Saturday, April 27, 2024
Homeರಾಜ್ಯತಾಯಿ - ಮಗು ಸಾವು : ಬೆಸ್ಕಾಂ ವಿರುದ್ಧ ವ್ಯಾಪಕ ಆಕ್ರೋಶ

ತಾಯಿ – ಮಗು ಸಾವು : ಬೆಸ್ಕಾಂ ವಿರುದ್ಧ ವ್ಯಾಪಕ ಆಕ್ರೋಶ

ಬೆಂಗಳೂರು, ನ.20- ಕಾಡುಗೋಡಿಯಲ್ಲಿ ಸಂಭವಿಸಿದ ವಿದ್ಯುತ್ ಅಪಘಾತದಲ್ಲಿ ತಾಯಿ, ಮಗು ಪ್ರಾಣ ಕಳೆದುಕೊಂಡ ಧಾರುಣ ಘಟನೆಯ ಬಗ್ಗೆ ವ್ಯಾಪಕ ಆಕ್ರೋಶಗಳು ಕೇಳಿ ಬರುತ್ತಿದ್ದು, ಕರ್ತವ್ಯಲೋಪ ಎಸಗಿದ ಐವರು ಅಧಿಕಾರಿಗಳಿಂದ ತಲಾ 10 ಲಕ್ಷ ರೂಪಾಯಿ ವಸೂಲಿ ಮಾಡಿ ಸಂತ್ರಸ್ಥರ ಕುಟುಂಬಗಳಿಗೆ ಪರಿಹಾರ ರೂಪದಲ್ಲಿ ನೀಡಬೇಕು ಎಂಬ ಒತ್ತಾಯ ಕೇಳಿ ಬಂದಿದೆ.

ಈ ಘಟನೆಯಲ್ಲಿ ವಿದ್ಯುತ್ ಎಂಬ ಪ್ರಾಣಕಂಠಕ ಅಪಾಯಕಾರಿ ವ್ಯವಸ್ಥೆಯನ್ನು ನಿರ್ವಹಣೆ ಮಾಡುವಲ್ಲಿ ಬೇಜವಾಬ್ದಾರಿತನ ಎದ್ದು ಕಾಣುತ್ತದೆ. ಇದು ಬೆಂಗಳೂರು ಮಾತ್ರವಲ್ಲ ನಾಡಿನಾದ್ಯಂತ ಸಾಮಾನ್ಯ ಎಂಬಂತಾಗಿದೆ. ವಿದ್ಯುತ್ ಸರಬರಾಜು ಕಂಪನಿಗಳ ಧೋರಣೆ ಹೇಗಿದೆಯೆಂದರೆ ವಿದ್ಯುತ್ ತಂತಿ ತುಂಡಾಗಿ ಬಿದ್ದರೆ ಅದರ ಬಗ್ಗೆ ಸಾರ್ವಜನಿಕರೆ ಮುಂಜಾಗ್ರತೆ ವಹಿಸಿ ಸುರಕ್ಷಿತವಾಗಿ ದಾಟಿ ಹೋಗಬೇಕು. ನಿರ್ಲಕ್ಷ್ಯ ವಹಿಸಿದರೆ ಯಾರು ತಾನೇ ಏನು ಮಾಡಲಾಗುತ್ತದೆ ಎಂಬ ದಾಷ್ಟ್ಯದ ಸಮಜಾಯಿಷಿಗಳಿವೆ. ವಿದ್ಯುತ್ ಅವಘಡಗಳಿಗೆ ಯಾರೋ ಒಬ್ಬ ಅಧಿಕಾರಿ ಅಥವಾ ಸಿಬ್ಬಂದಿಯನ್ನು ಹೊಣೆ ಮಾಡಿ ಕಣ್ಣೋರೆಸುವ ಯತ್ನ ನಡೆಯುತ್ತಿದೆ. ವಾಸ್ತವವಾಗಿ ಇಂತಹ ಪ್ರಕರಣಗಳಲ್ಲಿ ಮೇಲಿನಿಂದ ಕೆಳಗಿನವರೆಗೆ ಎಲ್ಲರೂ ಹೊಣೆಗಾರರು ಎಂಬುದನ್ನು ಮರೆಯಲಾಗುತ್ತಿದೆ.

ರಾಜ್ಯ ಸರ್ಕಾರ ಗೃಹಜ್ಯೋತಿಯಡಿ ಕೋಟ್ಯಂತರ ಜನರಿಗೆ ಉಚಿತ ವಿದ್ಯುತ್ ಪೂರೈಕೆ ಮಾಡುತ್ತಿದ್ದೇವೆ, ಜನರೆಲ್ಲಾ ಖುಷಿಯಾಗಿದ್ದಾರೆ ಎಂಬ ಭ್ರಮೆಯಲ್ಲಿದೆ. ಮಳೆ ಕೊರತೆಯಿಂದ ವಿದ್ಯುತ್ ಬೇಡಿಕೆ ಹೆಚ್ಚಾದಾಗ ಕೊರತೆ ಸರಿದೂಗಿಸಲು ವಿದ್ಯುತ್ ಖರೀದಿಗೆ ಹಣದ ಒದಗಿಸಿ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಲಾಗಿದೆ ಎಂಬ ವಾದಗಳು ಕೇಳಿ ಬರುತ್ತಿವೆ.

ವಿಶ್ವಕಪ್ ಮೇಲೆ ಕಾಲಿಟ್ಟು ಉದ್ದಟತನ ಮೆರೆದ ಮಿಚೆಲ್ ಮಾರ್ಷ್

ಈ ಎರಡು ಬಾಬ್ತುಗಳಿಗೆ ಹೆಚ್ಚು ಹಣ ಖರ್ಚು ಮಾಡಿ ಸರ್ಕಾರ ಸುಸ್ತಾದಂತೆ ಕಂಡು ಬರುತ್ತಿದೆ. ವಿದ್ಯುತ್ ಸರಬರಾಜು ವ್ಯವಸ್ಥೆಯಲ್ಲಿನ ಕೊರತೆಗಳನ್ನು ಸರಿದೂಗಿಸಲು ಸಂಪೂರ್ಣ ನಿರ್ಲಕ್ಷ್ಯ ಕಂಡು ಬರುತ್ತಿದೆ. ಶಿಥಲಗೊಂಡಿರುವ ವಿದ್ಯುತ್ ಕಂಬಗಳ ಬದಲಾವಣೆ, ತಂತಿ ಮಾರ್ಗ ದುರಸ್ಥಿತಿ, ಸೋರಿಕೆ ನಿಯಂತ್ರಣ ಸೇರಿದಂತೆ ಹಲವಾರು ಕೆಲಸಗಳು ನಿರ್ಲಕ್ಷ್ಯಿಸಲ್ಪಡುತ್ತಿವೆ.

ಕಾಡುಗೋಡಿಯಲ್ಲಿ ತಾಯಿ-ಮಗುವಿನ ಸಜೀವ ದಹನ ಆಕಸ್ಮಿಕ ಪ್ರಕರಣ ಎಂದು ನಿರ್ಲಕ್ಷ್ಯಿಸುವುದು ಸಲ್ಲ. ಅದೊಂದು ಸಾಂಸ್ಥಿಕ ಕೊಲೆಯೆಂದೆ ಭಾವಿಸಬೇಕಾಗಿದೆ. ಸಾರ್ವಜನಿಕ ಸ್ಥಳದಲ್ಲಿ ವಿದ್ಯುತ್ ತಂತಿ ಹರಿದು ಬಿದ್ದಿದೆ. ಅದನ್ನು ಕಂಡು ಜನ ಬೆಸ್ಕಾಂಗೆ ಹಲವು ಬಾರಿ ದೂರು ನೀಡಿದ್ದಾರೆ. ಆದರೂ ದುರಸ್ಥಿತಿಯ ಗೋಜಿಗೆ ಹೋಗದೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಅಮಾಯಕರಾದ ತಾಯಿ-ಮಗು ವಿದ್ಯುತ್ ಸಂಪರ್ಕಕ್ಕೆ ಸಿಲುಕಿ ಘೋರವಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಸರ್ಕಾರ ಐದು ಲಕ್ಷ ಪರಿಹಾರ ನೀಡಿ ಕೈ ತೊಳೆದುಕೊಂಡಿದೆ.

ಸಂತ್ರಸ್ಥರ ಕುಟುಂಬದ ಸದಸ್ಯರು ಮತ್ತು ಸ್ಥಳೀಯರು ಘಟನೆಯ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂಧನ ಸಚಿವ ಕೆ.ಜೆ.ಜಾರ್ಜ್ ಮನೆಯ ಎದರು ಶವ ಇಟ್ಟು ಪ್ರತಿಭಟನೆ ಮಾಡಲು ಮುಂದಾಗಿದ್ದಾರೆ. ಆದರೆ, ಸರ್ಕಾರ ಪೊಲೀಸರನ್ನು ಬಳಸಿ ಸ್ಥಳಿಯರ ಮೇಲೆ ಒತ್ತಡ ಹೇರಿ ಪ್ರತಿಭಟನೆಯನ್ನು ಹತ್ತಿಕ್ಕಿದೆ. ಪತ್ನಿ ಹಾಗೂ ಪುತ್ರಿಯನ್ನು ಕಳೆದುಕೊಂಡ ತಮಿಳುನಾಡಿನ ಸಂತೋಷ ಕುಮಾರ್ ಎಂಬುವರಿಗೆ ತಪ್ಪಿತಸ್ಥ ಅಧಿಕಾರಿಗಳಿಂದ ತಲಾ 10 ಲಕ್ಷದಂತೆ ಹಣ ವಸೂಲಿ ಮಾಡಿ ಪರಿಹಾರ ಕೊಡಿಸಬೇಕು ಎಂಬ ಒತ್ತಾಯ ಮಾಡಲಾಗಿದೆ.

ಸಾರ್ವಜನಿಕ ಸ್ಥಳದಲ್ಲಿ ತಂತಿ ಹರಿದು ಬಿದ್ದಿದ್ದರೂ ಗಮನಹರಿಸದ ಬೆಸ್ಕಾಂ ಅಧಿಕಾರಿಗಳ ವಿರುದ್ಧ ಐಪಿಸಿ 304 ಎ ಅಡಿ ಪ್ರಕರಣ ದಾಖಲಾಗಿದೆ. ನಿನ್ನೆ ರಾತ್ರಿಯೇ ಐವರು ಆರೋಪಿಗಳಿಗೆ ಠಾಣೆಯಲ್ಲೆ ಜಾಮೀನು ನೀಡಿ ಕಳುಹಿಸಲಾಗಿದೆ.

ಪ್ರತಿ ಭಾರಿಯೂ ಇಂತಹ ಘಟನೆಗಳು ನಡೆದಾಗ ಒಂದಿಬ್ಬರು ಅಧಿಕಾರಿಗಳನ್ನು ಅಮಾನತು ಮಾಡುವುದು, ಸಂತ್ರಸ್ಥರಿಗೆ ಪರಿಹಾರ ನೀಡಿ ಕೈ ತೊಳೆದುಕೊಳ್ಳುವುದು ಸಾಮಾನ್ಯವಾಗಿದೆ. ಯಾವುದೇ ಸರ್ಕಾರವಿದ್ದರೂ ಇಂತಹ ನಿರ್ಲಕ್ಷ್ಯಗಳನ್ನು ಗಂಭಿರವಾಗಿ ಪರಿಗಣಿಸುವುದೇ ಇಲ್ಲವಾಗಿದೆ. ಕೆಲ ಅಧಿಕಾರಿಗಳನ್ನು ದಂಡಿಸಿದ ಮಾತ್ರಕ್ಕೆ ಎಲ್ಲವೂ ಸರಿ ಹೋಗುವುದಿಲ್ಲ.

ಅಪಾಯಕಾರಿಯಾದ ವಿದ್ಯುತ್ ಸರಬರಾಜನ್ನು ಸುರಕ್ಷಿತವಾಗಿಸಲು ಸಮರೋಪಾದಿಯಲ್ಲಿ ಕೆಲಸಗಳಾಗಬೇಕಾಗಿದೆ. ಎಲ್ಲೆಲ್ಲೆ ಅಪಾಯಕಾರಿ ಸಂಪರ್ಕಗಳಿವೆ ಎಂಬ ಸಮೀಕ್ಷೆ ನಡೆಯಬೇಕಿದೆ. ಕೆಲವು ಕಡೆ ಕೈಗೆಟಕುವ ಅಂತರದಲ್ಲೇ ವಿದ್ಯುತ್ ಪರಿವರ್ತಕಗಳನ್ನು ಅಳವಡಿಸಲಾಗಿದೆ ಅವುಗಳನ್ನು ಸುರಕ್ಷಿತ ಅಂತರದಲ್ಲಿ ಇರಿಸಬೇಕಿದೆ. ಗುಂಡಿಗಳಲ್ಲಿ ಹರಿದು ತಂಡಾದ ವಿದ್ಯುತ್ ತಂತಿಗಳು ಜೋತಾಡುತ್ತಿರುತ್ತವೆ. ಮಳೆ ಬಂದು ನೀರು ನಿಂತು ಆ ಸ್ಥಳ ಮರಣಕೂಪವಾಗಿರುತ್ತದೆ. ಇಂತ ಲೋಪಗಳ ಬಗ್ಗೆ ತುರ್ತು ಗಮನ ಹರಿಸಬೇಕಿದೆ.

ಕಾಡುಗೋಡಿಯಲ್ಲಿ ಪುಟ್‍ಪಾತ್ ಮೇಲೆಯೇ ವಿದ್ಯುತ್ ಪ್ರಹರಿಸುವ ತಂತಿ ತುಂಡಾಗಿ ಬಿದ್ದಿತ್ತು. ಇದಕ್ಕೆ ಅಧಿಕಾರಿಗಳನ್ನು ಮಾತ್ರವೇ ಹೊಣೆ ಮಾಡಲಾಗಿದೆ. ಸರ್ಕಾರದ ಜವಾಬ್ದಾರಿ ಇಲ್ಲವೇ ಎಂಬ ಪ್ರಶ್ನೆ ಕಾಡುತ್ತಿದೆ. ಉಚಿತ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ ಎಂದಾಕ್ಷಣ, ಹಾದಿ ಬಿದಿಯಲ್ಲೆ ಹೆಣ ಬೀಳುವಂತೆ ನಿರ್ಲಕ್ಷ್ಯತೆ ವಹಿಸುವುದು ತರವೇ ಎಂದು ಪ್ರತಿಭಟನಾಕಾರರು ಕೇಳುತ್ತಿದ್ದಾರೆ.

ಗೃಹಜ್ಯೋತಿಯಿಂದ ಲಕ್ಷಾಂತರ ಕುಟುಂಬಗಳು ಖುಷಿಯಾಗಿರಬಹುದು. ಆದರೆ, ತಂತಿ ತುಳಿದು ಪ್ರಾಣ ಕಳೆದುಕೊಂಡ ಒಬ್ಬ ಮಹಿಳೆ ಮತ್ತು ಮಕ್ಕಳ ಕುಟುಂಬಕ್ಕಾದ ನಷ್ಟ ಅಷ್ಟು ಕುಟುಂಬಗಳ ಖುಷಿಯ ಮುಂದೆ ಶೂನ್ಯವಾಗುತ್ತದೆ. ಕಾಡುಗೋಡಿಯಲ್ಲಿ ಪ್ರಾಣ ಕಳೆದುಕೊಂಡ 23 ವರ್ಷದ ಸೌಂದರ್ಯ ಮತ್ತು ಆಕೆಯ ಒಂಬತ್ತು ತಿಂಗಳು ಕೂಸು ಸುವಿಕ್ಷಾ ಏನು ತಪ್ಪು ಮಾಡಿದ್ದರು ಎಂಬ ಪ್ರಶ್ನೆ ಕಾಡುತ್ತದೆ.

ಜನರ ಪ್ರಾಣಗಳ ಜೊತೆ ಆಟವಾಡುವ ಅಕಾರ ಸರ್ಕಾರಕ್ಕಷ್ಟೆ ಅಲ್ಲ, ಯಾವ ವ್ಯವಸ್ಥೆಗೂ ಇಲ್ಲ ಎಂಬ ಗಂಭೀರತೆಯನ್ನು ಸಚಿವರು, ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರು ಅರ್ಥ ಮಾಡಿಕೊಳ್ಳಬೇಕಿದೆ.

RELATED ARTICLES

Latest News