಯಾಕೆ ಈ ರೀತಿ ಬೈಯುತ್ತೀರಿ ಎಂದು ಕೇಳಿದಾಗ ಜಗಳ ಉಂಟಾಗಿದೆ. ಜಗಳದ ಹಂತದಲ್ಲಿ ಆರೋಪಿಯೊಬ್ಬ ಕೈಯಿಂದ ನಾಗೇಂದ್ರ ಅವರ ಮುಖಕ್ಕೆ ಗುದ್ದಿ, ಮಚ್ಚು ಬೀಸಿದ್ದಾನೆ. ಆಗ ಅವರ ಕೈನ ಎರಡು ಬೆಳರುಗಳಿಗೆ ಪೆಟ್ಟು ಬಿದ್ದಿದೆ. ತಕ್ಷಣ ನಿರ್ವಾಹಕ ಸ್ಥಳಕ್ಕೆ ಬಂದಾಗ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದಾರೆ.
ಹಲ್ಲೆಗೊಳಗಾಗ ನಾಗೇಂದ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರರಕಣ ದಾಖಲಿಸಿಕೊಂಡ ಪೊಲೀಸರು ಪರಿಶೀಲಿಸಿ ಒಬ್ಬನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.