ಬೆಂಗಳೂರು, ನ.6-ಗಣಿ ಮತ್ತು ಭೂವಿಜ್ಞಾನ ಇಲಾಖೆ ಉಪನಿರ್ದೇಶಕಿ ಪ್ರತಿಮಾ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಅವರ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದ ಕಾರು ಚಾಲಕನನ್ನು ಸುಬ್ರಮಣ್ಯಪುರ ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ. ಐದು ವರ್ಷಗಳಿಂದ ಪ್ರತಿಮಾ ಅವರ ಕಾರು ಚಾಲಕನಾಗಿದ್ದ ಕಿರಣ್‍ನನ್ನು ಚಾಮರಾಜನಗರ ಜಿಲ್ಲೆಯಲ್ಲಿ ವಶಕ್ಕೆ ಪಡೆದು ನಗರಕ್ಕೆ ಕರೆ ತಂದಿದ್ದಾರೆ. ಗುತ್ತಿಗೆ ಆಧಾರದಲ್ಲಿ ಕಳೆದ ಐದು ವರ್ಷಗಳಿಂದ ಕಿರಣ್ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದನು. ಇವರ ತಂದೆ ಸುರೇಶ್ ಸಹ ಇದೇ ಇಲಾಖೆಯಲ್ಲಿ ಕಾರು ಚಾಲಕರಾಗಿದ್ದಾರೆ.
ಕೆಲ ವಿಚಾರದಲ್ಲಿ ಪ್ರತಿಮಾ ಹಾಗೂ ಕಿರಣ್ ನಡುವೆ ಭಿನ್ನಾಭಿಪ್ರಾಯ ಇದ್ದುದರಿಂದ ಹತ್ತು ದಿನಗಳ ಹಿಂದೆಯಷ್ಟೇ ಕಿರಣ್‍ನನ್ನು ಕೆಲಸದಿಂದ ತೆಗೆದು ಹಾಕಿ ಬೇರೆ ಚಾಲಕ ಚೇತನ್‍ನನ್ನು ನಿಯೋಜಿಸಿಕೊಂಡಿದ್ದರು. ಇದೇ ಕಾರಣಕ್ಕೆ ಕಿರಣ್ ಮಹಿಳಾ ಅಧಿಕಾರಿ ಪ್ರತಿಮಾ ಅವರ ಮೇಲೆ ದ್ವೇಷ ಸಾಧಿಸಿ ಈತನೇ ಅವರನ್ನು ಕೊಲೆ ಮಾಡಿರುವ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ತನಿಖೆ ಚುರುಕುಗೊಳಿಸಿ ಆತನ ಹುಡುಕಾಟ ನಡೆಸುತ್ತಿದ್ದಾಗ ಕಿರಣ್ ಮೊಬೈಲ್ ಸ್ವಿಚ್‍ಆಫ್ ಮಾಡಿಕೊಂಡು ಚಾಮರಾಜನಗರ ಜಿಲ್ಲೆಯಲ್ಲಿ ತಲೆಮರೆಸಿಕೊಂಡಿರುವ ಮಾಹಿತಿಯನ್ನು ಪೊಲೀಸರು ಕಲೆ ಹಾಕಿದ್ದರು.ಖಚಿತ ಮಾಹಿತಿ ಮೇರೆಗೆ ಪೊಲೀಸರು ಚಾಮರಾಜನಗರ ಜಿಲ್ಲೆಗೆ ತೆರಳಿ ಕಿರಣ್‍ನನ್ನು ವಶಕ್ಕೆ ಪಡೆದು ನಗರಕ್ಕೆ ಕರೆ ತಂದು ತೀವ್ರ ವಿಚಾರಣೆಗೊಳಪಡಿಸಿ ಹಲವು ಮಾಹಿತಿಗಳನ್ನು ಪಡೆದುಕೊಳ್ಳುತ್ತಿದ್ದಾರೆ.
ಯಾತ್ರಾರ್ಥಿಗಳಿಗೆ ಚಹಾ ವಿತರಿಸಿ ಗಮನ ಸೆಳೆದ ರಾಹುಲ್ ಗಾಂಧಿ
ಹಿನ್ನೆಲೆ: ಮೊನ್ನೆ ಸಂಜೆ ಪ್ರತಿಮಾ ಅವರು ಕೆಲಸ ಮುಗಿಸಿಕೊಂಡು ಇಲಾಖೆ ಕಾರಿನಲ್ಲಿ ದೊಡ್ಡಕಲ್ಲಸಂದ್ರದ ಗೋಕುಲ ಅಪಾರ್ಟ್‍ಮೆಂಟ್ ಪಕ್ಕದ ತಮ್ಮ ಮನೆಗೆ ಡ್ರಾಪ್ ಪಡೆದ ಕೆಲವೇ ನಿಮಿಷದಲ್ಲಿ ಅವರ ಕೊಲೆ ನಡೆದು ಹೋಗಿತ್ತು.
ಪ್ರತಿಮಾ ಅವರ ಕುತ್ತಿಗೆಗೆ ಹಗ್ಗದಿಂದ ಬಿಗಿದು ಬಳಿಕ ಚಾಕುವಿನಿಂದ ಕತ್ತು ಇರಿದು ಭೀಕರವಾಗಿ ಕೊಲೆ ಮಾಡಲಾಗಿತ್ತು. ಪ್ರತಿಮಾ ಅವರ ಅಣ್ಣ, ಬಿಬಿಎಂಪಿ ಗುತ್ತಿಗೆದಾರರಾಗಿರುವ ಪ್ರತೀಶ್ ಅವರು ಸಹೋದರಿಯ ಮೊಬೈಲ್‍ಗೆ ಮೊನ್ನೆ ರಾತ್ರಿ ಕರೆ ಮಾಡಿದಾಗ ಸ್ವೀಕರಿಸಿಲ್ಲ. ಎರಡು-ಮೂರು ಬಾರಿ ಕರೆ ಮಾಡಿದರೂ ಸ್ವೀಕರಿಸದಿದ್ದಾಗ ಬೆಳಗ್ಗೆ ಹೋಗಿ ವಿಚಾರಿಸೋಣ ಎಂದು ಸುಮ್ಮನಾಗಿದ್ದಾರೆ.
ನಿನ್ನೆ ಬೆಳಗ್ಗೆ ಸಹೋದರಿ ಪ್ರತಿಮಾ ಅವರ ಮನೆಗೆ ಅಣ್ಣ ಪ್ರತೀಶ್ ಬಂದು ನೋಡಿದಾಗಲೇ ಸಹೋದರಿ ಕೊಲೆಯಾಗಿರುವುದು ಬೆಳಕಿಗೆ ಬಂದಿದೆ. ತನಿಖೆಗಾಗಿ ರಚಿಸಲಾಗಿದ್ದ ಮೂರು ತಂಡಗಳು ವಿವಿಧ ಆಯಾಮಗಳಲ್ಲಿ ತನಿಖೆ ಆರಂಭಿಸಿದ್ದಾರೆ. ವೈಯಕ್ತಿಕ ಜೀವನ, ವೃತ್ತಿ ಜೀವನ, ಹಣಕಾಸು ಈ ಮೂರು ಆಯಾಮಗಳಲ್ಲಿ ತನಿಖೆ ಕೈಗೊಂಡಿರುವ ಪೊಲೀಸರು ಹೆಚ್ಚಿನ ಮಾಹಿತಿಗಳನ್ನು ಕಲೆ ಹಾಕುತ್ತಿದ್ದಾರೆ.