ಬೆಂಗಳೂರು, ಡಿ. 2- ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ ಕಳುಹಿಸಿದ ಇ-ಮೇಲ್‍ನ ಐಪಿ ಅಡ್ರೆಸ್ ವಿದೇಶಿ ಮೂಲದ್ದಾಗಿರುವ ಅನುಮಾನಗಳಿದ್ದು, ಈ ಬಗ್ಗೆ ಗಂಭೀರ ತನಿಖೆ ನಡೆಸಲಾಗುತ್ತಿದೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು
ಪ್ರತ್ಯೇಕ ಕಾಯ್ದೆ ರೂಪಿಸುವುದಾಗಿ ಹೇಳಿದ್ದಾರೆ. ಶಾಲೆಗಳಿಗೆ ಬೆದರಿಕೆ ಕರೆ ಬಂದಿರುವ ಮೇಲ್ ಐಡಿಯ ಐಪಿ ವಿಳಾಸ ಭಾರತ ದೇಶದಲ್ಲಿಲ್ಲ. ಹೀಗಾಗಿ ಅದರ ಮೂಲ ಮಾಹಿತಿಗಳನ್ನು ನೀಡಲು ಸಂಬಂಧಿಸಿದ ಸಂಸ್ಥೆಗೆ ಪತ್ರ ಬರೆಯಲಾಗಿದೆ. ಅಲ್ಲಿಂದ ಉತ್ತರ ಬಂದ ಬಳಿಕ ಮುಂದಿನ ಕ್ರಮ ಜರುಗಿಸಲಾಗುವುದು ಎಂದಿದ್ದಾರೆ.
ಶಾಲೆಗಳಿಗೆ ಬಾಂಬ್ ಬೆದರಿಕೆ ಹಾಕಿರುವ ವಿದ್ಯಮಾನ ಹೊಸದಲ್ಲ. ಈ ಮೊದಲು ಮಲೇಶಿಯಾ, ಸಿಂಗಾಪುರ್, ಜರ್ಮನಿ ಸೇರಿದಂತೆ ಹಲವಾರು ವಿದೇಶಿ ಶಾಲೆಗಳಿಗೂ ಇದೇ ರೀತಿಯ ಮೇಲ್ ಐಡಿಯಿಂದ ಬೆದರಿಕೆ ಹಾಕಲಾಗಿದೆ. ಹಾಗೆಂದು ಅದನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ಸರ್ಕಾರ ಗಂಭೀರ ಕ್ರಮಗಳನ್ನು ಕೈಗೊಂಡಿದೆ.
ನಕಲಿ ಬೆದರಿಕೆ ಹಾಕುವವರ ಮೂಲವನ್ನು ಪತ್ತೆ ಹಚ್ಚಲು ಪ್ರಯತ್ನಿಸಲಾಗುತ್ತಿದೆ. ಜೊತೆಯಲ್ಲೇ ಶಾಲೆಗಳಿಗೆ ಆಯಾ ಪೊಲೀಸ್ ಠಾಣೆಯ ಅಧಿಕಾರಿಗಳು ಕಾಲಕಾಲಕ್ಕೆ ಭೇಟಿ ನೀಡಿ ಮುಂಜಾಗ್ರತೆ ವಹಿಸುವಂತೆ ಸೂಚನೆ ನೀಡಲಾಗಿದೆ. ಈಗಾಗಲೇ ಪೊಲೀಸರು ಇಂತಹ ಕ್ರಮಗಳನ್ನು ಆರಂಭಿಸಿದ್ದಾರೆ ಎಂದು ಹೇಳಿದರು.
ನಕ್ಸಲರು ಹುದುಗಿಸಿಟ್ಟಿದ IED ಸ್ಪೋಟ, ಇಬ್ಬರು CRPF ಯೋಧರು ಗಂಭೀರ
ಕೇಂದ್ರ ಸರ್ಕಾರವೂ ನಮ್ಮ ಸಂಪರ್ಕದಲ್ಲಿದೆ. ರಾಜ್ಯ ಪೊಲೀಸ್ ಮಹಾನಿರ್ದೇಶಕರ ಜೊತೆ ಚರ್ಚೆ ನಡೆಸಿದೆ. ಆರಂಭದಲ್ಲಿ 15 ಶಾಲೆಗಳಿಗೆ ಬೆದರಿಕೆ ಬಂದಿತ್ತು. ನಂತರ ಅದು 45 ಶಾಲೆಗಳಿಗೆ ಎಂದು ಖಚಿತವಾಗಿದೆ. ಎಲ್ಲಾ ಶಾಲೆಗಳಲ್ಲೂ ತಪಾಸಣೆ ನಡೆಸಿ ಯಾವುದೇ ಸ್ಪೋಟಕಗಳಿಲ್ಲ ಎಂದು ದೃಢಪಡಿಸಲಾಗಿದೆ. ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಮುಂದುವರೆದಿದೆ ಎಂದರು.
ಆಧುನಿಕತೆಯ ಪರಿಸ್ಥಿತಿಯಲ್ಲಿ ಪ್ರತಿದಿನ ಈ ರೀತಿಯ ಸವಾಲುಗಳು ಉದ್ಭವಿಸುತ್ತಲೇ ಇರುತ್ತವೆ. ಅವುಗಳನ್ನು ನಿಭಾಯಿಸಲೇಬೇಕು. ಶಾಲೆಗಳಿಗೆ ಬೆದರಿಕೆ ಕರೆ ಹಾಕಿದ ಪ್ರಕರಣದ ತನಿಖೆಗೆ ವಿಶೇಷ ತಂಡ ರಚನೆ ಮಾಡುವ ಅಗತ್ಯವಿಲ್ಲ. ನಮ್ಮ ಸಿಐಡಿ ವಿಭಾಗದಲ್ಲಿ ನುರಿತ ಅಧಿಕಾರಿಗಳ ಸಿಬ್ಬಂದಿಗಳಿದ್ದು, ಸಮರ್ಪಕ ತನಿಖೆ ಮಾಡುತ್ತಾರೆ. ಒಂದು ವೇಳೆ ಆರೋಪಿ ವಿದೇಶದಲ್ಲಿದ್ದು, ಆತನನ್ನು ಬಂಧಿಸಿ ಕರೆತರಲು ಅನುಮತಿಸಿದರೆ ಆ ಕಾರ್ಯಾಚರಣೆಗಾಗಿ ವಿಶೇಷ ತಂಡ ರಚಿಸಲಾಗುವುದು ಎಂದು ತಿಳಿಸಿದರು.
ಬಲವಂತದ ಮತಾಂತರ : 42 ಜನರ ವಿರುದ್ಧ ಎಫ್‍ಐಆರ್, 9 ಮಂದಿ ಬಂಧನ
ಈ ಮೊದಲು ಮೊರಾಕೊದಿಂದ ಕೊಲೆ ಆರೋಪಿಯನ್ನು ಬಂಧಿಸಿ ಕರೆತರಲಾಗಿದೆ. ದುಬೈನಲ್ಲಿರುವ ಕುಖ್ಯಾತನ ಬಂಧನಕ್ಕೂ ತಂಡ ರಚಿಸುವ ಸಾಧ್ಯತೆಯಿದೆ ಎಂದು ಹೇಳಿದರು. ಭ್ರೂಣಲಿಂಗಪತ್ತೆ ಜೊತೆಗೆ ನವಜಾತ ಶಿಶುಗಳ ಮಾರಾಟ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲಾಗಿದೆ. ಈ ಎರಡೂ ರೀತಿಯ ಕೃತ್ಯಗಳು ರಾಜ್ಯಾದ್ಯಂತ ನಡೆದಿರುವ ಸಾಧ್ಯತೆಗಳಿದ್ದು, ಅದನ್ನು ಸಿಐಡಿ ಪೊಲೀಸರು ಪರಿಶೀಲನೆ ನಡೆಸಲಿದ್ದಾರೆ ಎಂದರು.