ಬೆಂಗಳೂರು,ಜ.14- ಸಾರ್ವಜನಿಕರ ಹೆಸರಿನಲ್ಲಿ ಕಾನೂನು ಬಾಹಿರವಾಗಿ ಬ್ಯಾಂಕ್ ಖಾತೆಗಳನ್ನು ತೆರೆದು ವಂಚಿಸುತ್ತಿದ್ದ ತಾಯಿ-ಮಗ ಸೇರಿದಂತೆ 12 ಮಂದಿಯ ಗ್ಯಾಂಗ್ ಅನ್ನು ಹುಳಿಮಾವು ಠಾಣೆ ಪೊಲೀಸರು ಬಂಧಿಸಿ 4.89 ಲಕ್ಷ ರೂ. ನಗದು ಸೇರಿದಂತೆ 1 ಕೋಟಿ ರೂ. ಮೌಲ್ಯದ ಮಾಲನ್ನು ವಶಪಡಿಸಿಕೊಂಡಿದ್ದಾರೆ.
ಇಬ್ಬರು ವ್ಯಕ್ತಿಗಳು ಸಾರ್ವಜನಿಕರ ಹೆಸರಿನಲ್ಲಿ ಬ್ಯಾಂಕ್ ಖಾತೆಗಳನ್ನು ತೆರೆಸಿ ಅವರುಗಳ ಹೆಸರಿನಲ್ಲಿಯೇ ಸಿಮ್ ಕಾರ್ಡ್‌ಗಳನ್ನು ಖರೀದಿಸಿ ದುಬೈನಲ್ಲಿರುವ ಮತ್ತೊಬ್ಬ ವ್ಯಕ್ತಿಗೆ ಬ್ಯಾಂಕ್ ಖಾತೆ ಮತ್ತು ಸಿಮ್ ಕಾರ್ಡ್‌ಗಳನ್ನು ಅಕ್ರಮ ಲಾಭಕ್ಕಾಗಿ ಮತ್ತು ಜೂಜಾಟದ ಅಪ್ಲಿಕೇಷನ್‌ಗಳಿಗೆ ನೆರವಾಗಲು ಸಹಾಯ ಮಾಡುತ್ತಿದ್ದರೆಂಬ ಮಾಹಿತಿ ಪೊಲೀಸರಿಗೆ ಲಭಿಸಿದೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ವಿವಿಧ ಆಯಾಮಗಳಲ್ಲಿ ಮಾಹಿತಿಗಳನ್ನು ಕಲೆ ಹಾಕಿ ಜೆ.ಪಿ.ನಗರ 9ನೇ ಹಂತದ ಅಂಜನಾಪುರದ ಅಪಾರ್ಟ್‌ಮೆಂಟ್‌ವೊಂದರ ಬಳಿ ತಾಯಿ-ಮಗನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಈ ಪ್ರಕರಣದಲ್ಲಿ ಭಾಗಿಯಾಗಿರುವುದು ಕಂಡುಬಂದಿದೆ.
ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ 206 ಡೆಬಿಟ್‌ಕಾರ್ಡ್‌ಗಳು, 23 ಮೊಬೈಲ್‌ಗಳು, 531 ಗ್ರಾಂ ಚಿನ್ನಾಭರಣ, 4.89 ಲಕ್ಷ ರೂ. ನಗದು, 9 ವಾಚ್‌ಗಳು, 36 ಸಿಮ್ ಕಾರ್ಡ್‌ಗಳು, 23 ಚೆಕ್‌ಬುಕ್‌ಗಳು, 21 ಪಾಸ್‌ಬುಕ್‌ಗಳು, 1 ಲ್ಯಾಪ್‌ಟಾಪ್, 1 ಆನ್‌ಲೈನ್ ಡಿಜಿಟಲ್ ಪೇಮೆಂಟ್ ರಿಂಗ್, 1 ಕ್ರಿಪ್ಟೋ ಕರೆನ್ಸಿ ಬುಕ್ ಅನ್ನು ವಶಪಡಿಸಿಕೊಂಡಿದ್ದಾರೆ.
ನಂತರ ಪ್ರಕರಣದ ತನಿಖೆ ಮುಂದುವರೆಸಿದ ಪೊಲೀಸರು ಈ ಇಬ್ಬರನ್ನೂ ಸುದೀರ್ಘ ವಿಚಾರಣೆಗೊಳಪಡಿಸಿದಾಗ ಹೆಚ್ಚಿನ ಹಣ ಗಳಿಸುವ ಉದ್ದೇಶದಿಂದ, ಹಣದ ಅವಶ್ಯಕತೆ ಇರುವ ವ್ಯಕ್ತಿಗಳಿಗೆ ಕಮಿಷನ್ ನೀಡುವುದಾಗಿ ನಂಬಿಸಿ ಬ್ಯಾಂಕ್ ಖಾತೆಗಳನ್ನು ತೆರೆಸಿ ಮೋಸ ಮಾಡಿರುವುದಾಗಿ ಹಾಗೂ ಈ ಕೃತ್ಯದಲ್ಲಿ ಇನ್ನೂ ಹತ್ತು ಮಂದಿ ಭಾಗಿಯಾಗಿರುವುದಾಗಿ ಬಾಯ್ಬಿಟ್ಟಿದ್ದಾರೆ.
ಈ ಮಾಹಿತಿ ಮೇರೆಗೆ ತನಿಖೆ ಮುಂದುವರೆಸಿದ ಪೊಲೀಸರು ದೆಹಲಿಯ ರಾಜೇಂದ್ರ ನಗರದಲ್ಲಿ ಮನೆಯೊಂದನ್ನು ಕಚೇರಿಯನ್ನಾಗಿ ಮಾಡಿಕೊಂಡು ವಾಸವಾಗಿದ್ದ ಹತ್ತು ಮಂದಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಆರೋಪಿಗಳು ರಾಜಸ್ಥಾನ, ಗುಜರಾತ್, ದೆಹಲಿ ಮತ್ತಿತರ ಅಂತರರಾಜ್ಯಗಳ ನಿವಾಸಿಗಳು. ಈ ಆರೋಪಿಗಳಿಂದ 36 ಡೆಬಿಟ್ ಕಾರ್ಡ್‌ಗಳು, 35 ಮೊಬೈಲ್‌ಗಳು, ಹತ್ತು ಚೆಕ್‌ಬುಕ್‌ಗಳು, 6 ಲ್ಯಾಪ್‌ಟಾಪ್ ಮತ್ತು 12 ಸಿಮ್ ಕಾರ್ಡ್‌ಗಳನ್ನು ವಶಪಡಿಸಿಕೊಂಡು ಆರೋಪಿಗಳನ್ನು ನಗರಕ್ಕೆ ಕರೆತಂದಿದ್ದಾರೆ. ಈ ಪ್ರಕರಣದ ಪ್ರಮುಖ ಆರೋಪಿ ದುಬೈನಲ್ಲಿ ತಲೆಮರೆಸಿಕೊಂಡಿದ್ದು, ಆತನ ಪತ್ತೆ ಕಾರ್ಯ ಪ್ರಗತಿಯಲ್ಲಿದೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್‌ಕುಮಾರ್ ಸಿಂಗ್ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಬೇರೆ ಬೇರೆ ಕಡೆಗಳಲ್ಲಿಯೂ ಈ ಆರೋಪಿಗಳು ಸುಮಾರು 240 ಕೋಟಿ ರೂ. ವಂಚಿಸಿರುವ ಶಂಕೆ ಪ್ರಾಥಮಿಕ ತನಿಖೆಯಿಂದ ವ್ಯಕ್ತವಾಗಿದ್ದು, ಇದ್ದು, ಈ ನಿಟ್ಟಿನಲ್ಲಿ ತನಿಖೆ ಮುಂದುವರೆದಿದೆ ಎಂದು ಅವರು ಹೇಳಿದರು.
ಈಗಾಗಲೇ ನಾವು ಕೆಲವು ಬ್ಯಾಂಕ್‌ಗಳಲ್ಲಿ ಹಣವನ್ನು ಫೀಜ್ ಮಾಡಿದ್ದೇವೆ. ನಾವು ಆಗಾಗ್ಗೆ ಸಾರ್ವಜನಿಕರಲ್ಲಿ ಮನವಿ ಮಾಡುತ್ತಲೇ ಇರುತ್ತೇವೆ. ಹೆಚ್ಚಿನ ಲಾಭಾಂಶದ ಆಸೆಗೆ ನಂಬಿಕೆ ಇಲ್ಲದವರ ಬಳಿ ಹಣ ಹೂಡಿಕೆ ಮಾಡಿ ಮೋಸ ಹೋಗದಿರಿ, ಎಚ್ಚರಿಕೆಯಿಂದಿರಿ ಎಂದು ಅವರು ಸಲಹೆ ನೀಡಿದ್ದಾರೆ.
