ಬೆಂಗಳೂರು,ಜ.9-ಮಾದನಾಯಕನಹಳ್ಳಿ ಹಾಗೂ ರಾಜಾನುಕುಂಟೆ ಪೊಲೀಸ್ ಠಾಣೆಗಳು ಇಂದಿನಿಂದ ಬೆಂಗಳೂರು ನಗರ ಆಯುಕ್ತರ ವ್ಯಾಪ್ತಿಗೆ ಸೇರಿವೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್‌ಕುಮಾರ್ ಸಿಂಗ್ ಹೇಳಿದರು.
ಮಾಸಿಕ ಕವಾಯತಿನಲ್ಲಿ ಮಾತನಾಡಿದ ಅವರು, ಈ ಎರಡು ಠಾಣೆಗಳು ಈ ಹಿಂದೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿದ್ದವು, ಇದೀಗ ಸರ್ಕಾರ ನಗರ ವ್ಯಾಪ್ತಿಯ ವಾಯುವ್ಯ ವಿಭಾಗಕ್ಕೆ ಈ ಠಾಣೆಗಳನ್ನು ಸೇರಿಸಿದೆ ಎಂದರು.
ಮೂರು ಠಾಣೆಗಳು ಸಹ ಇತ್ತೀಚೆಗೆ ನಗರ ವ್ಯಾಪ್ತಿಗೆ ಸೇರಿವೆ. ಈಗ ಬೆಂಗಳೂರು ಬೃಹತ್ ನಗರವಾಗಿದೆ. ಆದ್ದರಿಂದ ಕೆಲಸದ ಹೊಣೆ, ಜವಾಬ್ದಾರಿ ಇನ್ನೂ ಹೆಚ್ಚಾಗಿದೆ. ಎಲ್ಲರೂ ಇನ್ನೂ ಉತ್ತಮವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಅವರು ಹೇಳಿದರು.
ಉಪವಿಭಾಗ:
ವಾಯುವ್ಯ ವಿಭಾಗದಲ್ಲಿ ಈ ಮೊದಲು ಪೀಣ್ಯಾ ಉಪವಿಭಾಗವಿತ್ತು. ಇದೀಗ ಹೊಸದಾಗಿ ಚಿಕ್ಕಬಾಣವಾರ ಉಪವಿಭಾಗ ರಚಿಸಲಾಗಿದೆ. ಚಿಕ್ಕಬಾಣವಾರ ಉಪವಿಭಾಗಕ್ಕೆ ರಾಜಾನುಕುಂಟೆ ಹಾಗೂ ಪೀಣ್ಯಾ ಉಪವಿಭಾಗಕ್ಕೆ ಮಾದನಾಯಕನಹಳ್ಳಿ ಠಾಣೆಗಳು ಸೇರಿವೆ.
