ಬೆಂಗಳೂರು,ಡಿ.9– ವ್ಯಕ್ತಿಯೊಬ್ಬರ ಗಮನ ಬೇರೆಡೆ ಸೆಳೆದು ಅವರ ಸ್ಕೂಟರ್ ಡಿಕ್ಕಿಯಲ್ಲಿದ್ದ 4.50 ಲಕ್ಷ ಹಣ ಕಳ್ಳತನ ಮಾಡಿ ಪರಾರಿಯಾಗಿದ್ದ ಕುಪ್ಪಂ ಗ್ಯಾಂಗ್‌ನ ಆರೋಪಿಯೊಬ್ಬನನ್ನು ಕೆಆರ್‌ಪುರಂ ಠಾಣೆ ಪೊಲೀಸರು ಬಂಧಿಸಿ 4 ಲಕ್ಷ ಹಣ ವಶಪಡಿಸಿಕೊಂಡಿದ್ದಾರೆ.
ತಮಿಳುನಾಡಿನ ತಿರುಚಿಯ ಗಾಂಧೀನಗರ ನಿವಾಸಿ ರಾಜ ಅಲಿಯಾಸ್ ಚಿನ್ನಕುಮಾರ (32) ಬಂಧಿತ ಆರೋಪಿ.ಹೊರಮಾವು ಅಗ್ರಹಾರದ ಪ್ರಕಾಶ್ ಗಾರ್ಡನ್ ನಿವಾಸಿ ಸುಧಾಕರ್ ಎಂಬುವವರು ಕೆಆರ್‌ಪುರಂನ ಟಿಸಿಪಾಳ್ಯದಲ್ಲಿ ಮನೆ ಕಟ್ಟಿಸುತ್ತಿದ್ದಾರೆ.
ಕಳೆದ ಡಿ.19 ರಂದು ಸಂಜೆ 3 ಗಂಟೆ ಸುಮಾರಿಗೆ ಬ್ಯಾಂಕ್‌ವೊಂದರಿಂದ ತಮ ಖಾತೆಯಿಂದ 5 ಲಕ್ಷ ಹಣವನ್ನು ಡ್ರಾ ಮಾಡಿಕೊಂಡು ತಮ ದ್ವಿಚಕ್ರ ವಾಹನದ ಡಿಕ್ಕಿಯಲ್ಲಿಟ್ಟುಕೊಂಡು ಬಿಲ್ಡಿಂಗ್ ಬಳಿ ಸುಧಾಕರ್ ಹೋಗಿದ್ದಾರೆ.ಬ್ಯಾಂಕ್ ಬಳಿಯಿಂದಲೇ ಸುಧಾಕರ್ ಅವರನ್ನು ದರೋಡೆಕೋರರು ಹಿಂಬಾಲಿಸಿಕೊಂಡು ಹೋಗಿದ್ದಾರೆ. ಆದರೆ ಅದು ಸುಧಾಕರ್ ಅವರ ಗಮನಕ್ಕೆ ಬಂದಿಲ್ಲ.
ಡಿಕ್ಕಿಯಲ್ಲಿದ್ದ ಹಣದ ಪೈಕಿ 50 ಸಾವಿರ ಹಣವನ್ನು ಕೆಲಸ ಮಾಡುವ ಕಾರ್ಮಿಕರಿಗೆ ನೀಡಲು ತೆಗೆದುಕೊಂಡಿದ್ದು, ಉಳಿದ 4.50 ಲಕ್ಷ ಹಣವನ್ನು ಡಿಕ್ಕಿಯಲ್ಲಿಯೇ ಇಟ್ಟು ಬಿಲ್ಡಿಂಗ್ ಒಳಗೆ ಅವರು ಹೋಗಿದ್ದಾರೆ.
ಇದೆಲ್ಲವನ್ನೂ ಗಮನಿಸುತ್ತಿದ್ದ ದರೋಡೆಕೋರರು ಕೆಲ ಸಮಯದ ಬಳಿಕ ದ್ವಿಚಕ್ರ ವಾಹನದ ಬಳಿ ಹೋಗಿ ಡಿಕ್ಕಿಯಲ್ಲಿದ್ದ ಹಣವನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದಾರೆ.ಇತ್ತ ಕಟ್ಟಡ ಕಾರ್ಮಿಕರಿಗೆ ಹಣ ನೀಡಿ ವಾಪಸ್ ದ್ವಿಚಕ್ರ ವಾಹನದ ಬಳಿ ಬಂದು ಡಿಕ್ಕಿ ತೆಗೆದು ನೋಡಿದಾಗ ಹಣ ವಿರಲಿಲ್ಲ. ಸುಧಾಕರ್ ಅವರು ಗಾಬರಿಯಾಗಿ ಸುತ್ತಾಮುತ್ತಾ ನೋಡಿದರೂ ಯಾರೂ ಕಾಣಲಿಲ್ಲ.
ತಕ್ಷಣ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಸುತ್ತಾಮುತ್ತಾ ರಸ್ತೆಯಲ್ಲಿರುವ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿ, ದೃಶ್ಯಾವಳಿ ಆಧರಿಸಿ ಖಚಿತ ಮಾಹಿತಿ ಮೇರೆಗೆ ತಮಿಳುನಾಡಿನ ತಿರುಚಿಯ ಗಾಂಧೀನಗರದಿಂದ ಆರೋಪಿಯನ್ನು ಬಂಧಿಸಿ, ವಿಚಾರಣೆ ನಡೆಸಿದಾಗ ತನ್ನ ಐವರು ಸಹಚರರೊಂದಿಗೆ
ಸೇರಿಕೊಂಡು ದ್ವಿಚಕ್ರ ವಾಹನದ ಡಿಕ್ಕಿಯಲ್ಲಿದ್ದ ಹಣ ಕಳವು ಮಾಡಿರುವುದಾಗಿ ಹೇಳಿದ್ದಾನೆ.
ಕಳವು ಮಾಡಿರುವ ಹಣವನ್ನು ಕೋರಮಂಗಲದಲ್ಲಿ ವಾಸವಿರುವ ಪರಿಚಯಸ್ಥರಿಗೆ ನೀಡಿವುದಾಗಿ ಆರೋಪಿ ಹೇಳಿದ್ದು, ಪೊಲೀಸರು ತನಿಖೆ ಮುಂದುವರೆಸಿ 4 ಲಕ್ಷ ಹಣವನ್ನು ವಶಪಡಿಸಿಕೊಂಡಿದ್ದಾರೆ.
ಈ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಐವರು ಸಹಚರರ ಪತ್ತೆಕಾರ್ಯ ಮುಂದುವರೆ ದಿದ್ದು, ತನಿಖೆ ಪ್ರಗತಿಯಲ್ಲಿದೆ. ಈ ಕಾರ್ಯಾಚರಣೆಯನ್ನು ಇನ್‌ಸ್ಪೆಕ್ಟರ್ ರಾಮಮೂರ್ತಿ ಹಾಗೂ ಸಿಬ್ಬಂದಿ ತಂಡ ಯಶಸ್ವಿಯಾಗಿ ಕೈಗೊಂಡು ಆರೋಪಿಯನ್ನು ಬಂಧಿಸಿ ಹಣ ವಶಪಡಿಸಿಕೊಳ್ಳುವಲ್ಲಿ ಯಾಶಸ್ವಿಯಾಗಿದೆ.
