ಬೆಂಗಳೂರು,ಡಿ.28– ಹೊಸ ವರ್ಷಾಚರಣೆ ಸಂದರ್ಭದಲ್ಲಿ ಸಾರ್ವಜನಿಕರು, ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಯನ್ನು ಆದ್ಯತೆಯನ್ನಾಗಿ ಪರಿಗಣಿಸಿ ನಗರಾದ್ಯಂತ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶವಾಗದಂತೆ ಅಧಿಕಾರಿಗಳೂ ಸೇರಿದಂತೆ 11,830 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ಬಂದೊಬಸ್ತ್ಗಾಗಿ ನಿಯೋಜಿಸಲಾಗಿದೆ.
ನಗರಾದ್ಯಂತ 112 ಕೆಎಸ್ಆರ್ಪಿ- ಸಿಎಆರ್ ತುಕಡಿಗಳನ್ನು ಹಗಲು ಮತ್ತು ರಾತ್ರಿ ವೇಳೆ ಭದ್ರತೆಗೆ ನಿಯೋಜಿಸಲಾಗಿದೆ. ಅಲ್ಲದೆ ನಗರದಲ್ಲಿ ಈಗಾಗಲೇ ಅಳವಡಿಸಿರುವ ಸಿಸಿಟಿವಿಗಳ ಜೊತೆಗೆ ಹೆಚ್ಚುವರಿಯಾಗಿ 817 ಸಿಸಿ ಕ್ಯಾಮರಾಗಳನ್ನು ಪ್ರಮುಖ ಸ್ಥಳಗಳಲ್ಲಿ ಅಳವಡಿಸಲಾಗಿದೆ.
1 ಗಂಟೆವರೆಗೂ ಅವಕಾಶ :
ಸಾರ್ವಜನಿಕವಾಗಿ ಹೊಸ ವರ್ಷಾಚರಣೆಗೆ ಸರ್ಕಾರದ ಅನುಮತಿ ಇದ್ದು, ಮಧ್ಯರಾತ್ರಿ 1 ಗಂಟೆವರೆಗೆ ಮಾತ್ರ ಹೊಸ ವರ್ಷಾಚರಣೆ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ನೀಡಲಾಗಿದೆ.ಜೊತೆಗೆ ಡ್ರೋನ್ ಕ್ಯಾಮರಾ, ವಾಚ್ ಟವರ್, ವುಮೆನ್‌್ಸ ಸೇಫ್ಟಿ ಐಲ್ಯಾಂಡ್ ಹಾಗೂ ಹೆಲ್ತ್ ಸೆಂಟರ್ಗಳನ್ನು ತೆರೆಯಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ದಯಾನಂದ ಅವರು ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.
ಪಿಕೇಟಿಂಗ್ ಪಾಯಿಂಟ್ :
ಪ್ರಮುಖವಾಗಿ ಹೊಸ ವರ್ಷ ಆಚರಣೆ ಸ್ಥಳಗಳಾದ ಎಂ.ಜಿ ರಸ್ತೆ-ಬ್ರಿಗೇಡ್ ರಸ್ತೆ, ರೆಸಿಡೆನ್ಸಿ ರಸ್ತೆ, ಸೆಂಟ್ ಮಾರ್ಕ್‌್ಸ ರಸ್ತೆ, ಕಬ್ಬನ್ಪಾರ್ಕ್, ಟ್ರಿನಿಟಿ ಸರ್ಕಲ್, ಫೀನಿಕ್‌್ಸ ಮಾಲ್, ಕೋರಮಂಗಲ, ಇಂದಿರಾನಗರ 100 ಅಡಿ ರಸ್ತೆ, ಪ್ರಮುಖ ಸ್ಟಾರ್ ಹೋಟೆಲ್ಗಳು, ಪಬ್ಗಳು, ಕ್ಲಬ್ಗಳು ಮುಂತಾದ ಸ್ಥಳಗಳಲ್ಲಿ ಜನಸಂದಣಿಯನ್ನು ನಿಯಂತ್ರಿಸಲು ಸೂಕ್ತ ಬಂದೋಬಸ್ತ್ ಪಿಕೇಟಿಂಗ್ ಪಾಯಿಂಟ್ಗಳನ್ನು ನೇಮಕ ಮಾಡಲಾಗುವುದು ಎಂದರು.
ಕೇಂದ್ರ ವಿಭಾಗದಲ್ಲಿ ಖಾಕಿ ಕಣ್ಗಾವಲು :
ವಿಶೇಷವಾಗಿ ಕೇಂದ್ರ ವಿಭಾಗದ ಬ್ರಿಗೇಡ್ ರಸ್ತೆ, ಎಂ.ಜಿ.ರಸ್ತೆ, ಒಪೆರಾ ಜಂಕ್ಷನ್, ರಿಚಂಡ್ ರಸ್ತೆ, ರೆಸಿಡೆನ್ಸಿ ರಸ್ತೆ ವ್ಯಾಪ್ತಿಯಲ್ಲಿ 5 ಡಿಸಿಪಿ, 18 ಎಸಿಪಿ, 41 ಪೊಲೀಸ್ ಇನ್‌್ಸಪೆಕ್ಟರ್ ಸೇರಿದಂತೆ ಒಟ್ಟು 2572 ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ನಗರದ ಪ್ರಮುಖ ಸ್ಥಳಗಳನ್ನು ಶ್ವಾನದಳ ಮತ್ತು 16 ಎ.ಎಸ್. ಚೆಕ್ ತಂಡಗಳಿಂದ ತಪಾಸಣೆ ಕೈಗೊಳ್ಳಲಾಗುತ್ತದೆ ಎಂದು ಅವರು ವಿವರಿಸಿದರು.
ಸಭೆ ನಡೆಸಿ ಸೂಚನೆ :
ಇತ್ತೀಚೆಗೆ ಪೊಲೀಸ್ ಆಯುಕ್ತರ ಕಛೇರಿಯಲ್ಲಿ ನೂತನ ವರ್ಷಾಚರಣೆಯ ಸಂಬಂಧ ಬಿ.ಬಿ.ಎಂ.ಪಿ., ಆರೋಗ್ಯ ಇಲಾಖೆ, ಅಬಕಾರಿ ಇಲಾಖೆ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಅಗ್ನಿಶಾಮಕ ಇಲಾಖೆ, ಬೆಸ್ಕಾಂ, ಬಿ.ಎಂ.ಆರ್.ಸಿ.ಎಲ್ ಹಾಗೂ ಇತರೆ ಇಲಾಖೆಗಳು/ಸಂಸ್ಥೆಗಳೊಂದಿಗೆ ಸಭೆಯನ್ನು ನಡೆಸಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದರು.
ನಿರ್ಗಮಕ್ಕೆ ಅವಕಾಶವಿಲ್ಲ :
ಕಳೆದ ವರ್ಷ ವರ್ಷಾಚರಣೆ ಮುಗಿಸಿಕೊಂಡು ಸಾರ್ವಜನಿಕರು ಹಿಂದಿರುಗುವ ಸಂದರ್ಭದಲ್ಲಿ ಎಂ.ಜಿ.ರಸ್ತೆಯ ಮೆಟ್ರೊ ನಿಲ್ದಾಣದಲ್ಲಿ ಹೆಚ್ಚಿನ ಜನಸಂದಣಿಯಾಗಿ ನೂಕುನುಗ್ಗಲು ಪರಿಸ್ಥಿತಿ ನಿರ್ಮಾಣವಾದ್ದರಿಂದ ಈ ವರ್ಷ ಡಿ.31ರ ರಾತ್ರಿ 11 ಗಂಟೆಯಿಂದ ಬೆಳಗಿನ ಜಾವ 2 ಗಂಟೆವರೆಗೆ ಎಂ.ಜಿ.ರಸ್ತೆಯ ಮೆಟ್ರೊ ನಿಲ್ದಾಣದ ಮೂಲಕ ಪ್ರಯಾಣಿಕರು ನಿರ್ಗಮಿಸಲು ಅವಕಾಶವಿರುವುದಿಲ್ಲ ಎಂದು ಆಯುಕ್ತರು ಸ್ಪಷ್ಟಪಡಿಸಿದ್ದಾರೆ. ಬದಲಾಗಿ ಸಾರ್ವಜನಿಕರು ಟ್ರಿನಿಟಿ ಸರ್ಕಲ್ ಹಾಗೂ ಕಬ್ಬನ್ಪಾರ್ಕ್ ಮೆಟ್ರೊ ನಿಲ್ದಾಣದ ಮೂಲಕ ನಿರ್ಗಮಿಸಲು ಕೋರಿದ್ದಾರೆ.
ಮಾಲ್ಗಳ ಬಳಿ ಪೊಲೀಸ್ ನಿಯೋಜನೆ :
ನಗರದ ಇತರೆ ವಿಭಾಗಗಳ ಪ್ರಮುಖ ಹೊಸ ವರ್ಷಾಚರಣೆಯ ಸ್ಥಳಗಳಾದ ಫೀನಿಕ್‌್ಸ ಮಾಲ್, ಓರಾಯನ್ ಮಾಲ್ ಹಾಗೂ ನಗರದ ಇತರೆ ಪ್ರಮುಖ ಸ್ಥಳಗಳಲ್ಲಿ ಅಗತ್ಯ ಮುನ್ನೆಚ್ಚರಿಕೆ ಮತ್ತು ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಿಕೊಳ್ಳಲಾಗುವುದು. ಕೋರಮಂಗಲ, ಇಂದಿರಾನಗರ, ಮಾರತ್ಹಳ್ಳಿ, ಹೆಚ್.ಆರ್.ಬಿ.ಆರ್ ಲೇಔಟ್, ಏರ್ ಪೋರ್ಟ್ ರಸ್ತೆ, ವೈಟ್ಫೀಲ್‌್ಡ ಪ್ರದೇಶಗಳಲ್ಲಿ ನಡೆಯಲಿರುವ ಹೊಸ ವರ್ಷಾಚರಣೆಯ ಬಂದೋಬಸ್ತ್ ಕರ್ತವ್ಯಕ್ಕೆ 4 ಡಿಸಿಪಿ, 6-ಎ.ಸಿ.ಪಿ, 18-ಪೊಲೀಸ್ ಇನ್‌್ಸಪೆಕ್ಟರ್ ಸೇರಿದಂತೆ 2414 ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದು ಅವರು ಹೇಳಿದರು.
ಸಾರ್ವಜನಿಕರಿಗೆ ಸಲಹೆ-ಸೂಚನೆ :
ಹೊಸ ವರ್ಷಾಚರಣೆಯನ್ನು ಶಾಂತಿಯುತವಾಗಿ ಆಚರಿಸಬೇಕು. ಕಾನೂನು ನಿಯಮಗಳನ್ನು ಪಾಲನೆ ಮಾಡಿ, ನಿಯಮಿತವಾಗಿ ವಾಹನ ಚಾಲನೆ ಮಾಡಿ ಮತ್ತು ಸಂಚಾರಿ ನಿಮಯಗಳನ್ನು ಕಡ್ಡಾಯವಾಗಿ ಪಾಲಿಸುವುದರ ಜೊತೆಗೆ ಸಾರ್ವಜನಿಕರು ಶಾಂತಿ ಮತ್ತು ಶಿಸ್ತನ್ನು ಕಾಪಾಡಲು ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರ ಜೊತೆ ಸಹಕರಿಸುವಂತೆ ಕೋರಲಾಗಿದೆ.
ತುರ್ತು ಸಂದರ್ಭಗಳಲ್ಲಿ 112 ಅಥವಾ ಸಮೀಪದ ಪೊಲೀಸ್ ಠಾಣೆಯನ್ನು/ಪೊಲೀಸ್ ಕಿಯೋಸ್ಕ್ ಸಂಪರ್ಕಿಸಿ, ಸಾರ್ವಜನಿಕರು ತಮ ಚಲನವಲನಗಳ ಬಗ್ಗೆ ಕುಟುಂಬಕ್ಕೆ ಮಾಹಿತಿಯನ್ನು ಆಗಿದ್ದಾಂಗ್ಗೆ ನೀಡುತ್ತಿರಿ, ಇತರೆ ಧರ್ಮದವರಿಗೆ ಘಾಸಿಯಾಗದಂತೆ ವರ್ಷಚರಣೆಯನ್ನು ಆಚರಿಸಿ, ಭದ್ರತಾ ಸಿಬ್ಬಂದಿಗಳಾದ ಪೊಲೀಸ್, ಹೋಂ ಗಾರ್ಡ್, ಜೊತೆ ಸಹಕರಿಸಿ, ಆಟೋ ಮತ್ತು ಕ್ಯಾಬ್ಗಳಲ್ಲಿ ಪ್ರಯಾಣಿಸುವಾಗ ಅಧಿಕೃತವೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ ಜೊತೆಗೆ ಪೊಲೀಸರು ಸೂಚಿಸಿರುವ ರಸ್ತೆಗಳಲ್ಲಿಯೇ ಸಂಚರಿಸಿ ಎಂದು ಸಲಹೆ ನೀಡಿದ್ದಾರೆ.
ಮದ್ಯ ಸೇವಿಸಿ ಜೀವಕ್ಕೆ ಆಪತ್ತು ತಂದುಕೊಳ್ಳಬೇಡಿ :
ಮದ್ಯಪಾನ ಮತ್ತು ಮಾದಕ ವಸ್ತುಗಳನ್ನು ಸೇವಿಸಿ ವಾಹನ ಚಾಲನೆ ಮಾಡಬೇಡಿ, ಇದು ಕಾನೂನು ಬಾಹಿರವಾಗಿದ್ದು, ಜೀವಕ್ಕೆ ಹಾನಿ ತಂದುಕೊಳ್ಳಬೇಡಿ ಎಂದು ಆಯುಕ್ತರು ಕಿವಿಮಾತು ಹೇಳಿದ್ದಾರೆ.
ಮಾಲೀಕರಿಗೆ ಸೂಚನೆ :
ಕ್ಲಬ್ಗಳು, ಪಬ್ಗಳು ಮತ್ತು ರೆಸ್ಟೋರೆಂಟ್ಗಳು ಹೊಸ ವರ್ಷಾಚರಣೆ ನಿಮಿತ್ತ ಸದಸ್ಯರುಗಳು ಮತ್ತು ಅತಿಥಿಗಳಿಗೆ ಔತಣ ಕೂಟ, ಇವೆಂಟ್ಗಳಿಗೆ ಅನುಮತಿ ನೀಡುವಾಗ ನಿಗಧಿತ ಮಿತಿಯನ್ನು ಮೀರದಂತೆ ಪಾಸ್ಗಳನ್ನು ವಿತರಿಸುವಂತೆ ಮಾಲೀಕರಿಗೆ ಸೂಚನೆಗಳನ್ನು ನೀಡಲಾಗಿದೆ ಎಂದು ಆಯುಕ್ತರು ತಿಳಿಸಿದರು.
73 ಮಂದಿ ಡ್ರಗ್ ಪೆಡ್ಲರ್ ಬಂಧನ :
ನೂತನ ವರ್ಷಾಚರಣೆ ಸಂದರ್ಭದಲ್ಲಿ ಮಾದಕ ವಸ್ತು ರೇವ್ ಪಾರ್ಟಿಗಳು (ಡ್ರಗ್‌್ಸ ಸರಬರಾಜು) ಆಗುವುದನ್ನು ನಿಯಂತ್ರಿಸಲು ನಗರದ ಎಲ್ಲಾ ಡಿ.ಸಿ.ಪಿ, ಸಿಸಿಬಿ ಅಧಿಕಾರಿಗಳು ವಿಶೇಷ ಕಾರ್ಯಾಚರಣೆ ಕೈಗೊಂಡಿದ್ದು, ಈ ತಿಂಗಳಲ್ಲಿ 3 ವಿದೇಶಿ ಡ್ರಗ್‌್ಸ ಪೆಡ್ಲರ್ ಸೇರಿದಂತೆ 73 ಮಂದಿ ಆರೋಪಿಗಳನ್ನು ಬಂಧಿಸಿ 25,20,65,000 ರೂ. ಮೌಲ್ಯದ 220.501 ಕೆ.ಜಿ ಡ್ರಗ್‌್ಸ ವಶಪಡಿಸಿಕೊಂಡು 54 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದರು.