ಬೆಂಗಳೂರು,ಡಿ.3- ವ್ಯಾಪಾರಿಯೊಬ್ಬರ ಮನೆಯ ಮುಂಬಾಗಿಲಿನ ಬೀಗ ಮುರಿದು ಕಳ್ಳತನ ಮಾಡಿ ಪರಾರಿಯಾಗಿದ್ದ ಪರಿಚಯಸ್ಥರಿಬ್ಬರನ್ನು ಹೆಬ್ಬಗೋಡಿ ಠಾಣೆ ಪೊಲೀಸರು ಬಂಧಿಸಿ 1.14 ಕೋಟಿ ನಗದು ಹಾಗೂ 2 ಲಕ್ಷ ಮೌಲ್ಯದ ಚಿನ್ನದ ಸರ, ಕಾರು ವಶಪಡಿಸಿಕೊಂಡಿದ್ದಾರೆ.
ಸುಂಕದಕಟ್ಟೆ ನಿವಾಸಿಯಾಗಿರುವ ಚಿಕ್ಕಪೇಟೆಯ ಬಟ್ಟೆ ವ್ಯಾಪಾರಿ ಶ್ರೀನಿವಾಸಮೂರ್ತಿ (39) ಮತ್ತು ಚಿಕ್ಕಗೊಲ್ಲರಹಟ್ಟಿ ನಿವಾಸಿ ಎಲೆಕ್ಟ್ರೀಷಿಯನ್ ಅರುಣ್‌ಕುಮಾರ್ (39) ಬಂಧಿತರು. ಹುಲಿಮಂಗಲ ಗ್ರಾಮದ ಅಪಾರ್ಟ್‌ಮೆಂಟ್‌ವೊಂದರಲ್ಲಿ ಸುನೀಲ್‌ಕುಮಾರ್ ಎಂಬುವವರು ವಾಸವಾಗಿದ್ದು, ಇವರು ಬೊಮಸಂದ್ರದ ಕಾರ್ಖಾನೆಯೊಂದರಲ್ಲಿ ಡೆಪ್ಯೂಟಿ ಡೈರೆಕ್ಟರ್ ಆಗಿದ್ದಾರೆ. ಇದರ ಜೊತೆಗೆ ಶನಿವಾರ ಹಾಗೂ ಭಾನುವಾರದಂದು ಊರಿಗೆ ಹೋಗಿ ತರಕಾರಿ ಹಾಗೂ ಗುಜುರಿ ವ್ಯಾಪಾರ ಮಾಡುತ್ತಾರೆ.
ಕಳೆದ ಐದು ವರ್ಷಗಳಿಂದ ಸುನಿಲ್‌ಕುಮಾರ್ ಅವರಿಗೆ ಆರೋಪಿ ಶ್ರೀನಿವಾಸಮೂರ್ತಿ ಪರಿಚಯವಿದ್ದು, ಸುನಿಲ್‌ಕುಮಾರ್ ಅವರ ಹಣಕಾಸು ವ್ಯವಹಾರಗಳನ್ನು ತಿಳಿದುಕೊಂಡಿದ್ದಾನೆ. ನ.8 ರಂದು ಸುನಿಲ್‌ಕುಮಾರ್ ಅವರು ಕುಟುಂಬ ಸಮೇತ ಕೋಲಾರಕ್ಕೆ ಹೋಗಿದ್ದಾಗ ಕಳ್ಳರು ಇವರ ಮನೆಯ ಮುಂಬಾಗಿಲಿನ ಬೀಗ ಮುರಿದು ಒಳ ನುಗ್ಗಿ ಬೀರುವಿನಲ್ಲಿದ್ದ ಹಣ ಹಾಗೂ ಚಿನ್ನಾಭರಣಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ.
ಕೋಲಾರದಿಂದ ವ್ಯಾಪಾರಿ ಕುಟುಂಬ ಮನೆಗೆ ಬಂದಾಗ ಕಳ್ಳತನ ನಡೆದಿರುವುದು ಕಂಡು ಪೊಲೀಸರಿಗೆ ದೂರು ನೀಡಿದ್ದಾರೆ.ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ವಿವಿಧ ಆಯಾಮಗಳಲ್ಲಿ ಮಾಹಿತಿಯನ್ನು ಕಲೆಹಾಕಿ ನಾಯಂಡಹಳ್ಳಿ ಸರ್ಕಲ್ ಬಳಿ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಈ ಇಬ್ಬರು ವ್ಯಾಪಾರಿಯ ಪರಿಚಯಸ್ಥರೆಂಬುವುದು ಗೊತ್ತಾಗಿದೆ. ಅವರ ಮನೆಯಲ್ಲಿ ಕಳ್ಳತನ ಮಾಡಿರುವುದಾಗಿ ಹೇಳಿದ್ದಾರೆ.
ಕಳವು ಮಾಡಿದ ಹಣದ ಪೈಕಿ 93 ಲಕ್ಷ ಹಣ, 16 ಗ್ರಾಂ ಚಿನ್ನದ ಸರ, ಕೃತ್ಯಕ್ಕೆ ಬಳಸಿದ್ದ ಕಾರನ್ನು ಚಿಕ್ಕಿಗೊಲ್ಲರಹಟ್ಟಿಯಲ್ಲಿರುವ ಆರೋಪಿ ಅರುಣ್‌ಕುಮಾರ್‌ನ ಮನೆಯಿಂದ ವಶಪಡಿಸಿಕೊಳ್ಳಲಾಗಿದೆ.
ಅದೇ ರೀತಿ ಮತ್ತೊಬ್ಬ ಆರೋಪಿ ಶ್ರೀನಿವಾಸಮೂರ್ತಿ ಯಿಂದ ಚಿಕ್ಕಪೇಟೆಯಲ್ಲಿರುವ ಬಟ್ಟೆ ಅಂಗಡಿಯಲ್ಲಿಟ್ಟಿದ್ದ 7 ಲಕ್ಷ ಹಣ ಹಾಗೂ ಬ್ಯಾಂಕ್‌ನಲ್ಲಿ ಜಮಾ ಮಾಡಿದ್ದ 7 ಲಕ್ಷ ಹಣ ಮತ್ತು ಜಿಗಣಿಯ ತನ್ನ ಸ್ನೇಹಿತೆಗೆ ನೀಡಿದ್ದ 7 ಲಕ್ಷ ಹಣವನ್ನು ವಶಪಡಿಸಿಕೊಳ್ಳುವಲ್ಲಿ ಇನ್‌ಸ್ಪೆಕ್ಟರ್ ಸೋಮಶೇಖರ್ ಹಾಗೂ ಸಿಬ್ಬಂದಿ ತಂಡ ಯಶಸ್ವಿಯಾಗಿದೆ.
ಒಟ್ಟಾರೆ ಈ ಇಬ್ಬರು ಆರೋಪಿಯಿಂದ 1 ಕೋಟಿ 14 ಲಕ್ಷ ನಗದು, 16 ಗ್ರಾಂ ಚಿನ್ನದ ಸರ ಹಾಗೂ ಮಾರುತಿ ಕಾರನ್ನು ವಶಪಡಿಸಿಕೊಳ್ಳಲಾಗಿದೆ.ಈ ಇಬ್ಬರು ಆರೋಪಿಗಳು ಕಳ್ಳತನ ಮಾಡಿದ ನಂತರ ತಮ ಮನೆಗಳಿಗೆ ಹೋಗುವ ಮಾರ್ಗಮಧ್ಯೆ ಮೂರು ವಾಹನಗಳನ್ನು ಬದಲಾಯಿಸಿರುವುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ.
ಅಲ್ಲದೇ ವ್ಯಾಪಾರಿ ಮನೆಯಲ್ಲಿ ಕಳ್ಳತನ ಮಾಡಲು ಹೋದಾಗ ತಮ ಚಹರೆ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಬಾರದೆಂದು ಹೆಲೆಟ್ ಧರಿಸಿ ಹೋಗಿದ್ದಾರೆ. ಹಣ, ಆಭರಣ ಕಳ್ಳತನ ಮಾಡಿದ ನಂತರ ಎಲ್ಲೂ ತಮ ತಮ ಮೊಬೈಲ್‌ಗಳನ್ನು ಬಳಸಿರಲಿಲ್ಲ ಎಂಬುವುದು ಸುದೀರ್ಘ ವಿಚಾರಣೆಯಿಂದ ತಿಳಿದು ಬಂದಿದೆ.
