ಬೆಂಗಳೂರು,ಡಿ.10-ಸಿಸಿಬಿ ಹಾಗೂ ಸಂಜಯನಗರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಹೊರ ರಾಜ್ಯದ ಆರೋಪಿ ಸೇರಿದಂತೆ ನಾಲ್ವರು ಡ್ರಗ್ ಪೆಡ್ಲರ್‌ಗಳನ್ನು ಬಂಧಿಸಿ ಒಟ್ಟು 3 ಕೋಟಿ ಮೌಲ್ಯದ ಹೈಡ್ರೋ ಗಾಂಜಾ ವಶಪಡಿಸಿಕೊಂಡಿದ್ದಾರೆ.
ಕೇರಳದ ಡ್ರಗ್ ಪೆಡ್ಲರ್ ಸೆರೆ:
ಸಿಸಿಬಿ ಪೊಲೀಸರಿಗೆ ದೊರೆತ ಖಚಿತ ಮಾಹಿತಿ ಮೇರೆಗೆ ಅಶೋಕನಗರ ಪೊಲೀಸ್ ಠಾಣೆ ವ್ಯಾಪ್ತಿಯ 2ನೇ ಕ್ರಾಸ್‌ನಲ್ಲಿ ವಾಸವಾಗಿದ್ದ ಕೇರಳ ರಾಜ್ಯದ ಡ್ರಗ್ ಪೆಡ್ಲರ್‌ನನ್ನು ಬಂಧಿಸಿ 2 ಕೋಟಿ ಮೌಲ್ಯದ 2 ಕೆಜಿ ಹೈಡ್ರೋ ಗಾಂಜಾ ವಶಪಡಿಸಿಕೊಂಡಿದ್ದಾರೆ.
ಈತ ಸಣ್ಣ ಮಟ್ಟದ ಬೀದಿ ವ್ಯಾಪಾರ ಮಾಡಿಕೊಂಡಿದ್ದು, ಕೇರಳದಿಂದ ಕಡಿಮೆ ಬೆಲೆಗೆ ಹೈಡ್ರೋ ಗಾಂಜಾವನ್ನು ಖರೀದಿ ಮಾಡಿಕೊಂಡು ನಗರಕ್ಕೆ ಬಂದು ಪರಿಚಿತ ಗ್ರಾಹಕರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದುದ್ದಾಗಿ ವಿಚಾರಣೆ ವೇಳೆ ಹೇಳಿದ್ದಾನೆ. ಆರೋಪಿ ವಿರುದ್ಧ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಇತರೆ ಸಹಚರರ ಪತ್ತೆಕಾರ್ಯ ಮುಂದುವರೆದಿದೆ.
ಮೂವರ ಬಂಧನ:
ಭೂಪಸಂದ್ರದ ರೈಲ್ವೆ ಪ್ಯಾರ್‌ಲರ್ ರಸ್ತೆ ಬದಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಇಬ್ಬರು ಸೇರಿದಂತೆ ಮೂವರನ್ನು ಸಂಜಯನಗರ ಠಾಣೆ ಪೊಲೀಸರು ಬಂಧಿಸಿ 1.5 ಕೋಟಿ ಬೆಲೆಯ 1ಕೆಜಿ 50 ಗ್ರಾಂ ಹೈಡ್ರೋ ಗಾಂಜಾ ಹಾಗೂ 1 ಕಾರನ್ನು ವಶಪಡಿಸಿಕೊಂಡಿದ್ದಾರೆ.
ಕೇರಳ ರಾಜ್ಯದ ಪರಿಚಯಸ್ಥನಿಂದ ಹೈಡ್ರೋ ಗಾಂಜಾವನ್ನು ಕಡಿಮೆ ಬೆಲೆಗೆ ಖರೀದಿ ಮಾಡಿಕೊಂಡು ಬಂದು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದುದ್ದಾಗಿ ವಿಚಾರಣೆ ವೇಳೆ ಇಬ್ಬರು ಆರೋಪಿಗಳು ತಿಳಿಸಿದ್ದು, ಈ ಪ್ರಕರಣದಲ್ಲಿ ಮತ್ತೊಬ್ಬ ಸಹಚರ ಭಾಗಿಯಾಗಿದ್ದಾನೆಂದು ಹೇಳಿದ್ದಾನೆ.
ಈ ಇಬ್ಬರಿಂದ 500 ರೂ. ನಗದು, 266 ಗ್ರಾಂ ಹೈಡ್ರೋ ಗಾಂಜಾ ವಶಪಡಿಸಿಕೊಂಡಿದ್ದಾರೆ. ಆರೋಪಿಗಳ ಮಾಹಿತಿಯಂತೆ ಕಾರ್ಯಾಚರಣೆ ಮುಂದುವರೆಸಿ ಮತ್ತೊಬ್ಬ ಸಹಚರನನ್ನು ಆವಲಹಳ್ಳಿಯ ಬೂದಿಗೆರೆ ರಸ್ತೆಯಲ್ಲಿರುವ ಮಂಡೂರು ಬಳಿ ಕಾರು ಹಾಗೂ ಅದರಲ್ಲಿದ್ದ 118 ಗ್ರಾಂ ಹೈಡ್ರೋ ಗಾಂಜಾ ಸಮೇತ ಬಂಧಿಸಿದ್ದಾರೆ.
ಆರೋಪಿಯನ್ನು ವಿಚಾರಣೆಗೆ ಒಳಪಡಿಸಿ ಆತನ ಮನೆಯಲ್ಲಿಟ್ಟಿದ್ದ 660 ಗ್ರಾಂ ಹೈಡ್ರೋ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.ಈ ಪ್ರಕರಣದಲ್ಲಿ ಆರೋಪಿಗಳಿಗೆ ಹೈಡ್ರೋ ಗಾಂಜಾ ನೀಡುತ್ತಿದ್ದ ಕೇರಳ ರಾಜ್ಯದ ವ್ಯಕ್ತಿಯ ಪತ್ತೆಕಾರ್ಯ ಮುಂದುವರೆದಿದೆ.
