ಬೆಂಗಳೂರು, ಮಾ.4- ಸಿಲಿಕಾನ್ ಸಿಟಿಯಲ್ಲಿ ಕನ್ನಡದ ಕೊಲೆಯಾಗಿದೆ. ಹೌದು ನಗರದ ಕೆಲವು ಪ್ರದೇಶಗಳ ಸಂಸ್ಥೆಗಳ ನಾಮಫಲಕಗಳಲ್ಲಿ ಕನ್ನಡದ ಅಕ್ಷರಗಳನ್ನು ತಪ್ಪು ತಪ್ಪಾಗಿ ಬರೆಯುವ ಮೂಲಕ ಕೆಲವರು ಕಸ್ತೂರಿ ಕನ್ನಡದ ಕೊಲೆ ಮಾಡಿದ್ದಾರೆ. ಅದರಲ್ಲೂ ಅನ್ಯಭಾಷಿಕರೇ ಹೆಚ್ಚಾಗಿ ವಾಸಿಸುವ ಎಂಜಿ ರಸ್ತೆ, ಕಮರ್ಷಿಯಲ್ ಸ್ಟ್ರೀಟ್, ಏರ್ಪೋರ್ಟ್ ರೋಡ್, ರೆಸಿಡೆನ್ಸಿ ಮತ್ತಿತರ ಪ್ರದೇಶಗಳಲ್ಲಿ ಈ ರೀತಿಯ ಅನ್ಯಾಯವಾಗಿದೆ.
ನಗರದಲ್ಲಿರುವ ಎಲ್ಲಾ ಮಳಿಗೆ, ಕಚೇರಿ ಹಾಗೂ ಸಂಸ್ಥೆಗಳ ನಾಮಫಲಕಗಳಲ್ಲಿ ಕನ್ನಡ ಭಾಷೆಗೆ ಶೇ.60 ರಷ್ಟು ಪ್ರಾಧನ್ಯತೆ ನೀಡಬೇಕು ಎಂಬ ಭರದಲ್ಲಿ ಕೆಲವರು ಈ ಎಡವಟ್ಟು ಮಾಡಿಕೊಂಡಿದ್ದಾರೆ. ಕನ್ನಡ ನಾಮಫಲಕ ಕಡ್ಡಾಯ ಜಾರಿಗೆ ಇನ್ನು ಕೆಲವೇ ದಿನಗಳು ಬಾಕಿ ಇರುವ ಸಂದರ್ಭದಲ್ಲೇ ಕೆಲ ಸಂಸ್ಥೆಯವರು ಇಂಗ್ಲೀಷ್ ಪದಗಳನ್ನು ಗೂಗಲ್ ಅನುವಾದ ಮಾಡಿಕೊಂಡು ಅದೇ ರೀತಿಯ ಕನ್ನಡ ಪದಗಳನ್ನು ನಾಮಫಲಕಗಳಲ್ಲಿ ಹಾಕಿಕೊಂಡಿರುವುದು ಇದೀಗ ಎಲ್ಲೆಡೆ ರಾರಾಜಿಸುತ್ತಿದೆ.
ಇಂತಹ ಪದಗಳನ್ನು ನಾಮಫಲಕಗಳಲ್ಲಿ ಬಳಕೆ ಮಾಡಿ ಕನ್ನಡವನ್ನು ಕೊಲೆ ಮಾಡುವ ಮೊದಲು ತಮ್ಮ ತಪ್ಪನ್ನು ಸರಿಪಡಿಸಿಕೊಂಡು ಅಚ್ಚಕನ್ನಡದ ಕಸ್ತೂರಿ ಪದಗಳನ್ನು ಬಳಕೆ ಮಾಡಿಕೊಳ್ಳುವಂತೆ ಕನ್ನಡಿಗರು ಒತ್ತಾಯಿಸಿದ್ದಾರೆ.