Tuesday, December 23, 2025
Homeಬೆಂಗಳೂರುಬೆಂಗಳೂರಿನ ಇಂದಿನ ಕ್ರೈಂ ಸುದ್ದಿಗಳು

ಬೆಂಗಳೂರಿನ ಇಂದಿನ ಕ್ರೈಂ ಸುದ್ದಿಗಳು

Today's Crime News in Bengaluru

ಚಿನ್ನಾಭರಣ ಕಳವು ಮಾಡಿ ಕರಗಿಸಿ ಮಾರಾಟ: ಆಂಧ್ರದ ವ್ಯಕ್ತಿ ಸೆರೆ, 4.60 ಲಕ್ಷ ನಗದು ಸೇರಿ 65 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ

ಬೆಂಗಳೂರು,ಡಿ.23- ಮನೆಗಳಲ್ಲಿ ಚಿನ್ನಾಭರಣ ಕಳ್ಳತನ ಮಾಡಿ ಅವುಗಳನ್ನು ಕರಗಿಸಿ ಗಟ್ಟಿಮಾಡಿ ಮಾರಾಟ ಮಾಡುತ್ತಿದ್ದ ಆಂಧ್ರಪ್ರದೇಶ ಮೂಲದ ಆರೋಪಿಯೊಬ್ಬನನ್ನು ಜೆಪಿ ನಗರ ಠಾಣೆ ಪೊಲೀಸರು ಬಂಧಿಸಿ 4.60 ಲಕ್ಷ ನಗದೂ ಸೇರಿದಂತೆ 65.28 ಲಕ್ಷ ರೂ. ಮೌಲ್ಯದ 478 ಗ್ರಾಂ ಚಿನ್ನಾಭರಣ, 1.550 ಕೆಜಿ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ನಗರದ ನಾಗವಾರದಲ್ಲಿ ವಾಸವಾಗಿದ್ದ ಆಂಧ್ರಪ್ರದೇಶ ಮೂಲದ ಮೆಹಬೂಬ್‌ಖಾನ್‌ ಪಠಾಣ್‌ ಬಂಧಿತ ಆರೋಪಿ. ಈತನ ವಿರುದ್ಧ ತಮಿಳುನಾಡು, ಆಂಧ್ರಪ್ರದೇಶ, ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಒಟ್ಟು 32 ಪ್ರಕರಣಗಳು ದಾಖಲಾಗಿವೆ.ಜೆ.ಪಿ.ನಗರದ 20ನೇ ಮುಖ್ಯರಸ್ತೆಯ ಮನೆಯಲ್ಲಿ ವಾಸವಿರುವ ಮಹಿಳೆ ಮೇಕಪ್‌ಆರ್ಟಿಸ್ಟ್‌ ಕೆಲಸ ಮಾಡಿಕೊಂಡಿದ್ದು ಅವರ ಪತಿ ಸೀರಿಯಲ್‌ ಆಕ್ಟರ್‌ ಆಗಿರುತ್ತಾರೆ.

ಮಾರ್ಚ್‌ 11 ರಂದು ಪತಿಯು ಶೂಟಿಂಗ್‌ಗೆ ಹೋಗಿದ್ದರು. ಮಹಿಳೆ ಹೊಸಕೋಟೆಯಲ್ಲಿರುವ ಅವರ ಅತ್ತೆಯ ಮನೆಯಲ್ಲಿ ಹಬ್ಬಕ್ಕೆಂದು, ಬೀಗವನ್ನು ಹಾಕಿ ಮನೆಯ ಕೀಯನ್ನು ಚಪ್ಪಲಿ ಇಡುವ ಬಾಕ್‌್ಸ ನಲ್ಲಿಟ್ಟು ಹೋಗಿದ್ದಾರೆ. ಪತಿಯು ಮನೆಗೆ ಹೋಗದೆ, ನೇರವಾಗಿ ಅಂದು ರಾತ್ರಿ ಹೊಸಕೋಟೆಗೆ ಹೋಗಿದ್ದು, ಅಲ್ಲಿಂದ ಸಂಬಂಧಿಕರೊಡನೆ ಚೆನ್ನೈಗೆ ಹೋಗಿದ್ದಾರೆ. ಆ ಸಂದರ್ಭದಲ್ಲಿ ಸ್ನೇಹಿತರೊಬ್ಬರಿಗೆ ಕರೆ ಮಾಡಿ ಚಪ್ಪಲಿ ಬಾಕ್ಸ್ ನಲ್ಲಿಟ್ಟಿದ್ದ ಮನೆಯ ಕೀಯನ್ನು ಎತ್ತಿಟ್ಟುಕೊಳ್ಳುವಂತೆ ತಿಳಿಸಿದ್ದಾರೆ.

ಅದರಂತೆ ಸ್ನೇಹಿತನು ಮನೆಯ ಕೀಯನ್ನು ತೆಗೆದುಕೊಂಡಿದ್ದು, ದಂಪತಿ ವಾಪಸ್‌‍ ಮನೆಗೆ ಬಂದಾಗ, ಸ್ನೇಹಿತನು ಮನೆಯ ಕೀಯನ್ನು ಡೋಂಜೋ ಮುಖಾಂತರ ಕಳುಹಿಸಿಕೊಟ್ಟಿದ್ದಾರೆ. ಮನೆಯ ಕೀಯನ್ನು ಪಡೆದುಕೊಂಡು, ಮನೆಯ ಬಾಗಿಲನ್ನು ತೆರೆದು ನೋಡಿದಾಗ ಮನೆಯಲ್ಲಿರುವ ಎಲ್ಲಾ ವಸ್ತುಗಳು ಚೆಲ್ಲಾಪಿಲ್ಲಿಯಾಗಿದ್ದವು. ಕೊಠಡಿಯ ಬೀರುವಿನಲ್ಲಿದ್ದ ಚಿನ್ನಾಭರಣಗಳನ್ನು ಕಳ್ಳತನವಾಗಿತ್ತು. ಬೀರುವಿನಲ್ಲಿದ್ದ ಚಿನ್ನದ ಪೆಂಡೆಂಟ್‌ ಚೈನು, 4 ಉಂಗುರಗಳು ಮತ್ತು ಒಂದು ಜೊತೆ ಕಿವಿಯೊಲೆ ಕಳ್ಳತನವಾಗಿರುವ ಬಗ್ಗೆ ಜೆ.ಪಿ.ನಗರ ಪೊಲೀಸ್‌‍ ಠಾಣೆಗೆ ದೂರು ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ವಿವಿಧ ಆಯಾಮಗಳಲ್ಲಿ ಮಾಹಿತಿಯನ್ನು ಕಲೆಹಾಕಿ, ನಾಗವಾರ ಸರ್ಕಲ್‌ನಲ್ಲಿರುವ ಟೀ ಅಂಗಡಿಯೊಂದರ ಬಳಿ ವ್ಯಕ್ತಿಯೊಬ್ಬನನ್ನು ದ್ವಿಚಕ್ರ ವಾಹನ ಸಮೇತ ವಶಕ್ಕೆ ಪಡೆದು ವಿಚಾರಣೆ ಗೊಳಪಡಿಸಿದಾಗ ಈ ಪ್ರಕರಣದಲ್ಲಿ ಚಿನ್ನಾಭರಣವನ್ನು ಕಳವು ಮಾಡಿರುವುದಾಗಿ ಹೇಳಿದ್ದಾನೆ.

ಆರೋಪಿಯನ್ನು ಸುದೀರ್ಘ ವಿಚಾರಣೆ ನಡೆಸಿದಾಗ ತಮಿಳುನಾಡು, ಆಂಧ್ರಪ್ರದೇಶ, ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿಯೂ ಸಹ ಚಿನ್ನಾಭರಣ ಕಳವು ಮಾಡಿರುವುದು ಗೊತ್ತಾಗಿದೆ. ಆರೋಪಿಯು ಹಗಲು ವೇಳೆ ಬೈಕ್‌ನಲ್ಲಿ ನಗರದ ವಿವಿಧ ಪ್ರದೇಶಗಳಲ್ಲಿ ಸುತ್ತಾಡುತ್ತ ಬೀಗ ಹಾಕಿರುವ ಮನೆಗಳನ್ನು ಗುರುತಿಸಿ ರಾತ್ರಿ ವೇಳೆ ಕಳ್ಳತನ ಮಾಡುತ್ತಿದ್ದನು. ಕಳವು ಮಾಡಿರುವ ಆಭರಣಗಳನ್ನು ತನ್ನ ನಾಗವಾರದ ಮನೆಗೆ ತೆಗೆದುಕೊಂಡು ಹೋಗಿ ಅವುಗಳನ್ನು ಕರಗಿಸಿ ಗಟ್ಟಿಯಾಗಿಸಿ ನಂತರ ಮಾರಾಟ ಮಾಡುತ್ತಿದ್ದುದ್ದು ಪೊಲೀಸರ ವಿಚಾರಣೆಯಿಂದ ತಿಳಿದು ಬಂದಿದೆ.

ಕಳವು ಮಾಡಿದ ಚಿನ್ನಾಭರಣಗಳನ್ನು ನಾಗವಾರದ ಸಾರಾಯಿ ಪಾಳ್ಯದಲ್ಲಿರುವ ತನ್ನ ವಾಸದ ಮನೆಯಲ್ಲಿಟ್ಟಿರುವುದಾಗಿ ಹಾಗೂ ಚೆನ್ನರಾಯಪಟ್ಟಣದಲ್ಲಿರುವ ಜ್ಯೂವೆಲರಿ ವರ್ಕ್‌್ಸಶಾಪ್‌ನಲ್ಲಿ ಕೊಟ್ಟಿರುವುದಾಗಿ ತಿಳಿಸಿದ್ದಾನೆ. ಆತನ ಮಾಹಿತಿಯಂತೆ ಆರೋಪಿಯ ಮನೆಯಿಂದ 258 ಗ್ರಾಂ ಚಿನ್ನದಗಟ್ಟಿ, 10 ಗ್ರಾಂ ಚಿನ್ನದ ಚೈನ್‌, 1 ಕೆ.ಜಿ 550 ಗ್ರಾಂ ಬೆಳ್ಳಿಯ ಗಟ್ಟಿಗಳು, 4.60 ನಗದು ಮತ್ತು ಜ್ಯೂವೆಲರಿ ವರ್ಕ್‌್ಸಶಾಪ್‌ ಮಾಲೀಕನಿಂದ 210 ಗ್ರಾಂ ಚಿನ್ನದ ಗಟ್ಟಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಇವುಗಳ ಒಟ್ಟು ಮೌಲ್ಯ 65.28 ಲಕ್ಷ ರೂಗಳೆಂದು ಅಂದಾಜಿಸಲಾಗಿದೆ.
ಆರೋಪಿಯ ಬಂಧನದಿಂದ ಜೆಪಿ ನಗರ, ಬಾಲ್ಕಿ , ಮಳವಳ್ಳಿ , ಹುಣಸೂರು ಠಾಣೆಯಲ್ಲಿ ದಾಖಲಾಗಿದ್ದ ತಲಾ 1ಹಾಗೂ ಸಂತೆಮಾರಳ್ಳಿ ಠಾಣೆಯ 2 ಕಳವು ಪ್ರಕರಣ ಸೇರಿದಂತೆ ಒಟ್ಟು 7 ಕಳವು ಪ್ರಕರಣಗಳನ್ನು ಪತ್ತೆಹಚ್ಚುವಲ್ಲಿ ಇನ್‌್ಸ ಪೆಕ್ಟರ್‌ ಹರೀಶ್‌ ಹಾಗೂ ಸಿಬ್ಬಂದಿಗಳ ತಂಡ ಯಶಸ್ವಿಯಾಗಿದೆ.

ಕಲ್ಯಾಣ ಮಂಟಪಗಳಲ್ಲಿ ಆಭರಣ ಕಳ್ಳತನ-ಶಿಕ್ಷಕಿ ಸೆರೆ

ಬೆಂಗಳೂರು,ಡಿ.23- ಶುಭ ಸಮಾರಂಭ ನಡೆಯುವ ಕಲ್ಯಾಣಮಂಟಪಗಳಲ್ಲಿ ಸಂಬಂಧಿಕರಂತೆ ಹೋಗಿ ಚಿನ್ನಾಭರಣ,ಹಣ ಕಳವು ಮಾಡುತ್ತಿದ್ದ ಶಿಕ್ಷಕಿಯನ್ನು ಬಸವನಗುಡಿ ಠಾಣೆ ಪೊಲೀಸರು ಬಂಧಿಸಿ 32 ಲಕ್ಷ ರೂ. ಮೌಲ್ಯದ 262 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಶಿವಮೊಗ್ಗ ಮೂಲದ ರೇವತಿ (46) ಬಂಧಿತ ಆರೋಪಿತೆ. ಈಕೆ ಕೆಆರ್‌ಪುರದಲ್ಲಿ ವಾಸವಾಗಿದ್ದು, ಪಾರ್ಟ್‌ಟೈಮ್‌ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು.

ಚಿಕ್ಕಲಸಂದ್ರದ ಮಂಜುನಾಥ ನಗರದಲ್ಲಿ ವಾಸವಿರುವ ನಿವಾಸಿಯೊಬ್ಬರು ನ.23 ರಂದು ಬೆಳಿಗ್ಗೆ ಸಂಬಂಧಿಕರ ಮದುವೆಗೆಂದು ತಾಯಿಯ ಜೊತೆ ಬಸವನಗುಡಿಯಲ್ಲಿರುವ ಕಲ್ಯಾಣಮಂಟಪವೊಂದಕ್ಕೆ ಹೋಗಿ ಕೊಠಡಿಯೊಂದರಲ್ಲಿ ಬ್ಯಾಗ್‌ ಇಟ್ಟಿದ್ದಾರೆ.ಕಾರ್ಯಕ್ರಮವನ್ನು ಮುಗಿಸಿಕೊಂಡು ನಂತರ ಮನೆಗೆ ಹೋಗಿ ಬ್ಯಾಗ್‌ ನೋಡಿದಾಗ ಅದರಲ್ಲಿಟ್ಟಿದ್ದ ಸುಮಾರು 3 ಲಕ್ಷ ಬೆಲೆ ಬಾಳುವ ಒಂದು ಚಿನ್ನದ ಸರ ಹಾಗೂ ಆರ್ಟಿಫೀಷಿಯಲ್‌ ಗೆಜ್ಜೆ ಕಳುವಾಗಿರುವುದು ಗೊತ್ತಾಗಿದೆ.

ತಕ್ಷಣ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣದ ತನಿಖೆಯನ್ನು ಮುಂದುವರೆಸಿದ ಪೊಲೀಸರು, ಕಲ್ಯಾಣ ಮಂಟಪದ ಸುತ್ತಮುತ್ತಲಿನ ರಸ್ತೆಗಳಲ್ಲಿರುವ ಸಿಸಿ ಕ್ಯಾಮರಾಗಳನ್ನು ಪರಿಶೀಲಿಸಿ ಮಾಹಿತಿಯನ್ನು ಕಲೆಹಾಕಿ ಕೆ.ಆರ್‌.ಪುರದ ಉದಯನಗರದಲ್ಲಿ, ವಾಸವಾಗಿದ್ದ ಮಹಿಳೆಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಕಲ್ಯಾಣ ಮಂಟಪದಲ್ಲಿ ಕಳ್ಳತನ ಮಾಡಿರುವುದಾಗಿ , ಅಲ್ಲದೆ, ಮತ್ತೆರಡು ಕಲ್ಯಾಣಮಂಟಪಗಳಲ್ಲಿಯೂ ಸಹ ಚಿನ್ನಾಭರಣಗಳನ್ನು ಕಳವು ಮಾಡಿರುವುದಾಗಿ ತಿಳಿಸಿದ್ದಾಳೆ. ಕಳವು ಮಾಡಿದ ಚಿನ್ನಾಭರಣಗಳನ್ನು ಮನೆಯಲ್ಲಿಟ್ಟಿರುವುದಾಗಿ ಮತ್ತು ಕಾಡುಬೀಸನಹಳ್ಳಿಯಲ್ಲಿರುವ ಬ್ಯಾಂಕ್‌ವೊಂದರಲ್ಲಿ ಗೋಲ್‌್ಡ ಲೋನ್‌ ಮಾಡಿಸಿ, ಹಣ ಪಡೆದಿರುವುದಾಗಿ ಹೇಳಿದ್ದಾಳೆ.ಆಕೆಯ ಮಾಹಿತಿಯಂತೆ ಒಟ್ಟು 262 ಗ್ರಾಂ ಚಿನ್ನಾಭರಣಗಳನ್ನು ವಶಕ್ಕೆ ಪಡೆದುಕೊಳ್ಳುವಲ್ಲಿ ಇನ್‌ಸ್ಪೆಕ್ಟರ್‌ ಸವಿತ ಹಾಗೂ ಸಿಬ್ಬಂದಿ ತಂಡ ಈ ಪ್ರಕರಣವನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದೆ.

ಜೈಲಿನೊಳಗೆ ಸ್ನೇಹ -ಹೊರಬಂದು ಕಳ್ಳತನ, ಮೂವರ ಸೆರೆ: 257 ಗ್ರಾಂ ಚಿನ್ನಾಭರಣ ಜಪ್ತಿ

ಬೆಂಗಳೂರು,ಡಿ.23-ಜೈಲಿನೊಳಗೆ ಸ್ನೇಹಿತರಾಗಿ ಹೊರ ಬಂದ ನಂತರ ಒಟ್ಟಾಗಿ ಸೇರಿ ಮನೆಗಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಸಿದ್ದಾಪುರ ಠಾಣೆ ಪೊಲೀಸರು ಬಂಧಿಸಿ 31.27 ಲಕ್ಷ ಮೌಲ್ಯದ 257 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.ತಿಲಕ್‌ನಗರದ ಬಾಲರಾಜ್‌ (45), ಆಡುಗೋಡಿಯ ಗೌರವ್‌ (21) ಮತ್ತು ಪ್ರವೀಣ್‌ (26) ಬಂಧಿತ ಆರೋಪಿಗಳು. ಆರೋಪಿ ಬಾಲರಾಜ್‌ ವಿರುದ್ಧ 21 ಪ್ರಕರಣಗಳು ದಾಖಲಾಗಿವೆ.

ಬಾಲರಾಜ್‌ ಹಳೆ ಆರೋಪಿಯಾಗಿದ್ದು, ಈತ ಜೈಲಿನಲ್ಲಿದ್ದಾಗ ಗೌರವ್‌ ಹಾಗೂ ಪ್ರವೀಣ್‌ ಪರಿಚಯವಾಗಿದ್ದಾರೆ. ಈ ಮೂವರು ಜೈಲಿನಿಂದ ಬಿಡುಗಡೆಯಾದ ನಂತರ ಹೊರ ಬಂದು ಒಟ್ಟಿಗೆ ಸೇರಿ ಕಳ್ಳತನ ಮಾಡುತ್ತಿದ್ದುದ್ದು ಪೊಲೀಸರ ವಿಚಾರಣೆಯಿಂದ ತಿಳಿದು ಬಂದಿದೆ.

ಬೈರಸಂದ್ರ 1ನೇ ಕ್ರಾಸ್‌‍ ನಿವಾಸಿಯೊಬ್ಬರು ನ.17 ರಂದು ಮುಂಜಾನೆ ಮನೆಯ ಹತ್ತಿರದಲ್ಲಿದ್ದ ಸ್ನೇಹಿತನ ಮನೆಗೆ ಹೋಗಿದ್ದರು. ಬೆಳಿಗ್ಗೆ 8.30 ರ ಸುಮಾರಿಗೆ ಮನೆಯ ಬಳಿ ಇವರ ಭಾವನವರು ಹೋದಾಗ ಮನೆಯ ಬಾಗಿಲ ಬೀಗವನ್ನು ಮುರಿದಿರುವುದು ಗಮನಿಸಿ ತಕ್ಷಣ ಕರೆ ಮಾಡಿ ವಿಷಯ ತಿಳಿಸಿದ್ದಾರೆ.ಕೂಡಲೇ ಮನೆಗೆ ಬಂದು ನೋಡಿದಾಗ ಮುಂಬಾಗಿಲಿನ ಬೀಗ ಮುರಿದಿರುವುದು ಕಂಡು ಒಳಗೆ ಹೋದಾಗ ಕೊಠಡಿಯ ಬೀರುವಿನಲ್ಲಿಟ್ಟಿದ್ದ ಚಿನ್ನಾಭರಣ, ಬೆಳ್ಳಿಯ ವಸ್ತುಗಳು ಹಾಗೂ 1 ಲಕ್ಷ ಹಣ ಕಳುವಾಗಿರುವುದು ಕಂಡು ಬಂದಿದೆ.

ತಕ್ಷಣ ಅವರು ಸಿದ್ದಾಪುರ ಪೊಲೀಸ್‌‍ ಠಾಣೆಗೆ ದೂರು ನೀಡಿದ್ದಾರೆ. ಕಳವು ಪ್ರಕರಣ ದಾಖಲಿಸಿಕೊಂಡು ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೈಗೊಂಡು, ಹಳೆ ಆರೋಪಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿ, ಒಬ್ಬ ರೂಡಿಗತ ಆರೋಪಿ ಬಗ್ಗೆ ಫಿಂಗರ್‌ ಪ್ರಿಂಟ್‌ ತಜ್ಞರಿಂದಲೂ ಸಹ ಅಭಿಪ್ರಾಯವನ್ನು ಪಡೆದು ಖಚಿತ ಪಡಿಸಿಕೊಂಡಿದ್ದಾರೆ.ಈ ಆರೋಪಿಯನ್ನು ಪತ್ತೆಮಾಡಲು ವಿಶೇಷ ತಂಡವನ್ನು ರಚಿಸಿದ್ದರು. ಈ ತಂಡವು ಕಾರ್ಯಾಚರಣೆ ನಡೆಸಿ ರೂಡಿಗತ ಆರೋಪಿಯನ್ನು ತಿಲಕ್‌ನಗರದ ಬಿಟಿಬಿ ಪ್ರದೇಶದಲ್ಲಿ 20 ಗ್ರಾಂ ಚಿನ್ನದ ನೆಕ್ಲೇಸ್‌‍ ಸಮೇತ ವಶಕ್ಕೆ ಪಡೆದಿದ್ದಾರೆ.

ಆರೋಪಿಯನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಮತ್ತಿಬ್ಬರು ಸಹಚರರೊಂದಿಗೆ ಸೇರಿಕೊಂಡು ಚಿನ್ನಾಭರಣ, ಬೆಳ್ಳಿಯ ವಸ್ತುಗಳು ಹಾಗೂ ನಗದನ್ನು ಕಳವು ಮಾಡಿರುವುದಾಗಿ ಹೇಳಿದ್ದಾನೆ.ತನಿಖೆಯನ್ನು ಮುಂದುವರೆಸಿದ ಪೊಲೀಸರು ಈ ಪ್ರಕರಣದ ಮತ್ತೊಬ್ಬ ಸಹಚರನನ್ನು ಕೋರಮಂಗಲದ ಕ್ಲಬ್‌ ಬಳಿ ಮೊಬೈಲ್‌ ಸಮೇತ ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಕಳವು ಮಾಡಿದ ಚಿನ್ನಾಭರಣಗಳನ್ನು ದೊಡ್ಡಮನಿಗೆ ನೀಡಿದ್ದಾಗಿ ಅವರು ಎಚ್‌ಎಸ್‌‍ಆರ್‌ ಲೇಔಟ್‌ನಲ್ಲಿರುವ ಎರಡು ಜ್ಯೂವೆಲರಿ ಅಂಗಡಿಯಲ್ಲಿ ಮಾರಾಟ ಮಾಡಿರುವುದಾಗಿ ತಿಳಿಸಿದ್ದಾನೆ.

ಈತನ ಮಾಹಿತಿಯಂತೆ ಜ್ಯೂವೆಲರಿ ಅಂಗಡಿಗಳಿಂದ 237 ಗ್ರಾಂ ಚಿನ್ನದ ಗಟ್ಟಿಯನ್ನು ವಶಪಡಿಸಿಕೊಂಡಿದ್ದಾರೆ.ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಮತ್ತೊಬ್ಬ ಸಹಚರನನ್ನು ಕೇಂದ್ರ ಕಾರಾಗೃಹದಿಂದ ಬಾಡಿವಾರೆಂಟ್‌ ಮುಖೇನ ಪೊಲೀಸ್‌‍ ಅಭಿರಕ್ಷೆಗೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ಕಾರ್ಯಾಚರಣೆಯನ್ನು ಇನ್‌್ಸಪೆಕ್ಟರ್‌ ಮೊಹನ್‌.ಡಿ.ಪಟೇಲ್‌ ಹಾಗೂ ಸಿಬ್ಬಂದಿಗಳ ತಂಡ ಕೈಗೊಂಡು ಆರೋಪಿಗಳನ್ನು ಬಂಧಿಸಿ ಪ್ರಕರಣವನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದೆ.

ಎಂಜಿನಿಯರಿಂಗ್‌ ವಿದ್ಯಾರ್ಥಿಗಳ ಅಡ್ಡಗಟ್ಟಿ ದರೋಡೆ

ಬೆಂಗಳೂರು,ಡಿ.23- ನಾಲ್ವರು ಎಂಜಿನಿಯರಿಂಗ್‌ ವಿದ್ಯಾರ್ಥಿಗಳನ್ನು ಅಡ್ಡಗಟ್ಟಿ ಹಣ ಹಾಗೂ ಮೊಬೈಲ್‌ಗಳನ್ನು ದರೋಡೆ ಮಾಡಿ ಪರಾರಿಯಾಗಿದ್ದವರ ಪೈಕಿ ಒಬ್ಬ ದರೋಡೆಕೋರನನ್ನು ಆವಲಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ನಗರದ ಖಾಸಗಿ ಎಂಜಿನಿಯರಿಂಗ್‌ ಕಾಲೇಜೊಂದರ ಇಬ್ಬರು ವಿದ್ಯಾರ್ಥಿಗಳು ಹಾಗೂ ಆಂಧ್ರದ ಇಬ್ಬರು ಎಂಜಿನಿಯರಿಂಗ್‌ ವಿದ್ಯಾರ್ಥಿಗಳು ಎರಡು ಬೈಕ್‌ಗಳಲ್ಲಿ ಹೊಸಕೋಟೆಗೆ ಹೋಗಿ ಬಿರಿಯಾನಿ ಸೇವಿಸಿ ವಾಪಸ್‌‍ ಬರುತ್ತಿದ್ದರು. ಆ ವೇಳೆ ಮಾರ್ಗ ತಪ್ಪಿ ಬೇರೆ ರಸ್ತೆಯಲ್ಲಿ ಬರುತ್ತಿದ್ದಾಗ ಐದಾರು ಬೈಕ್‌ಗಳಲ್ಲಿ ಬಂದ ಹತ್ತರಿಂದ ಹನ್ನೆರಡು ಮಂದಿ ದರೋಡೆಕೋರರು ಈ ನಾಲ್ವರನ್ನು ಅಡ್ಡಗಟ್ಟಿ ಬೆದರಿಸಿ 3 ಮೊಬೈಲ್‌ಗಳನ್ನು, 40 ಸಾವಿರ ಹಣ ಕಿತ್ತುಕೊಂಡಿದ್ದಲ್ಲದೇ 1.10 ಲಕ್ಷ ಹಣವನ್ನು ಫೋನ್‌ ಪೇ ಮೂಲಕ ಹಾಕಿಸಿಕೊಂಡು ಪರಾರಿಯಾಗಿದ್ದಾರೆ.ಈ ಬಗ್ಗೆ ವಿದ್ಯಾರ್ಥಿಗಳು ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಒಬ್ಬ ದರೋಡೆಕೋರನನ್ನು ಬಂಧಿಸಿ ಉಳಿದವರಿಗೆ ಪತ್ತೆ ಕಾರ್ಯ ಮುಂದುವರೆಸಿದ್ದಾರೆ.

ಕೇರಳದ ಇಬ್ಬರು ಡ್ರಗ್‌ ಪೆಡ್ಲರ್‌ರ‍ಸ ಬಂಧನ : 26.90 ಲಕ್ಷ ಮೌಲ್ಯದ ಹೈಡ್ರೋ ಗಾಂಜಾ ಜಪ್ತಿ
ಬೆಂಗಳೂರು,ಡಿ.23- ನಗರದಲ್ಲಿ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಕೇರಳ ರಾಜ್ಯದ ಇಬ್ಬರು ಡ್ರಗ್‌ ಪೆಡ್ಲರ್‌ಗಳನ್ನು ಜಾಲಹಳ್ಳಿ ಠಾಣೆ ಪೊಲೀಸರು ಬಂಧಿಸಿ 26.90 ಲಕ್ಷ ಮೌಲ್ಯದ 247 ಗ್ರಾಂ ಹೈಡ್ರೊ ಗಾಂಜಾ ಮತ್ತು 19 ಗ್ರಾಂ ಎಂಡಿಎಂಎ ವಶಪಡಿಸಿಕೊಂಡಿದ್ದಾರೆ.ಕೇರಳದ ಕೊನ್ನಾರಿ ನಿವಾಸಿ ನಿಜಿಲ್‌ ರಾಜ್‌ (30) ಮತ್ತು ಮತಿರಾಮಪಲ್ಲಿ ನಿವಾಸಿ ಮೆಲ್ವೀನ್‌ ಮೋನ್ಸಿ (23) ಬಂಧಿತರು.

ಕಾಳಿಂಗರಾವ್‌ ಸರ್ಕಲ್‌ ಬಳಿ ಇಬ್ಬರು ವ್ಯಕ್ತಿಗಳು ಮಾದಕ ವಸ್ತು ಹೈಡ್ರೋ ಗಾಂಜಾ ಮತ್ತು ಎಂಡಿಎಂಎ ಇಟ್ಟುಕೊಂಡು ಗಿರಾಕಿಗಳಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದೆ.ಖಚಿತ ಮಾಹಿತಿಯನ್ನಾಧರಿಸಿ ಪೊಲೀಸರು ಸ್ಥಳದ ಮೇಲೆ ದಾಳಿ ಮಾಡಿ, ಕೇರಳ ರಾಜ್ಯದ ಇಬ್ಬರು ಡ್ರಗ್‌ ಪೆಡ್ಲರ್‌ಗಳನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.

ಹೆಚ್ಚಿನ ಹಣಗಳಿಸುವ ಉದ್ದೇಶದಿಂದ ಅಪರಿಚಿತ ವ್ಯಕ್ತಿಯೊಬ್ಬನಿಂದ ಕಡಿಮೆ ಬೆಲೆಗೆ ಮಾದಕ ವಸ್ತುವಾದ ಹೈಡ್ರೊ ಗಾಂಜಾ ಮತ್ತು ಎಂಡಿಎಂಎ ಖರೀದಿಸಿ, ಹೆಚ್ಚಿನ ಬೆಲೆಗೆ ಗಿರಾಕಿಗಳಿಗೆ ಮಾರಾಟ ಮಾಡುತ್ತಿರುವುದಾಗಿ ಹೇಳಿದ್ದಾರೆ. ಆರೋಪಿಗಳಿಂದ 247 ಗ್ರಾಂ ಹೈಡ್ರೊಗಾಂಜಾ ಮತ್ತು 19 ಗ್ರಾಂ ಎಂಡಿಎಂಎ ಅನ್ನು ವಶಪಡಿಸಿಕೊಳ್ಳಲಾಗಿದ್ದು, ಇವುಗಳ ಒಟ್ಟು ಮೌಲ್ಯ 26.90ಲಕ್ಷ ರೂ.ಗಳೆಂದು ಅಂದಾಜಿಸಲಾಗಿದೆ.ಇನ್‌್ಸಪೆಕ್ಟರ್‌ ಶಿವಕುಮಾರ್‌ ಹಾಗೂ ಸಿಬ್ಬಂದಿಗಳ ತಂಡ ಆರೋಪಿಗಳನ್ನು ಬಂಧಿಸಿ ಮಾಲನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

RELATED ARTICLES

Latest News