ಬೆಂಗಳೂರು,ಅ.11- ಬೆಂಗಳೂರಿನ ಅರಮನೆ ಮೈದಾನದಲ್ಲಿ ಮುಂದಿನ ತಿಂಗಳು ನಡೆಯುವ ಬೆಂಗಳೂರು ಕಂಬಳ, ನಮ್ಮ ಕಂಬಳ ಕಾರ್ಯಕ್ರಮಕ್ಕೆ ಗುದ್ದಲಿ ಪೂಜೆ ನೆರವೇರಿಸುವ ಮೂಲಕ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಚಾಲನೆ ನೀಡಿದರು. ರಾಜಕೀಯವಾಗಿ ಆರೋಪ, ಪ್ರತ್ಯಾರೋಪಗಳಿಂದ ಹೆಚ್ಚು ಚರ್ಚೆಗೆ ಒಳ ಗಾಗಿದ್ದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಜಿ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಅವರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರು.
ಮಾಜಿ ಮುಖ್ಯಮಂತ್ರಿ ಹಾಗೂ ಸಚಿವರೂ ಆಗಿರುವ ಡಿ.ವಿ.ಸದಾನಂದಗೌಡ, ಶಾಸಕರಾದ ಎನ್.ಎ.ಹ್ಯಾರಿಸ್, ರಿಜ್ವಾನ್ ಹರ್ಷದ್, ಸಂಗೀತ ನಿರ್ದೇಶಕ ಗುರುಕಿರಣ್, ಕರಾವಳಿ ಸಂಘಟನೆಗಳ ಮುಖ್ಯಸ್ಥರಾದ ಅಶೋಕ್ ರೈ, ಪ್ರಕಾಶ್, ಗುರುರಂಜನ್ ಶೆಟ್ಟಿ, ರಾಜೇಂದ್ರಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಕರಾವಳಿ ಸಂಸ್ಕøತಿ, ವೈವಿಧ್ಯತೆ ನಾಡಿಗೆ ಹೆಮ್ಮೆ. ಇಂದು ಬೆಂಗಳೂರಿನ ಕಂಬಳಕ್ಕೆ ಚಾಲನೆ ನೀಡಲಾಗಿದೆ. ತುಳು ನಾಡಿನ ಆಚರಣೆಗಳು ಬೆಂಗಳೂರಿನಲ್ಲಿ ನಡೆಯಲಿವೆ. ಇದಕ್ಕಾಗಿ ಚಿಕ್ಕ ಕ್ರೀಡಾಂಗಣವನ್ನು ನಿರ್ಮಾಣ ಮಾಡಲಾಗುತ್ತದೆ ಎಂದರು. ಕರಾವಳಿಯವರು ತಮ್ಮ ಆಚರಣೆ, ಸಂಸ್ಕøತಿಯನ್ನು ಉಳಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಅದಕ್ಕೆ ನಮ್ಮ ಬೆಂಬಲ ಇದೆ. ಬೆಂಗಳೂರಿನಲ್ಲಿ ಕರಾವಳಿ ಭಾಗದ ಸಂಘಟನೆ ಕಚೇರಿಗೆ ಅಗತ್ಯವಾದ ಸ್ಥಳಾವಕಾಶ ಮಾಡಿಕೊಡಲು ಬಿಬಿಎಂಪಿಗೆ ಸೂಚನೆ ನೀಡುವುದಾಗಿ ತಿಳಿಸಿದರು.
ಈ ಹಿಂದೆ ಡಿ.ವಿ.ಸದಾನಂದಗೌಡ ಅವರು ಮುಖ್ಯಮಂತ್ರಿಯಾಗಿದ್ದಾಗ ಪ್ರತಿ ಕಂಬಳಕ್ಕೆ 10 ಲಕ್ಷ ನೀಡಿದ್ದರು. ತಮ್ಮ ಸರ್ಕಾರ ಪ್ರತಿ ಕಂಬಳಕ್ಕೆ ಐದು ಲಕ್ಷದಂತೆ 20 ಕಂಬಳಕ್ಕೆ ಹಣ ನೀಡುತ್ತೇವೆ ಎಂದು ಹೇಳಿದರು.ಕನ್ನಡ ಮತ್ತು ಸಂಸ್ಕøತಿ ಇಲಾಖೆ, ನಗರಾಭಿವೃದ್ಧಿ ಇಲಾಖೆ ಸೇರಿದಂತೆ ಎಲ್ಲರೊಂದಿಗೆ ಚರ್ಚಿಸಿ ಕಂಬಳಕ್ಕೆ ಗರಿಷ್ಠ ಪ್ರಮಾಣದ ಬೆಂಬಲ ನೀಡುವುದಾಗಿ ಭರವಸೆ ನೀಡಿದರು. ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಕರಾವಳಿ ಜಿಲ್ಲೆಯ ಯುವಕರು ಬೆಂಗಳೂರಿನಲ್ಲಿ ಕಂಬಳ ಮಾಡಲು ಮುಂದಾಗಿದ್ದಾರೆ. ಇದು ಶ್ಲಾಘನೀಯ. ಯಾವುದೇ ತೊಂದರೆ ಬಂದರೂ ತಲೆಕೆಡಿಸಿಕೊಳ್ಳಬೇಡಿ. ಸರ್ಕಾರ ನಿಮ್ಮ ಜೊತೆಯಲ್ಲಿದೆ ಎಂದು ಭರವಸೆ ನೀಡಿದರು.
ಡಿ.ವಿ.ಸದಾನಂದಗೌಡ ಮಾತನಾಡಿ, ಕಂಬಳ ನಡೆಸುವುದು ಕಷ್ಟ. ಅದನ್ನು ನಿಲ್ಲಿಸಬೇಕು ಎನ್ನುವ ಹಂತದಲ್ಲಿ ನಾನು ಮುಖ್ಯಮಂತ್ರಿಯಾಗಿದ್ದೆ. ಒಂದು ಕಂಬಳಕ್ಕೆ 10 ಲಕ್ಷ ರೂ.ಗಳಂತೆ 10 ಕಂಬಳಗಳಿಗೆ 1 ಕೋಟಿ ರೂ. ಅನುದಾನ ನಿಗದಿ ಮಾಡಿ ತಮಿಳುನಾಡಿನಲ್ಲಿ ಜಲ್ಲಿಕಟ್ಟಿನಂತೆ ಕಂಬಳವನ್ನು ರಾಜ್ಯ ಕ್ರೀಡೆ ಯಾಗಿ ಪರಿವರ್ತನೆ ಮಾಡಿದ ತೃಪ್ತಿ ತಮಗಿದೆ ಎಂದರು. ಕಂಬಳದ ಬಗ್ಗೆ ನ್ಯಾಯಾಲಯದಲ್ಲಿ ಸಾಕಷ್ಟು ವಾದ-ವಿವಾದ ನಡೆದವು. ಹೈಕೋರ್ಟ್ ನಲ್ಲಿ ಸಮರ್ಥ ವಾದ ಮಂಡಿಸಿ ನಾವು ಕಂಬಳ ಉಳಿಸಿಕೊಂಡಿದ್ದೇವೆ ಎಂದರು.
ನಾವು ನಿನ್ನೆ ಕಂಬಳದ ಬಗ್ಗೆ ಚರ್ಚೆ ನಡೆಯುವಾಗ ಮಳೆ ಬಂದಿತು. ಇದರಿಂದಾಗಿ ಉಪಮುಖ್ಯಮಂತ್ರಿಯವರಿಗೆ ತಲೆಬಿಸಿ ಕಡಿಮೆಯಾಗಿದೆ. ಇಲ್ಲವಾದರೆ ಕಂಬಳ ನಡೆಸಲು ಬಳಸುವ ನೀರಿನ ಬಗ್ಗೆ ಕೆಲ ಬುದ್ಧಿಜೀವಿಗಳು ತಗಾದೆ ತೆಗೆಯುತ್ತಾರೆ. ಅದಕ್ಕೂ ಪೂರ್ವಸಿದ್ಧರಾಗಿರಬೇಕು. ಕೆಲವರಿಗೆ ತಲೆಯಲ್ಲಿ ಮೆದುಳಿಲ್ಲ, ಮೆದುಳನ್ನು ಬ್ಯಾಗಿನಲ್ಲೇ ಇಟ್ಟುಕೊಂಡಿದ್ದಾರೆ ಎಂದು ಸದಾನಂದಗೌಡ ಕಿಡಿಕಾರಿದರು.
ಸಂಗೀತ ನಿರ್ದೇಶಕ ಗುರುಕಿರಣ್ ಮಾತನಾಡಿ, 44 ಎಕರೆಯಲ್ಲಿ ಕಂಬಳಕ್ಕಾಗಿ ಸಿದ್ಧತೆ ನಡೆಸಲಾಗಿದೆ. ಕಂಬಳ ಮತ್ತು ಅದರ ಮೈದಾನ ಒಂದು ಭಾಗವಾದರೆ, ಮತ್ತೊಂದು ವೇದಿಕೆಯಲ್ಲಿ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿವೆ. ಹಳೆ ಮಿನಿ ಮಂಗಳೂರಿನ ಮಾದರಿಯನ್ನು ನಿರ್ಮಿಸಲಾಗುವುದು. ತುಳುನಾಡಿನ ಜನಪದ ಆಚರಣೆಗಳಾದ ಯಕ್ಷಗಾನ, ಹುಲಿವೇಷ ಸೇರಿದಂತೆ ಸಾಂಸ್ಕøತಿಕ ಕಾರ್ಯಕ್ರಮಗಳು, ಕರಾವಳಿ ಭಾಗದ ತಿಂಡಿ ಭಕ್ಷ್ಯಗಳನ್ನು ಬೆಂಗಳೂರಿನವರಿಗೆ ಪರಿಚಯಿಸುವ ಉದ್ದೇಶವಿದೆ ಎಂದು ವಿವರಿಸಿದರು.