Saturday, April 27, 2024
Homeಇದೀಗ ಬಂದ ಸುದ್ದಿಬೆಂಗಳೂರಿನಲ್ಲಿ ಹೊಸ 372 ಸಾರ್ವಜನಿಕ ಶೌಚಾಲಯ ನಿರ್ಮಿಸಲು ಚಿಂತನೆ : ಡಿ.ಕೆ.ಶಿವಕುಮಾರ್

ಬೆಂಗಳೂರಿನಲ್ಲಿ ಹೊಸ 372 ಸಾರ್ವಜನಿಕ ಶೌಚಾಲಯ ನಿರ್ಮಿಸಲು ಚಿಂತನೆ : ಡಿ.ಕೆ.ಶಿವಕುಮಾರ್

ಬೆಂಗಳೂರು ಫೆ.23- ಜನಸಾಮಾನ್ಯರಿಗೆ ಅನುಕೂಲ ಕಲ್ಪಿಸುವ ಸದುದ್ದೇಶದಿಂದ ಬೆಂಗಳೂರಿನಲ್ಲಿ ಹೊಸದಾಗಿ 372 ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಲು ಆಲೋಚಿಸಿದ್ದೇವೆ ಎಂದು ಬೆಂಗಳೂರು ಮಹಾನಗರ ಉಸ್ತುವಾರಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಬಿಜೆಪಿಯ ಭಾರತಿ ಶೆಟ್ಟಿಯವರ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರಸ್ತುತ ಬೆಂಗಳೂರಿನಲ್ಲಿ 907 ಸಾರ್ವಜನಿಕ ಶೌಚಾಲಯಗಳಿವೆ. ಹೆಚ್ಚುವರಿಯಾಗಿ ಇನ್ನು 372 ನೂತನ ಶೌಚಾಲಯಗಳನ್ನು ಆರಂಭಿಸಲು ಚಿಂತನೆ ನಡೆಸಿದ್ದೇವೆ. ಸ್ಥಳದ ಲಭ್ಯತೆ ನೋಡಿಕೊಂಡು ಶೀಘ್ರದಲ್ಲೇ ಒಂದು ನಿರ್ಧಾರಕ್ಕೆ ಬರಲಿದ್ದೇವೆ ಎಂದು ತಿಳಿಸಿದರು.
ಶೌಚಾಲಯಗಳನ್ನು ಉಚಿತವಾಗಿ ನೀಡಬೇಕೆಂದು ಸದಸ್ಯರು ಸಲಹೆ ಕೊಟ್ಟಿದ್ದಾರೆ. ಆದರೆ ಇದನ್ನು ಉಚಿತವಾಗಿ ನೀಡಿದರೆ ನಿರ್ವಹಣೆ ಮಾಡುವುದು ಕಷ್ಟಸಾಧ್ಯ. ಕಡೇಪಕ್ಷ ಎಲ್ಲ ಶೌಚಾಲಯಗಳಲ್ಲೂ ಏಕರೂಪ ಮಾದರಿಯ ದರವನ್ನು ನಿಗದಿಪಡಿಸಲು ಅಧಿಕಾರಿಗಳ ಜೊತೆ ಚರ್ಚೆ ಮಾಡುವುದಾಗಿ ಹೇಳಿದರು.

ಅಯೋಧ್ಯೆ ರೈಲಿಗೆ ಬೆಂಕಿ ಬೆದರಿಕೆ: ಪರಿಷತ್‍ನಲ್ಲಿ ಪ್ರತಿಧ್ವನಿ

ಕಡೆಪಕ್ಷ ಸಾರ್ವಜನಿಕ ಶೌಚಾಲಯಗಳ ಸ್ಥಿತಿಗತಿ ಹೇಗಿರುತ್ತದೆ ಎಂಬುದು ಸದಸ್ಯೆ ಭಾರತಿ ಶೆಟ್ಟಿ ಅವರು ಹೋಗಿ ನೋಡಿರುವುದು ಅಭೀನಂದನೀಯ. ಏಕೆಂದರೆ ಇಂತಹ ಸಾರ್ವಜನಿಕ ಶೌಚಾಲಯಗಳಿಗೆ ಜನಪ್ರತಿನಿಧಿಗಳು ಹೋಗುವುದೂ ಇಲ್ಲ. ತಲೆಕೆಡಿಸಿಕೊಳ್ಳುವುದೂ ಇಲ್ಲ. ನಾನು ಕನಕಪುರಕ್ಕೆ ಹೋಗುವ ವೇಳೆ ಅಲ್ಲಲ್ಲಿ ಭೇಟಿ ಕೊಡುತ್ತೇನೆ. ಶೌಚಾಲಯಗಳಲ್ಲಿ ಅನೇಕ ರೀತಿಯ ಸಮಸ್ಯೆಗಳಿರುವುದು ನನ್ನ ಗಮನಕ್ಕೆ ಬಂದಿದೆ. ಹೊಸದಾಗಿ ಶೌಚಾಲಯ ನಿರ್ಮಾಣ ಮಾಡುವ ಸಂದರ್ಭದಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿ ಕನಿಷ್ಠ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಂತೆ ಕಟ್ಟುನಿಟ್ಟಿನ ನಿರ್ದೇಶನ ನೀಡುವುದಾಗಿ ತಿಳಿಸಿದರು.

ಇವುಗಳನ್ನು ಟಿಪಿಟಿ ಮಾದರಿಯಲ್ಲಿ ನಿರ್ಮಿಸಬೇಕೆ ಅಥವಾ ಸರ್ಕಾರದ ಮಟ್ಟದಲ್ಲೇ ನಿರ್ಮಾಣ ಮಾಡಬೇಕೇ? ಎಂಬುದರ ಬಗ್ಗೆಯೂ ಚರ್ಚೆ ಮಾಡುತ್ತೇವೆ. ದರ ಕಡಿಮೆ ಮಾಡುವ ಬಗ್ಗೆ ಸದಸ್ಯರು ಮನವಿ ಮಾಡಿಕೊಂಡಿದ್ದಾರೆ. ಸಭೆಯಲ್ಲಿ ಇದರ ಬಗ್ಗೆ ಪ್ರಸ್ತಾಪ ಮಾಡಿ ಸೂಕ್ತವಾದ ನಿರ್ಧಾರವನ್ನು ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.

RELATED ARTICLES

Latest News