ಬೆಂಗಳೂರು,ಏ.5- ನಗರದಲ್ಲಿ ಮಳೆಯಾಗದೆ ಬಿಸಿಲಿನ ತಾಪ ಹೆಚ್ಚಾಗಿರುವ ಸಂದರ್ಭದಲ್ಲೇ ಮಹಾಮಾರಿ ಕಾಲರಾ ಕಾಣಿಸಿಕೊಂಡಿದೆ. ಈ ಹಿಂದೆ ಒಬ್ಬ ಪುರುಷನಿಗೆ ಕಾಲರಾ ರೋಗ ಕಾಣಿಸಿಕೊಂಡಿತ್ತು. ನಿನ್ನೆ ಮಲ್ಲೇಶ್ವರದ ಮಹಿಳೆಯೊಬ್ಬರು ವಾಂತಿ ಭೇದಿಯಿಂದ ಆಸ್ಪತ್ರೆಗೆ ದಾಖಲಾಗಿದ್ದು, ಅವರನ್ನು ಕೆ.ಸಿ.ಜನರಲ್ ವೈದ್ಯರು ತಪಾಸಣೆ ನಡೆಸಿದಾಗ ನೆಗಿಟಿವ್ ವರದಿ ಬಂದಿದೆ ಎನ್ನಲಾಗಿದೆ. ಆದರೂ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಬಿಬಿಎಂಪಿ ನಿರ್ಧರಿಸಿದೆ.
ಕಾಲರಾದಿಂದ ಅನಾಹುತ ಸಂಭವಿಸುವ ಮೊದಲೆ ಎಚ್ಚೆತ್ತುಕೊಂಡಿರುವ ಬಿಬಿಎಂಪಿ ಸಾಂಕ್ರಾಮಿಕ ಸೋಂಕು ತಡೆಗೆ ಅಗತ್ಯ ಕ್ರಮ ಕೈಗೊಳ್ಳಲು ಮುಂದಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಕಾಲರಾ ರೋಗ ಹರುಡುವಿಕೆಯನ್ನು ನಿಭಾಯಿಸಲು ಆರೋಗ್ಯಾಕಾರಿ ಹಾಗೂ ಆರೋಗ್ಯ ವೈದ್ಯಾಧಿಕಾರಿಗಳಿಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಸುರೋಳ್ಕರ್ ವಿಕಾಸ್ ಕಿಶೋರ್ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ರೋಗ ಹರುಡುವಿಕೆಯನ್ನು ನಿಭಾಯಿಸಲು ವಿಧಾನಸಭಾ ಕ್ಷೇತ್ರವಾರು ಹಾಗೂ ಕ್ಷೇತ್ರ ಮಟ್ಟದಲ್ಲಿ ಕ್ಷಿಪ್ರ ಪ್ರತಿಕ್ರಿಯೆ ತಂಡವನ್ನು ರಚಿಸಲು ಎಲ್ಲಾ ಆರೋಗ್ಯಾಧಿಕಾರಿಗಳು ಮತ್ತು ಆರೋಗ್ಯ ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ನಗರದಲ್ಲಿರುವ ಎಲ್ಲಾ ಹೋಟೆಲ್ಗಳು, ರೆಸ್ಟೋರೆಂಟ್ಗಳು ಹಾಗೂ ಕೆಫೆಗಳ ಮಾಲೀಕರು ಗ್ರಾಹಕರಿಗೆ ಕುಡಿಯಲು ಕಾಯಿಸಿದ ನೀರನ್ನು ವಿತರಿಸಲು ಸಲಹೆ ನೀಡಲಾಗಿದೆ.
ಪಾಲಿಕೆಯ ವ್ಯಾಪ್ತಿಯ ಎಲ್ಲಾ ಖಾಸಗಿ ಆಸ್ಪತ್ರೆ, ಖಾಸಗಿ ಲ್ಯಾಬ್ಗಳು ಮತ್ತು ಸರ್ಕಾರಿ ಆಸ್ಪತ್ರೆಗಳಾದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ತಾಲ್ಲೂಕ ಆಸ್ಪತ್ರೆ, ಜನರಲ್ ಆಸ್ಪತ್ರೆ, ವೈದ್ಯಕೀಯ ಶಿಕ್ಷಣ ಅಡಿಯಲ್ಲಿ ಬರುವ ಆಸ್ಪತ್ರೆಗಳು ಶಂಕಿತ ಪ್ರಕರಣಗಳು ವರದಿಯಾದ್ದಲ್ಲಿ ಸರ್ಕಾರ ನಿಗದಿಪಡಿಸಿರುವ ಐ.ಹೆಚ್.ಐ.ಪಿ. ತಂತ್ರಾಶದಲ್ಲಿ ಕಡ್ಡಾಯವಾಗಿ ವರದಿ ಮಾಡುವಂತೆ ಸೂಚಿಸಲಾಗಿದೆ.
ಕುಡಿಯುವ ನೀರಿನ ಬಗ್ಗೆ ಹೆಚ್ಚಿನ ವಿಶ್ಲೇಷಣೆಗಾಗಿ ನೀರಿನ ಮಾದರಿಗಳನ್ನು ಹಿರಿಯ ಆರೋಗ್ಯ ಪರಿವೀಕ್ಷಕರು ಸಂಗ್ರಹಿಸಿ ಪಿಎಚ್ಐ ಲ್ಯಾಬ್ಗೆ ಪ್ರತಿನಿತ್ಯ ಕಳುಹಿಸಲು ಸೂಚಿಸಲಾಗಿದೆ.
ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಓಆರ್ಎಸ್ ಕಾರ್ನರ್ಗಳನ್ನು ಸ್ಥಾಪಿಸುವ ಮೂಲಕ ಆಸ್ಪತ್ರೆಗೆ ಬರುವ ಹೊರರೋಗಿಗಳಲ್ಲಿ ಜಾಗೃತಿ ಮೂಡಿಸುವುದು ಹಾಗೂ ನೀರಿನಿಂದ ಹರಡುವ ರೋಗಗಳನ್ನು ತಡೆಗಟ್ಟುವ ಬಗ್ಗೆ ಆರೋಗ್ಯ ಶಿಕ್ಷಣ ನೀಡಲೂ ಸೂಚಿಸಲಾಗಿದೆ. ನಿನ್ನೆ ವಾಂತಿಭೇದಿಯಿಂದ ಆಸ್ಪತ್ರೆ ಸೇರಿದ್ದ ಮಹಿಳೆಗೆ ನೆಗೆಟಿವ್ ರಿಪೊರ್ಟ್ ಬಂದಿದೆ.