ಬೆಂಗಳೂರು,ಫೆ.23- ಪ್ರತಿಭಟನೆಗಳಿಗೆಂದೇ ಮೀಸಲಾಗಿರುವ ಸ್ವಾತಂತ್ರ್ಯ ಉದ್ಯಾನವನವನ್ನು ಪ್ರೇಕ್ಷಣೀಯ ಸ್ಥಳವನ್ನಾಗಿ ಪರಿವರ್ತಿಸಲು ಬಿಬಿಎಂಪಿ ಪ್ಲಾನ್ ಮಾಡಿದೆ. ಪ್ರತಿನಿತ್ಯ ಪ್ರತಿಭಟನೆ ನಡೆಸಲಾಗುತ್ತಿರುವ ಉದ್ಯಾನವನವನ್ನು ಪ್ಷೇಕ್ಷಣೀಯ ಸ್ಥಳವನ್ನಾಗಿ ಪರಿವರ್ತಿಸಿ ಅದರಿಂದ ಆದಾಯ ಬರುವಂತೆ ನೋಡಿಕೊಳ್ಳುವ ಉದ್ದೇಶದಿಂದ ಈ ಯೋಜನೆ ರೂಪಿಸಲಾಗಿದೆ.
21 ಹೆಕ್ಟೆರ್ ಪ್ರದೇಶದಲ್ಲಿ ವಿಸ್ತಾರಗೊಂಡಿರುವ ಸ್ವಾತಂತ್ರ್ಯ ಉದ್ಯಾನವನವನ್ನು ನವೀಕರಣ ಮಾಡಿ ಪ್ರೇಕ್ಷಣೀಯ ಸ್ಥಳವನ್ನಾಗಿ ಅಭಿವೃದ್ಧಿಪಡಿಸಲು ಬಿಬಿಎಂಪಿ 5 ಕೋಟಿ ರೂ.ಗಳನ್ನು ಮೀಸಲಿಟ್ಟಿದೆ. ಉದ್ಯಾನವನವನ್ನು ನವೀಕರಣ ಮಾಡಿ ಪ್ರೇಕ್ಷಣೀಯ ಸ್ಥಳದ ಜೊತೆ ಹೆರಿಟೇಜ್ ಹಬ್ ಮಾಡುವುದರ ಜೊತೆಗೆ ಫ್ರೀಡಂ ಪಾರ್ಕ್‍ನಲ್ಲಿ ಅಸ್ತಿತ್ವದಲ್ಲಿರುವ ಕಟ್ಟಡಗಳ ನವೀಕರಣ, ಹಳೆಯ ಸೆಂಟ್ರಲ್ ಜೈಲ್ ರಚನೆಗಳು, ವಿದ್ಯುತೀಕರಣ ಹಾಗೂ ದುರಸ್ತಿಗಾಗಿ ಬಿಬಿಎಂಪಿ ಯೋಜನೆ ರೂಪಿಸಿದೆ.
ಅಭಿವೃದ್ಧಿಯಾದ ಉದ್ಯಾನವನಕ್ಕೆ ಹೆಚ್ಚು ಜನರನ್ನು ಆಕರ್ಷಿಸುವ ಉದ್ದೇಶದಿಂದ ರಾಮಚಂದ್ರ ರಸ್ತೆಯಿಂದ ಫ್ರೀಡಂ ಪಾರ್ಕ್‍ಗೆ ಎರಡನೇ ಪ್ರವೇಶ ದ್ವಾರ ನಿರ್ಮಾಣ ಮಾಡಲು ತೀರ್ಮಾನಿಸಲಾಗಿದೆ. ಫ್ರೀಡಂ ಪಾರ್ಕ್‍ನ ಅಸ್ತಿತ್ವದಲ್ಲಿರುವ ರಚನೆಗಳ ನವೀಕರಣ ಮತ್ತು ವಿದ್ಯುದ್ದೀಕರಣಕ್ಕಾಗಿ ಟೆಂಡರ್ ಕರೆಯಲಾಗಿದ್ದು, ಸಂಪೂರ್ಣ ಕಾಮಗಾರಿಗೆ 5 ಕೋಟಿ ರೂಪಾಯಿ ವೆಚ್ಚ ಆಗಬಹುದು ಎಂದು ಅಂದಾಜಿಸಲಾಗಿದೆ.
ಬೆಂಗಳೂರಿನಲ್ಲಿ ಹೊಸ 372 ಸಾರ್ವಜನಿಕ ಶೌಚಾಲಯ ನಿರ್ಮಿಸಲು ಚಿಂತನೆ : ಡಿ.ಕೆ.ಶಿವಕುಮಾರ್
ಈ ಹಿಂದೆ ಎರಡು ಕೋಟಿ ರೂಪಾಯಿ ವೆಚ್ಚದಲ್ಲಿ ಉದ್ಯಾನವನವನ್ನು ನವೀಕರಿಸಲಾಗಿತ್ತು. ಆ ಸಮಯದಲ್ಲಿ ಖಾಲಿ ಇದ್ದ ಸ್ಥಳದಲ್ಲಿ ಆಂಫಿ ಥಿಯೇಟರ್, ಹೊರ ಸಭಾಂಗಣ ಹಾಗೂ ಗಾರ್ಡನ್ ಅನ್ನು ಹೊಸದಾಗಿ ನಿರ್ಮಾಣ ಮಾಡಲಾಗಿತ್ತು. ಆದ್ರೆ ಕಳಪೆ ಕಾಮಗಾರಿಯಿಂದ ಎಲ್ಲವೂ ಸಂಪೂರ್ಣವಾಗಿ ಹಾಳಾಗಿದೆ. ಜೊತೆಗೆ ಪಾರ್ಕ್ ಒಳಗಿರುವ ಹಳೆಯ ಜೈಲು ಕುಸಿಯುವ ಹಂತದಲ್ಲಿದೆ ಎನ್ನುವ ಮಾಹಿತಿ ಇದೆ.
ಉದ್ಯಾನವನ ನವೀಕರಿಸಲು ಬಿಬಿಎಂಪಿ 8 ಕೋಟಿ ರೂಪಾಯಿ ವೆಚ್ಚ ಆಗಲಿದೆ ಎಂದು ಅಂದಾಜಿಸಿತ್ತು. ಆದರೆ ಇದೀಗ ನವೀಕರಣಕ್ಕೆ 5 ಕೋಟಿ ರೂಪಾಯಿ ಮೀಸಲಿಡಲಾಗಿದೆ. ಹೀಗಾಗಿ ಆಂಫಿಥಿಯೇಟರ್‍ವೊಳಗೆ ಹವಾನಿಯಂತ್ರಣ ಮತ್ತು ಅಕೌಸ್ಟಿಕ್ಸ್ ಯೋಜನೆಗಳನ್ನು ಬಿಬಿಎಂಪಿ ಕೈಬಿಟ್ಟಿದೆ ಎಂದು ತಿಳಿದುಬಂದಿದೆ.