Thursday, December 11, 2025
Homeಬೆಂಗಳೂರುಕಳ್ಳನನ್ನೇ ದೋಚಿದ ಖದೀಮರು..!

ಕಳ್ಳನನ್ನೇ ದೋಚಿದ ಖದೀಮರು..!

Thief robbed By Thieves

ಬೆಂಗಳೂರು,ಡಿ.10- ಮನೆಯೊಂದರಲ್ಲಿ ಚಿನ್ನಾಭರಣ ಕಳ್ಳತನ ಮಾಡಿಕೊಂಡು ಸ್ಮಶಾನದ ಬಳಿಹೋದ ಕಳ್ಳನ ಮೇಲೆ ಹಲ್ಲೆ ನಡೆಸಿ ಆಭರಣ ಕಿತ್ತುಕೊಂಡು ಪರಾರಿಯಾಗಿದ್ದ ನಾಲ್ವರು ಸೇರಿದಂತೆ ಐದು ಮಂದಿಯನ್ನು ಆವಲಹಳ್ಳಿ ಠಾಣೆ ಪೊಲೀಸರು ಬಂಧಿಸಿ ನಗದು ಸೇರಿದಂತೆ 70 ಲಕ್ಷ ಮೌಲ್ಯದ 447 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

ತಮಿಳುನಾಡು ಮೂಲದ ವಿಷಯ್‌ರಾಜ್‌ (30) ಹಾಗೂ ಮಂಡೂರು ಗ್ರಾಮದ ಮೌನೇಶ್‌, ಸುನೀಲ, ದರ್ಶನ್‌ ಅಲಿಯಾಸ್‌‍ ಅಪ್ಪು ಮತ್ತು ಚಂದನ್‌ ಬಂಧಿತರು.ಅಮೃತಹಳ್ಳಿಯಲ್ಲಿ ವಾಸವಾಗಿದ್ದ ಆರೋಪಿ ವಿಷಯ್‌ ರಾಜ್‌ ಎಂಬಾತ ನ.22 ರಂದು ರಾತ್ರಿ ತನ್ನ ಸ್ಕೂಟರ್‌ನ್ನು ಮಂಡೂರು ಸಶಾನದ ಬಳಿ ನಿಲ್ಲಿಸಿ, ಮನೆಯೊಂದರ ಬೀಗ ಒಡೆದು 330 ಗ್ರಾಂ ಚಿನ್ನಾಭರಣ ಹಾಗೂ ಹಣ ಕಳ್ಳತನ ಮಾಡಿದ್ದಾನೆ.

ಈ ಸಶಾನದ ಬಳಿ ಮದ್ಯ ಸೇವಿಸುತ್ತಿದ್ದ ನಾಲ್ವರು ಸ್ಕೂಟರ್‌ ಗಮನಿಸಿ ಅದರ ಹ್ಯಾಂಡಲ್‌ ಒಡೆದು ಹಾಕಿದ್ದಾರೆ. ಕಳ್ಳತನ ಮಾಡಿದ ಹಣ, ಆಭರಣದೊಂದಿಗೆ ಸ್ಕೂಟರ್‌ ತೆಗೆದುಕೊಳ್ಳಲು ಮತ್ತೆ ಸಶಾನದ ಬಳಿ ಆರೋಪಿ ಹೋಗಿ ಸ್ಕೂಟರ್‌ ಆನ್‌ ಮಾಡಿದಾಗ ಸ್ಟಾರ್ಟ್‌ ಆಗಿಲ್ಲ. ಇದನ್ನು ಗಮನಿಸಿದ ನಾಲ್ವರು ಈತನ ಬಳಿ ಬಂದು ನೀನು ಯಾರೆಂದು ಕೇಳಿ, ಹಲ್ಲೆ ನಡೆಸಿ ಆತನ ಬಳಿ ಇದ್ದ ಕಳ್ಳತನ ಮಾಡಿದ ಆಭರಣಗಳನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ.

ಮುಂದೇನು ಮಾಡುವುದೆಂದು ಯೋಚಿಸುತ್ತಾ ಕೆಲ ಸಮಯ ಅಲ್ಲೇ ಕುಳಿತಿದ್ದಾನೆ. ಬರಿಗೈಯಲ್ಲಿ ಹೇಗೆ ವಾಪಸ್‌‍ ಹೋಗುವುದೆಂದು ಅಂದುಕೊಂಡು ಮತ್ತೆ ಯಾವುದಾದರೂ ಮನೆಯಲ್ಲಿ ಕಳ್ಳತನ ಮಾಡೋಣವೆಂದು ಮತ್ತೆ ಹೋಗಿದ್ದಾನೆ.

ಮಂಡೂರು ಗ್ರಾಮದ ವಿಲ್ಲಾದಲ್ಲಿ ವಾಸವಿರುವ ಕುಟುಂಬವೊಂದು ಧರ್ಮಸ್ಥಳಕ್ಕೆ ಹೋಗಿದ್ದಾಗ ಅವರ ಮನೆಯ ಕಿಟಕಿಯ ಸೈಡ್‌ ಗ್ಲಾಸ್‌‍ ಒಡೆದು ಒಳ ನುಗ್ಗಿ 90 ಗ್ರಾಂ ಚಿನ್ನಾಭರಣ ಹಾಗೂ 1.75 ಲಕ್ಷ ಹಣ ಕಳ್ಳತನ ಮಾಡಿದಲ್ಲದೇ, ವೈದ್ಯರ ಮನೆಯಲ್ಲಿ ಕಳವು ಮಾಡಿ ಪರಾರಿಯಾಗಿದ್ದಾನೆ.

ಧರ್ಮಸ್ಥಳದಿಂದ ವಾಪಸ್‌‍ ಬಂದಾಗ ಕಳ್ಳತನವಾಗಿರುವುದು ಗಮನಿಸಿ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಮೇಡಹಳ್ಳಿಯ ಪಾರ್ವತಿನಗರದಲ್ಲಿ ಚಿನ್ನದ ಸರ ಮಾರಾಟ ಮಾಡಲು ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಮನೆಗಳ್ಳತನ ಮಾಡಿರುವುದಾಗಿ ಹೇಳಿದ್ದಾನೆ.

ಆರೋಪಿ ವಿಷಯರಾಜ್‌ನನ್ನು ಸುದೀರ್ಘ ವಿಚಾರಣೆ ನಡೆಸಿದಾಗ ಮನೆಯೊಂದರಿಂದ ಹಣ, ಆಭರಣ ಕಳ್ಳತನ ಮಾಡಿಕೊಂಡು ಹೋಗುವಾಗ ಸಶಾನದ ಬಳಿ ನಾಲ್ವರು ಕಿತ್ತುಕೊಂಡು ಹೋದರು. ನಂತರ ನಾನು ಮತ್ತೆರಡು ಮನೆಗಳಲ್ಲಿ ಕಳವು ಮಾಡಿರುವುದಾಗಿ ತಿಳಿಸಿದ್ದಾರೆ.
ಈತನ ಮಾಹಿತಿಯಂತೆ ಕಾರ್ಯಾಚರಣೆ ಮುಂದುವರೆಸಿ 28,250 ನಗದು, ದ್ವಿಚಕ್ರ ವಾಹನ,117 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

ಮಂಡೂರು ಗ್ರಾಮದ ನಾಲ್ವರನ್ನು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸಿ ಆರೋಪಿಯೊಬ್ಬನ ವಾಸದ ಮನೆಯಿಂದ 330 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಕಾರ್ಯಾಚರಣೆಯನ್ನು ಇನ್‌ಸ್ಪೆಕ್ಟರ್‌ ರಾಮಕೃಷ್ಣರೆಡ್ಡಿ ಹಾಗೂ ಸಿಬ್ಬಂದಿ ತಂಡ ಕೈಗೊಂಡು ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದೆ.

RELATED ARTICLES

Latest News